ಸಂಕೋಲೆ ಕಟ್ಟಿ ಎಳೆದರು..! ಆತ್ಮಹತ್ಯೆ ಎಂದರು..!
ಪುತ್ತೂರು: ಕುಡಿದ ಮತ್ತಿನಲ್ಲಿ ನೆರೆಮನೆಗೆ ಹೋಗಿ ಗಲಾಟೆ ಮಾಡುತ್ತಿದ್ದ ಪುತ್ರನನ್ನು ಆತನ ತಾಯಿ, ನೆರೆಮನೆಯಾತ ಕುತ್ತಿಗೆಗೆ ಸಂಕೋಲೆ ಬಿಗಿದು ಎಳೆದುಕೊಂಡು ಬರುತ್ತಿದ್ದ ವೇಳೆ ಯುವಕ ಮೃತಪಟ್ಟಿದ್ದು ಈ ಬಗ್ಗೆ ಕೊಲೆ ಪ್ರಕರಣದ ದಾಖಲಿಸಿ ಇಬ್ಬರನ್ನು ಪುತ್ತೂರು ಗ್ರಾಮಾಂತರ ಪೊಲೀಸರು ಬಂಧಿಸಿದ ಘಟನೆ ಮೇ 10 ರಂದು ಸಂಭವಿಸಿದೆ.
ಬೆಟ್ಟಂಪಾಡಿ ಕಾಣುಮೂಲೆ ನಿವಾಸಿ ದಿ. ಕೊರಗಪ್ಪ ಶೆಟ್ಟಿ ಅವರ ಪುತ್ರ ಚೇತನ್ (33) ಸಾವನ್ನಪ್ಪಿದ ಯುವಕ. ಕಾಣುಮೂಲೆ ನಿವಾಸಿ, ಯುವಕನ ತಾಯಿ ಉಮಾವತಿ, ನೆರೆಮನೆಯ ಯೂಸುಫ್ ಬಂಧಿತರು.
ಘಟನೆ ವಿವರ: ಚೇತನ್ ಮೇ 9ರಂದು ರಾತ್ರಿ ಕುಡಿದು ಮನೆಯಲ್ಲಿ ಗಲಾಟೆ ಮಾಡಿದ್ದ. ಬಳಿಕ ತಡರಾತ್ರಿ ನೆರೆಯ ಮನೆಯ ಯೂಸುಫ್ ಅವರ ಮನೆಗೆ ಹೋಗಿ ಕಿಟಕಿಯ ಗಾಜನ್ನು ಪುಡಿ ಮಾಡಿದ್ದ ಎನ್ನಲಾಗಿದೆ. ಈ ಬಗ್ಗೆ ಯುಸೂಫ್ ಅವರು ಚೇತನ್ ತಾಯಿಗೆ ಕರೆ ಮಾಡಿ ವಿಷಯ ತಿಳಿಸಿದ್ದರು.
ಸಂಕೋಲೆ ಕಟ್ಟಿ ಎಳೆದರು..!
ಚೇತನ್ ತಾಯಿ ಉಮಾವತಿ, ತಂಗಿಯ ಗಂಡ ಯೂಸುಫ್ ಅವರ ಮನೆಗೆ ಬಂದು ಚೇತನ್‌ನನ್ನು ಕರೆದುಕೊಂಡು ಹೋಗುವ ಪ್ರಯತ್ನ ಮಾಡಿದ್ದರೂ ಆತ ಒಪ್ಪಲಿಲ್ಲ ಎನ್ನಲಾಗಿದೆ. ಕೊನೆಗೆ ಸಂಕೋಲೆಯಿಂದ ಚೇತನ್ ದೇಹಕ್ಕೆ ಕಟ್ಟಿ ಉಮಾವತಿ, ಯೂಸುಫ್ ಇಬ್ಬರು ಎಳೆದುಕೊಂಡು ಬಂದಿದ್ದಾರೆ. ಮನೆಗೆ ತಲುಪಿದ ವೇಳೆ ಚೇತನ್ ಕೊಸರಾಟ ನಡೆಸಿದ್ದು ಈ ವೇಳೆ ಸಂಕೋಲೆ ಕುತ್ತಿಗೆಗೆ ಬಿಗಿದು ಚೇತನ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎನ್ನಲಾಗಿದೆ.
ಆತ್ಮಹತ್ಯೆ ಎಂದರು..!
ಚೇತನ್ ಮಲಗಿದ ಸ್ಥಿತಿಯಲ್ಲೇ ಇದ್ದ ಹಿನ್ನೆಲೆಯಲ್ಲಿ ಮನೆ ಮಂದಿ ಆತನನ್ನು ಪುತ್ತೂರಿನ ಆಸ್ಪತ್ರೆಗೆ ಕರೆ ತಂದಿದ್ದಾರೆ. ಈ ವೇಳೆಗಾಗಲೇ ಆತ ಮೃತಪಟ್ಟಿದ್ದ. ಪೊಲೀಸರಿಗೆ ಈ ಬಗ್ಗೆ ಮಾಹಿತಿ ಸಿಕ್ಕಿ ಅವರು ಪರಿಶೀಲಿಸಿದಾಗ ಮನೆ ಮಂದಿ ಆತ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಹೇಳಿಕೆ ನೀಡಿದ್ದರು ಎನ್ನಲಾಗಿದೆ. ಆದರೆ ಪೊಲೀಸರಿಗೆ ಅನುಮಾನ ಬಂದು ವಿಚಾರಿಸಿದಾಗ ಸಂಕೋಲೆ ಕಟ್ಟಿ ಎಳೆದು ತಂದ ವಿಚಾರ ಬೆಳಕಿಗೆ ಬಂದಿತ್ತು. ಪೊಲೀಸರು ಸುಮೋಟೋ ಪ್ರಕರಣ ದಾಖಲು ಮಾಡಿಕೊಂಡು ಚೇತನ್ ತಾಯಿ ಉಮಾವತಿ, ಆತನ ಭಾವ, ನೆರೆಮನೆಯ ಯೂಸುಫ್ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಉಮಾವತಿ, ಯೂಸುಫ್‌ನನ್ನು ಪೊಲೀಸರು ಬಂಧಿಸಿದ್ದಾರೆ.