Site icon newsroomkannada.com

ಅಯೋಧ್ಯೆ ರಾಮಮಂದಿರದ ಬ್ಯಾಂಕ್ ಖಾತೆಗೆ ಬರುತ್ತಿದೆ ಕೋಟ್ಯಂತರ ರೂಪಾಯಿ ದೇಣಿಗೆ

ಅಯೋಧ್ಯೆ: ಕಳೆದ ಕೆಲದಿನಗಳಿಂದ ಇಡೀ ದೇಶವೇ ಶ್ರೀರಾಮನ ಭಕ್ತಿಯಲ್ಲಿ ಮುಳುಗಿದೆ. ಜನವರಿ 22 ರಂದು ಅಯೋಧ್ಯೆಯ ರಾಮಮಂದಿರದಲ್ಲಿ ರಾಮಲಲ್ಲಾನ ವಿಗ್ರಹದ ಪ್ರತಿಷ್ಠಾಪನಾ ಕಾರ್ಯಕ್ರಮ ನಡೆಯಲಿದೆ. ಈ ಮಧ್ಯೆ ರಾಮಮಂದಿರ  ನಿರ್ಮಾಣಕ್ಕೆ ಬಂದ ದೇಣಿಗೆಯ ಬಗ್ಗೆಯೂ ಜನರಲ್ಲಿ ಕುತೂಹಲ ಸೃಷ್ಟಿಸಿದೆ.

ಆಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಶ್ರೀರಾಮ ಮಂದಿರಕ್ಕೆ ಹರಿದು ಬರುತ್ತಿರುವ ದೇಣಿಗೆಯ ಬಗ್ಗೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಮಹತ್ವದ ಹೇಳಿಕೆ ನೀಡಿದ್ದಾರೆ. ರಾಮಮಂದಿರ ನಿರ್ಮಾಣಕ್ಕೆ ಹಣ ಎಲ್ಲಿಂದ ಬಂತು? ಯಾವ್ಯಾವ ಮೂಲಗಳಿಂದ ದೇಣಿಗೆ ಹರಿದು ಬರುತ್ತಿದೆ? ಸರ್ಕಾರ ನೀಡಿದ ದೇಣಿಗೆ ಎಷ್ಟು? ಇನ್ನಿತರ ಕುರಿತಾದ ವಿಷಯಗಳಿಗೆ ಸಂಬಂಧಿಸಿದಂತೆ ಸಿಎಂ ಆದಿತ್ಯನಾಥ್ ವಿವರಣೆ ನೀಡಿದ್ದಾರೆ.

ಸಂದರ್ಶನವೊಂದರ ವಿಡಿಯೋವನ್ನು ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿ ರಾಮ ಮಂದಿರಕ್ಕೆ ಬರುತ್ತಿರುವ ದೇಣಿಗೆಯ ಬಗ್ಗೆ ವಿವರಣೆ ನೀಡಿರುವ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ‘ಕರಸೇವಕರು ತ್ಯಾಗ ಮಾಡಿದ್ದಾರೆ. ಇದಕ್ಕೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಮಾರ್ಗದರ್ಶನ, ವಿಶ್ವ ಹಿಂದೂ ಪರಿಷತ್ತಿನ ನೇತೃತ್ವ ಮತ್ತು ಪೂಜ್ಯ ಸಂತರ ಆಶೀರ್ವಾದವಿದೆ. ಆ ಚಳವಳಿಯಿಂದಾಗಿ ರಾಮಜನ್ಮಭೂಮಿಯಲ್ಲಿ ಭವ್ಯವಾದ ರಾಮಮಂದಿರ ನಿರ್ಮಾಣವಾಗುತ್ತಿದೆ. ಇದರಲ್ಲಿ ಸರ್ಕಾರ ಒಂದು ಪೈಸೆಯನ್ನೂ ನೀಡಿಲ್ಲ. ಕೇಂದ್ರ ಸರಕಾರವಾಗಲಿ, ರಾಜ್ಯ ಸರಕಾರವಾಗಲಿ ಹಣ ನೀಡಿಲ್ಲ. ಈ ಎಲ್ಲಾ ಹಣವನ್ನು ದೇಶಾದ್ಯಂತ, ಪ್ರಪಂಚದಾದ್ಯಂತದ ರಾಮ ಭಕ್ತರು ನೀಡಿದ್ದಾರೆ ಎಂದು ಹೇಳಿದ್ದಾರೆ.

ಸರಕಾರ ಎಲ್ಲಿಗೆ ಖರ್ಚು ಮಾಡಿದೆ?

ರಾಮ ಮಂದಿರದ ನಿರ್ಮಾಣಕ್ಕೆ ಸರ್ಕಾರ ಹಣ ನೀಡದಿದ್ದರೂ ಸಹ ಯಾವ ಕಾಮಗಾರಿಗೆ ಸರಕಾರ ಹಣ ಖರ್ಚು ಮಾಡುತ್ತಿದೆ ಎಂಬುದರ ಬಗ್ಗೆ ಸಿಎಂ ಆದಿತ್ಯನಾಥ್ ಸ್ಪಷ್ಟನೆ ನೀಡಿದ್ದಾರೆ. ರಾಮಮಂದಿರದ ಹೊರಭಾಗದ ಮೂಲಸೌಕರ್ಯಗಳಾದ ರೈಲ್ವೆ ನಿಲ್ದಾಣ, ವಿಮಾನ ನಿಲ್ದಾಣ ನಿರ್ಮಾಣ, ಅತಿಥಿ ಗೃಹ ನಿರ್ಮಾಣ, ಕ್ರೂಸ್ ಸೇವೆ, ರಸ್ತೆ ಅಗಲೀಕರಣ, ವಾಹನ ನಿಲುಗಡೆ ಸೌಲಭ್ಯ ಮುಂತಾದವುಗಳಿಗೆ ಸರ್ಕಾರ ಹಣ ವ್ಯಯಿಸುತ್ತಿದೆ ಎಂದರು.

ರಾಮ ಮಂದಿರಕ್ಕೆ ದೇಶ ವಿದೇಶಗಳಿಂದ ಕೋಟ್ಯಂತರ ಜನರು ಉದಾರವಾಗಿ ದೇಣಿಗೆ ನೀಡುತ್ತಿದ್ದಾರೆ. ನಿರೀಕ್ಷೆಗೂ ಮೀರಿ ಅಯೋಧ್ಯೆ ರಾಮ ಮಂದಿರದ ಬ್ಯಾಂಕ್ ಖಾತೆಗೆ ಹಣ ಹರಿದು ಬರುತ್ತಿದ್ದು, ಪ್ರತಿ ತಿಂಗಳು ಅಯೋಧ್ಯೆ ರಾಮಮಂದಿರದ ಬ್ಯಾಂಕ್ ಖಾತೆಗೆ ಕೋಟ್ಯಂತರ ರೂಪಾಯಿ ದೇಣಿಗೆ ಬರುತ್ತಿದೆ. ಆದರೆ ಇದುವರೆಗೂ ಆನ್‌ಲೈನ್ ಮೂಲಕ ಬಂದ ದೇಣಿಗೆಗಳ ಎಣಿಕೆಯನ್ನು ಒಮ್ಮೆಯೂ ಮಾಡಲಾಗಿಲ್ಲ ಎಂಬುದು ಗಮನಾರ್ಹ.

Exit mobile version