ಉಡುಪಿ: ಹಮಾಸ್ ಉಗ್ರರ ದಾಳಿಯಿಂದ ಇಸ್ರೇಲ್ ನಲುಗಿಹೋಗಿದೆ. ಇಸ್ರೇಲಿ ಪ್ರಜೆಗಳನ್ನು ಕಂಡಕಂಡಲ್ಲಿ ಕೊಲ್ಲುತ್ತಿರುವ ಉಗ್ರ ಕ್ರಿಮಿಗಳು ನರಕಸದೃಶ್ಯ ವಾತಾವರಣವನ್ನು ಸೃಷ್ಟಿ ಮಾಡಿದ್ದಾರೆ. ಈ ನಡುವೆ ಅಲ್ಲಿ ನೆಲೆಸಿರುವ ಕರಾವಳಿಯ ಹಲವರು ತಮಗೆ ಆಗಿರುವ ಭೀಕರ ಅನುಭವವನ್ನು ಹಂಚಿಕೊಂಡಿದ್ದಾರೆ.
ಅದೇ ರೀತಿ ಉಡುಪಿ ಸಮೀಪದ ಹೆರ್ಗಾ ಗ್ರಾಮದ ಪ್ರಮಿಳಾ ಪ್ರಭು ಇಸ್ರೇಲ್‌ನ ರಾಜಧಾನಿ ಟೆಲ್‌ಅವೀವ್‌ನಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದು, ತಮಗೆದುರಾದ ನರಕಸದೃಶ್ಯ ವಾತಾವರಣವನ್ನು ವಿವರಿಸಿದ್ದಾರೆ. ನಾವಿರುವ ಕೇವಲ 1 ಕಿ.ಮೀ. ದೂರದಲ್ಲಿ ಹಮಾಸ್ ಉಗ್ರರು ಹಾರಿಸಿದ ರಾಕೆಟ್ ಬಿದ್ದಿದೆ. ಪುಣ್ಯವಶಾತ್ ಯಾವುದೇ ಸಾವು-ನೋವು ಸಂಭವಿಸಿಲ್ಲ. ಶನಿವಾರ ರಾತ್ರಿಯಿಡೀ ರಾಕೆಟ್ ದಾಳಿ ಆಗಿದೆ. ನಾವು ಸುಮಾರು ನೂರಿನ್ನೂರು ರಾಕೆಟ್ ಗಳು ಆಕಾಶದಲ್ಲಿ ಹಾರಾಡುವುದನ್ನು ನೋಡಿದ್ದೇವೆ. ಯಾವ ಹೊತ್ತಿಗೆ ರಾಕೆಟ್ ಹಾರಿ ಬರ್ತವೋ ಗೊತ್ತಿಲ್ಲ, ಎಲ್ಲಿ ಬೀಳ್ತವೋ ಎಂದು ಆತಂಕದಲ್ಲಿ ನಾವಿದ್ದೇವೆ ಎಂದು ಭಯಾನಕ ಸ್ಥಿತಿಯನ್ನು ವಿವರಿಸಿದ್ದಾರೆ. ಆದರೆ, ಪ್ರತಿ ರಾಕೆಟ್ ಬರುವಾಗಲೂ 15 ಸೆಕೆಂಡ್ ಮುಂಚೆ ಸೈರನ್ ಮೊಳಗುವಂತಹ ತಾಂತ್ರಿಕ ವ್ಯವಸ್ಥೆ ಇಲ್ಲಿದೆ.
ಇಲ್ಲಿನ ಪ್ರತಿ ನಗರದಲ್ಲೂ ಅಲ್ಲಲ್ಲಿ ಅಂಡರ್ ಗ್ರೌಂಡ್ ಬಂಕರ್‌ಗಳಿವೆ. ಆದ್ದರಿಂದ ಸೈರನ್ ಆದ ತಕ್ಷಣ ಮನೆಯಿಂದ ಹೊರಗೆ ಇರುವ ಜನ ಬಂಕರ್ ಸೇರಿಕೊಳ್ಳುತ್ತೇವೆ, ಇದು ನಮಗೆ ಅಭ್ಯಾಸ ಆಗಿದೆ ಎಂದು ವಿವರಿಸಿದರು. ಈ ಹಿಂದೆ ಯಾವಾಗಲೋ ಒಮ್ಮೆ ರಾಕೆಟ್ ಗಳು ಆ ಕಡೆಯಿಂದ ಬರುತ್ತಿದ್ದವು, ಸೈರನ್ ಆಗುತ್ತಿತ್ತು, ನಾವು ಬಂಕರ್ ಸೇರಿಕೊಳ್ಳುತಿದ್ದೆವು. ಆದರೆ ನಿನ್ನೆ ಪ್ರಥಮ ಬಾರಿಗೆ ಇಷ್ಟು ಸಂಖ್ಯೆಯಲ್ಲಿ ರಾಕೆಟ್ ಗಳು ಬಂದಿವೆ ಮತ್ತು ಇಲ್ಲಿನವರ ಅಪಹರಣ, ಹತ್ಯೆ ಕೂಡ ನಡೆದಿದೆ. ಇನ್ನೇನಾಗಲಿದೆಯೋ ಗೊತ್ತಿಲ್ಲ ಎಂದು ಆತಂಕದ ಸ್ಥಿತಿಯನ್ನು ವಿವರಿಸಿದ್ದಾರೆ.