ಭಾರತದ ಆರಂಭಿಕ ಆಟಗಾರ ಶುಬ್ಮನ್ ಗಿಲ್ ತೀವ್ರ ಜ್ವರದಿಂದ ಬಳಲುತ್ತಿದ್ದಾರೆ ಎಂಬುದಾಗಿ ಸುದ್ದಿಯಾಗಿದೆ. ಇದರಿಂದ ವಿಶ್ವ ಕಪ್ಗೆ ಸಜ್ಜಾಗಿರುವ ಭಾರತಕ್ಕೆ ಭಾರಿ ಹೊಡೆತ ಬಿದ್ದಿದೆ. ಅಕ್ಟೋಬರ್ 8 ರ ಭಾನುವಾರದಂದು ಆಸ್ಟ್ರೇಲಿಯ ವಿರುದ್ಧ ನಡೆಯುವ ಭಾರತದ ಮೊದಲ ವಿಶ್ವಕಪ್ ಪಂದ್ಯದಿಂದ ಗಿಲ್ ಹೊರಗುಳಿಯಲಿದ್ದಾರೆ ಎನ್ನಲಾಗಿದೆ.
ಚೆನ್ನೈಗೆ ಬಂದಿಳಿದ ನಂತರ ಶುಬ್ಮನ್ ಗಿಲ್ಗೆ ತೀವ್ರ ಜ್ವರ ಕಾಣಿಸಿಕೊಂಡಿತ್ತು. ಈ ನಿಟ್ಟಿನಲ್ಲಿ ವೈದ್ಯರು ಅವರನ್ನು ತೀವ್ರ ತಪಾಸಣೆಗೆ ಒಳಪಡಿಸಿದ್ದಾರೆ ಎಂದು ತಿಳಿದುಬಂದಿದೆ.
ಒಂದು ವೇಳೆ ಗಿಲ್ ಆಸ್ಟ್ರೇಲಿಯಾ ವಿರುದ್ಧದ ಪಂದ್ಯಕ್ಕೆ ಚೇತರಿಸಿಕೊಳ್ಳಲು ವಿಫಲವಾದರೆ, ಇನ್ನಿಂಗ್ಸ್ ಆರಂಭದಲ್ಲಿ ನಾಯಕ ರೋಹಿತ್ ಶರ್ಮಾ ಅವರೊಂದಿಗೆ ಇಶಾನ್ ಕಿಶನ್ ಅಥವಾ ಕೆಎಲ್ ರಾಹುಲ್ ಆಡಲು ಇಳಿಯಬೇಕೇ ಎಂಬ ಬಗ್ಗೆ ಭಾರತ ತನ್ನ ಆಯ್ಕೆಗಳನ್ನು ಪರಿಶೀಲಿಸಲಿದೆ. ಪ್ಲೇಯಿಂಗ್ ಇಲೆವೆನ್ನಲ್ಲಿ ಗಿಲ್ ಅನುಪಸ್ಥಿತಿಯು ತಂಡಕ್ಕೆ ಹಿನ್ನಡೆಯಾಗುವ ಸಾಧ್ಯತೆ ಇದೆ.