ಗಂಗೊಳ್ಳಿ: ಮೀನುಗಾರಿಕೆಗೆ ತೆರಳಿದ್ದ ಮೀನುಗಾರರೊಬ್ಬರು ಸಮುದ್ರಕ್ಕೆ ಆಕಸ್ಮಿಕವಾಗಿ ಬಿದ್ದು, ಸುಮಾರು 43 ಗಂಟೆಗಳ ಕಾಲ ಈಜುತ್ತ ಜೀವನ್ಮರಣ ಹೋರಾಟ ನಡೆಸಿ ಬದುಕಿ ಬಂದ ಘಟನೆ ಬೆಳಕಿಗೆ ಬಂದಿದೆ.
ರವಿವಾರ ಬೀಸಿದ ಗಾಳಿ – ಮಳೆಯ ಅಬ್ಬರಕ್ಕೆ ಕೇರಳದ ಲಿಫ್ಟನ್ ಮೆರಿನ್ ಬೋಟ್‌ನಿಂದ 25ರ ಹರೆಯದ ತಮಿಳುನಾಡು ಮೂಲದ ವ್ಯಕ್ತಿಯೋರ್ವ ಆಯತಪ್ಪಿ ನೀರಿಗೆ ಬಿದ್ದಿದ್ದರು. ರಕ್ಷಣೆಗೆ ಯಾರೂ ಬಾರದಿದ್ದರೂ ಧೈರ್ಯ ಕಳೆದುಕೊಳ್ಳದ ಅವರು ಸುಮಾರು 43 ಗಂಟೆಗಳ ಕಾಲ ಈಜಾಡುತ್ತ ಕೈ ಮೇಲೆ ಮಾಡುತ್ತ ಸಹಾಯಕ್ಕಾಗಿ ಅಂಗಲಾಚುತ್ತಿದ್ದರು. ಕೊನೆಗೂ “ಸೀ ಸಾಗರ್’ ಬೋಟಿನ ಮೀನುಗಾರರ ಕಣ್ಣಿಗೆ ಬಿದ್ದರು. ಬೋಟ್‌ನಲ್ಲಿದ್ದ ಶ್ರೀಧರ ಖಾರ್ವಿ ಉಪ್ಪುಂದ ಮತ್ತು ಸಂಜೀವ ಖಾರ್ವಿ ಮರವಂತೆ ಅವರು ತತ್‌ಕ್ಷಣ ಆತನ ಕೈ ಹಿಡಿದು ಮೇಲಕ್ಕೆತ್ತಿ ರಕ್ಷಿಸಿದ್ದಾರೆ.
