ಬೆಂಗಳೂರು: ಬೈಂದೂರು ಮೂಲದ ಉದ್ಯಮಿಯೊಬ್ಬರಿಗೆ ಬಿಜೆಪಿಯಿಂದ ಎಂಎಲ್.ಎ ಟಿಕೆಟ್ ಮಾಡಿಕೊಡುವ ವಿಚಾರದಲ್ಲಿ ಕೋಟ್ಯಂತರ ರೂಪಾಯಿಗಳನ್ನು ವಂಚಿಸಿರುವ ಪ್ರಕರಣದಲ್ಲಿ ಬೆಂಗಳೂರು ಸಿಸಿಬಿ (Bengaluru CCB) ಪೊಲೀಸರಿಂದ ಬಂಧನಕ್ಕೊಳಗಾಗಿ ಪೊಲೀಸ್ ಕಸ್ಟಡಿಯಲ್ಲಿ ವಿಚಾರಣೆಗೊಳಪಟ್ಟಿರುವ ಹಿಂದು ವಾಗ್ಮಿ ಚೈತ್ರ ಕುಂದಾಪುರ (Chaithra Kundapura) ಇಂದು ದಿಢೀರ್ ಅಸ್ವಸ್ಥಗೊಂಡಿದ್ದಾರೆ.
ಇಂದು (ಸೆ.15) ಬೆಳಿಗ್ಗೆ ಚೈತ್ರಾ ಅವರನ್ನು ಮಹಿಳಾ ಸಾಂತ್ವನ ಕೇಂದ್ರದಿಂದ ಸಿಸಿಬಿ ಕಚೇರಿಗೆ ವಿಚಾರಣೆಗೆಂದು ಕರೆತರಲಾಗಿತ್ತು. 45 ನಿಮಿಷಗಳ ವಿಚಾರಣೆ ಬಳಿಕ ಚೈತ್ರಾ ಪ್ರಜ್ಞಾಹೀನಗೊಂಡು ಕುಸಿದು ಬಿದ್ದಿದ್ದಾರೆ.
ತಕ್ಷಣವೇ ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದ್ದು, ಸದ್ಯ ಆಕೆಗೆ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಚೈತ್ರಾ ಅವರ ಬಾಯಿಯಿಂದ ನೊರೆ ಬರುತ್ತಿರುವ ಫೊಟೋಗಳು ಇದೀಗ ಎಲ್ಲೆಡೆ ಹರಿದಾಡುತ್ತಿದ್ದು, ಅವರು ಮೂರ್ಛೆ ರೋಗದಿಂದ ಬಳಲುತ್ತಿದ್ದು, ತೀವ್ರ ವಿಚಾರಣೆ ವೇಳೆ ಅವರಿಗೆ ಪ್ರಜ್ಞೆ ತಪ್ಪಿರುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.
ಹೆಚ್ಚಿನ ಮಾಹಿತಿಗಳನ್ನು ನಿರೀಕ್ಷಿಸಲಾಗುತ್ತಿದೆ.