ಕೊಲಂಬೋ: ಏಷ್ಯಾ ಕಪ್-2023 ಕೂಟದಲ್ಲಿ ಬಹು ನಿರೀಕ್ಷಿತ ಭಾರತ-ಪಾಕಿಸ್ಥಾನ ಫೈನಲ್ ಕಾದಾಟಕ್ಕೆ ಹಾಲಿ ಚಾಂಪಿಯನ್ ಶ್ರೀಲಂಕಾ ತಡೆಯೊಡ್ಡಿದೆ.
ವಿಕೆಟ್ ಕೀಪರ್ ಕುಸಲ್ ಮೆಂಡಿಸ್ (91) ಅವರ ಜವಾಬ್ದಾರಿಯುತ ಬ್ಯಾಟಿಂಗ್ ಮತ್ತು ಕೊನೆ ಹಂತದಲ್ಲಿ ಸಮರ ವಿಕ್ರಮ (48) ಮತ್ತು ಚರಿತ್ ಅಸಲಂಕ (49) ಅವರ ಅಜೇಯ ಬ್ಯಾಟಿಂಗ್ ನೆರವಿನಿಂದ ಅಂತಿಮ ಓವರ್ ನಲ್ಲಿ ಗೆದ್ದು ಬೀಗಿದ ಶ್ರೀಲಂಕಾ ಫೈನಲ್ ಗೆ ಲಗ್ಗೆಯಿಟ್ಟಿತು.
ನಿನ್ನೆ (ಸೆ.14) ಇಲ್ಲಿನ ಆರ್. ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆದ ಡೂ-ಆರ್-ಡೈ ಪಂದ್ಯದಲ್ಲಿ ಬಲಿಷ್ಠ ಪಾಕಿಸ್ಥಾನವನ್ನು ಸೋಲಿಸುವ ಮೂಲಕ ಹಾಲಿ ಏಷ್ಯಾಕಪ್ ಚಾಂಪಿಯನ್ ಶ್ರೀಲಂಕಾ ಫೈನಲ್ ಗೆ ಲಗ್ಗೆಯಿಟ್ಟಿದ್ದು, ಭಾನುವಾರ (ಸೆ.17)ರಂದು ನಡೆಯುವ ಫೈನಲ್ ನಲ್ಲಿ ಅದು ಭಾರತವನ್ನು ಎದುರಿಸಲಿದೆ.
ಈ ಪಂದ್ಯಕ್ಕೂ ವರುಣನ ಕಾಟ ತಪ್ಪಿರಲಿಲ್ಲ. ಮೊದಲು ಬ್ಯಾಟಿಂಗ್ ನಡೆಸಿದ ಪಾಕ್ (DLS) ನಿಗದಿತ 42 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 252 ರನ್ ಗಳಿಸಿತು. ಈ ಗುರಿಯನ್ನು ಬೆನ್ನಟ್ಟಿದ ಶ್ರೀಲಂಕಾ 42 ಓವರ್ ಗಳಲ್ಲಿ ಗುರಿಮುಟ್ಟಿ ಫೈನಲ್ ಗೆ ಲಗ್ಗೆ ಇಟ್ಟಿತು.
ಲಂಕನ್ನರಿಗೆ ಕೊನೆಯ 12 ಓವರ್ ಗಳಲ್ಲಿ 12 ರನ್ ಅಗತ್ಯವಿತ್ತು, ಈ ವೇಳೆ ಎರಡು ವಿಕೆಟ್ ಬೀಳುವ ಮೂಲಕ ಲಂಕಾ ಕೊಂಚ ಸಂಕಷ್ಟಕ್ಕೆ ಸಿಲುಕಿತು. ಇನ್ನು, ಜಮಾನ್ ಖಾನ್ ಎಸೆದ ಕೊನೆಯ ಓವರ್ ನ ಅಂತಿಮ ಎರಡು ಎಸೆತಗಳಲ್ಲಿ ಆರು ರನ್ ಅಗತ್ಯವಿತ್ತು.
ಇದರಲ್ಲಿ ಚರಿತ್ ಅಸಲಂಕಾ ಒಂದು ಫೋರ್ ಬಾರಿಸಿ ಕೊನೆಯ ಎಸೆತದಲ್ಲಿ 2 ರನ್ ಗಳಿಸುವ ಮೂಲಕ ಶ್ರೀಲಂಕಾ ಫೈನಲ್ ಪ್ರವೇಶಿಸಲು ಕಾರಣರಾದರು.
ಇದಕ್ಕೂ ಮೊದಲು ಪಾಕ್ ಬ್ಯಾಟಿಂಗ್ ಸರದಿಯಲ್ಲಿ ಮಹಮ್ಮದ್ ರಿಜ್ವಾನ್ ಮತ್ತು ಇಫ್ತಿಕಾರ್ ಅಹಮ್ಮದ್ ಅವರ 6 ವಿಕೆಟ್ ಜೊತೆಯಾಟದಲ್ಲಿ 108 ರನ್ ಹರಿದುಬಂದ ಕಾರಣ ತಂಡ ಉತ್ತಮ ಮೊತ್ತ ಪೇರಿಸಲು ಕಾರಣರಾದರು.
ಸಂಕ್ಷಿಪ್ತ ಸ್ಕೋರ್: ಪಾಕಿಸ್ಥಾನ – 42 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 252 (ಅಬ್ದುಲ್ ಶಫೀಕ್ 52, ಬಾಬರ್ ಅಜಂ 29, ಮಹಮ್ಮದ್ ರಿಜ್ವಾನ್ ಔಟಾಗದೇ 86, ಇಫ್ತಿಕಾರ್ ಮಹಮ್ಮದ್ 47 – ಮತೀಶ ಪತಿರಣ 65 ಕ್ಕೆ 3)
ಶ್ರೀಲಂಕಾ 252/8 – ಕುಸಲ್ ಮೆಂಡಿಸ್- 91, ಚರಿತ ಅಸಲಂಕಾ ನಾಟೌಟ್-49, ಸಮರ ವಿಕ್ರಮ- 48; ಇಫ್ತಿಕರ್ ಅಹಮ್ಮದ್ 50ಕ್ಕೆ3, ಅಫ್ರಿದಿ 52ಕ್ಕೆ 2