ಯಾಕಾಗಿ ಈ ಯಾಗ ಮಾಡ್ತಾರೆ ಗೊತ್ತಾ?
ನವದೆಹಲಿ: ಬಿಆರ್ಎಸ್ ಮುಖ್ಯಸ್ಥ ಮತ್ತು ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಧಾರ್ಮಿಕ ವಿಚಾರಗಳಲ್ಲಿ ಅತೀವ ನಂಬಿಕೆ ಹೊಂದಿದ್ದಾರೆ. ಕಾಲಕಾಲಕ್ಕೆ ಯಾಗಗಳನ್ನೂ ನಡೆಸುತ್ತಾರೆ. 2015ರಲ್ಲಿ ರಾಜ್ಯ ಅಭಿವೃದ್ಧಿಗಾಗಿ ಚಂಡಿ ಯಾಗ ನೆರವೇರಿಸಿದ್ದರು. ಆ ಬಳಿಕ 2018ರಲ್ಲಿ ಎರಡನೇ ಬಾರಿಗೆ, ಚುನಾವಣೆಗೆ ಹೋಗುವ ಮುನ್ನವೇ ಸಿಎಂ ಕೆಸಿಆರ್ ತಮ್ಮ ತೋಟದ ಮನೆಯಲ್ಲಿ ರಾಜಶ್ಯಾಮಲ ಯಾಗ ನಡೆಸಿದ್ದರು. ಆ ನಂತರ ಚುನಾವಣೆ ಎದುರಿಸಿದ ಕೆಸಿಆರ್ ಮತ್ತೆ ಅಧಿಕಾರದ ಗದ್ದುಗೆ ಹಿಡಿದರು.
ಈ ಬಾರಿಯೂ 2018ರ ನಡೆಯನ್ನೇ ಕೆಸಿಆರ್ ಅನುಸರಿಸುತ್ತಿದ್ದಾರೆ. ಸಿದ್ದಿಪೇಟೆ ಜಿಲ್ಲೆಯ ಮರ್ಕೂಕ್ ಮಂಡಲದ ಎರ್ರವಳ್ಳಿಯಲ್ಲಿ ನವೆಂಬರ್ 1 ರಿಂದ ಮೂರು ದಿನಗಳ ಕಾಲ ರಾಜಶ್ಯಾಮಲ ಯಾಗವನ್ನು ನಡೆಸಲಾಗುತ್ತಿದೆ. ವಿಶಾಖ ಶಾರದಾ ಪೀಠಾಧಿಪತಿಗಳಾದ ಸ್ವರೂಪಾನಂದೇಂದ್ರ ಮತ್ತು ಸ್ವಾತ್ಮಾನಂದೇಂದ್ರ ಅವರ ನೇತೃತ್ವದಲ್ಲಿ ಯಾಗವನ್ನು ನಡೆಸಲಾಗುತ್ತಿದೆ. ತೆಲಂಗಾಣ, ಆಂಧ್ರ ಪ್ರದೇಶ ಮತ್ತು ಕರ್ನಾಟಕದ ಹಲವು ಪೀಠಾಧಿಪತಿಗಳು ಯಾಗದಲ್ಲಿ ಭಾಗವಹಿಸಿದ್ದಾರೆ. ರಾಜಶ್ಯಾಮಲಾ ಯಾಗದ ಜತೆಗೆ ಲೋಕ ಕಲ್ಯಾಣಾರ್ಥವಾಗಿ ಶತಚಂಡಿ ಯಾಗ ಕೂಡ ನಡೆಸಲಾಗುತ್ತಿದೆ.
ಮಂಗಳವಾರ ಸಂಜೆ 200 ವೈದಿಕರು ಎರ್ರವಳ್ಳಿ ತಲುಪಿದರು. ಮೊದಲ ದಿನವೇ ದೃಢಸಂಕಲ್ಪದಿಂದ ಯಾಗವನ್ನು ಆರಂಭಿಸಿದರು. ಎರಡನೇ ದಿನ ವೇದ ಪಾರಾಯಣ, ಹೋಮ ಇತ್ಯಾದಿ ವಿಧಿವಿಧಾನಗಳು ನಡೆಯಲಿವೆ. ಕೊನೆಯ ದಿನ ಪೂರ್ಣಾಹುತಿಯೊಂದಿಗೆ ಯಾಗ ಮುಗಿಯುತ್ತದೆ.
ತೆಲಂಗಾಣದ ಸರ್ವತೋಮುಖ ಅಭಿವೃದ್ಧಿಗಾಗಿ ಕೆಸಿಆರ್ ಯಾಗ ಮಾಡುತ್ತಿದ್ದಾರೆ ಎಂದು ಸ್ವರೂಪಾನಂದೇಂದ್ರ ಹೇಳಿದರು. ರಾಜಶ್ಯಾಮಲ ಯಾಗ ಶಕ್ತಿಶಾಲಿಯಾಗಿದೆ ಎಂದ ಅವರು, ರಾಜ್ಯವನ್ನು ಹಸಿರಾಗಿಸಲು ಕೆಸಿಆರ್ ಅವರು ರಾಜಶ್ಯಾಮಲ ಯಾಗ ಕೈಗೊಂಡಿದ್ದಾರೆ.
ರಾಜಶ್ಯಾಮಲಾ ರಾಜರು ಹಾಗೂ ಜನಸಾಮಾನ್ಯರನ್ನು ಅನುಗ್ರಹಿಸುವ ದೇವತೆ ಎಂದು ಸ್ವರೂಪಾನಂದೇಂದ್ರ ವಿವರಿಸಿದರು. ಹಿಂದಿನ ಯಾಗದ ಫಲವಾಗಿಯೇ ಹೈದರಾಬಾದ್ ಮಹಾನಗರವಾಗಿ ಹೊರಹೊಮ್ಮುತ್ತಿದೆ ಎಂದು ಅವರು ಹೇಳಿದರು.