ಉಡುಪಿ: ಬಾರ್ ನಲ್ಲಿ ಕುಳಿತು ಕುಡಿಯುತ್ತಿದ್ದಾಗ ಕಾಲು ತಾಗಿದೆ ಎಂಬ ಕಾರಣಕ್ಕೆ ವಿದ್ಯಾರ್ಥಿಯೊಬ್ಬನನ್ನು ಅಟ್ಟಾಡಿಸಿ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಮಣಿಪಾಲ ಸರಳೇಬೆಟ್ಟು ಪ್ರದೇಶದಲ್ಲಿ ನಡೆದಿದೆ.
ಮಣಿಪಾಲ ಎಂಐಟಿ ಕಾಲೇಜಿನ ವಿದ್ಯಾರ್ಥಿ, ಮುಂಬೈ ಮೂಲದ ಆರುಷ್ ಕುಮಾರ್ (21)ಹಲ್ಲೆಗೊಳಗಾದ ಯುವಕ. ಪುಂಡರ ತಂಡವು ಯುವಕನ ಮೇಲೆ ಹಲ್ಲೆ ನಡೆಸುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸುಮಾರು ಆರು ಮಂದಿ ಸ್ಥಳೀಯ ಯುವಕರು ಹಲ್ಲೆ ನಡೆಸಿದ್ದಾರೆ.
ಮದ್ಯ ಸೇವಿಸುತ್ತಿದ್ದಾಗ ಪುಂಡರ ತಂಡದ ಓರ್ವನಿಗೆ ಕಾಲು ತಾಗಿದ ಹಿನ್ನೆಲೆ ತಗಾದೆ ತೆಗೆದು ಹಲ್ಲೆ ನಡೆಸಿದ್ದಾರೆ. ಬಾರ್ ನಲ್ಲಿ ಹಲ್ಲೆ ನಡೆಸಿದ್ದು ಮಾತ್ರವಲ್ಲದೆ, ಆತನನ್ನು ವಾಸವಿದ್ದ ಅಪಾರ್ಟ್ ಮೆಂಟ್ ವರೆಗೂ ಅಟ್ಟಾಡಿಸಿ ಹಲ್ಲೆ ನಡೆಸಿದ್ದಾರೆ. ಅರುಷ್ ತನ್ನ ಅಪಾರ್ಟ್ ಮೆಂಟ್ ನಲ್ಲಿ ಒಬ್ಬನೇ ತಂಗಿದ್ದ. ಕೊಠಡಿಯ ವರೆಗೂ ಅಟ್ಟಾಡಿಸಿ ರೂಂ ಒಳಗೆ ಹೋಗಲು ಬಿಡದೆ ಎಳೆದು ಹಲ್ಲೆ ನಡೆಸಿದ್ದಾರೆ. ವಿಷಯ ತಿಳಿದು ರಕ್ಷಿಸಲು ಬಂದ ಆರುಷ್ ಸ್ನೇಹಿತರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಆಬಳಿಕ ಯುವಕನ ಮೊಬೈಲ್ ಗೆ ಕರೆ ಮಾಡಿ ಮತ್ತೊಮ್ಮೆ ಹಲ್ಲೆ ನಡೆಸುವುದಾಗಿ ಬೆದರಿಕೆ ಒಡ್ಡಿದ್ದಾರೆ. ಹಲ್ಲೆ ವೀಡಿಯೋ ಆಧರಿಸಿ ಅರುಷ್ ನನ್ನ ಕರೆಸಿ ಮಣಿಪಾಲ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.