ಪಡುಬಿದ್ರಿ: ಖಾಸಗಿ ಬಸ್ ಮತ್ತು ಬೈಕ್ ನಡುವೆ ಇಂದು (ಸೆ.13) ಸಂಭವಿಸಿದ ಬೈಕ್ ಅಪಘಾತದಲ್ಲಿ ದ್ವಿಚಕ್ರ ವಾಹನ ಸವಾರರೊಬ್ಬರು ಮೃತಪಟ್ಟ ದಾರುಣ ಘಟನೆ ಇಲ್ಲಿನ ನಂದಿಕೂರು ಮುದರಂಗಡಿ ಜಂಕ್ಷನ್ ನಲ್ಲಿ ಸಂಭವಿಸಿದೆ.
ಈ ಭಾಗದ ಯೂ-ಟ್ಯೂಬರ್ ಹಾಗೂ ಅಜೆಕಾರಿನ ಟೆಂಪೋ ಚಾಲಕ ಮತ್ತು ಮಾಲಕರಾಗಿದ್ದ ಅಶ್ವಿತ್ ಶೆಟ್ಟಿ ಮೃತ ದುರ್ದೈವಿ.
ಹವ್ಯಾಸಿ ಬೈಕ್ ಸವಾರರಾಗಿದ್ದ ಅಶ್ವಿತ್ ಅವರು ಕೆಲ ತಿಂಗಳ ಹಿಂದಷ್ಟೇ ಬೈಕ್ ನಲ್ಲಿ ಜಮ್ಮು ಕಾಶ್ಮೀರದ ಲಡಾಖ್ ಗೂ ಹೋಗಿ ಬಂದಿದ್ದರು.
ಅಶ್ವಿನ್ ಇಂದು ಅಜೆಕಾರಿನಿಂದ ಬೈಕ್ ಸರ್ವೀಸ್ ಗೆ ಹೋಗುತ್ತಿದ್ದ ಸಂದರ್ಭ ನಂದಿಕೂರು ಮುದರಂಗಡಿ ಜಂಕ್ಷನ್ ಬಳಿ ಈ ಅಪಘಾತ ಸಂಭವಿಸಿದೆ. ಅವಿವಾಹಿತರಾಗಿದ್ದ ಅಶ್ವಿನ್ ತಾಯಿ, ಅಣ್ಣ ಹಾಗೂ ಅಕ್ಕನನ್ನು ಅಗಲಿದ್ದಾರೆ.
ಅಪಘಾತದ ರಭಸಕ್ಕೆ ಅಶ್ವಿತ್ ಅವರ ದೇಹವು ಬಸ್ ಮೈನ್ ಆಕ್ಸಿಲ್ ನಲ್ಲಿ ಸಿಲುಕಿಕೊಂಡಿತ್ತು, ಬಳಿಕ ಬಸ್ಸನ್ನು ಹಿಂದಕ್ಕೆ ಚಲಾಯಿಸಿ ಅವರ ದೇಹವನ್ನು ಹೊರತೆಗೆಯಲಾಯ್ತು.
ಬಸ್ ಗೆ ಬೈಕ್ ಡಿಕ್ಕಿ ಹೊಡೆದಿರುವುದಷ್ಟೇ ಕೇಳಿಸಿತ್ತಲ್ಲದೆ ಸವಾರನ ಯಾವುದೇ ಬೊಬ್ಬೆ ಕೇಳಿಸದೆ ಕ್ಷಣಾರ್ಧದಲ್ಲೇ ಅಶ್ವಿತ್ ಪ್ರಾಣಪಕ್ಷಿ ಹಾರಿಹೋಗಿತ್ತು ಎಂಬುದಾಗಿ ಪ್ರತ್ಯಕ್ಷದರ್ಶಿಯೋರ್ವರು ಮಾಹಿತಿ ನೀಡಿದ್ದಾರೆ.