ಕೊಲ್ಕತ್ತಾ: ಹರಿದ ಜೀನ್ಸ್ (Jeans) ಹಾಕಿಕೊಳ್ಳೋದು ಇವತ್ತಿನ ಯುವ ಜನಾಂಗದಲ್ಲಿ ಒಂದು ಫ್ಯಾಷನ್ ಆಗಿದೆ. ಮೊದಲಿಗೆ ಮಂಡಿ ಭಾಗದಲ್ಲಿ ಮಾತ್ರ ಹರಿದಿದ್ದ ಜೀನ್ಸ್ ಧರಿಸುತ್ತಿದ್ದವರೆಲ್ಲಾ, ಈಗೀಗ ಅದೆಲ್ಲೆಲ್ಲೋ ಹರಿದಿರುವ ಜೀನ್ಸ್ ಬಟ್ಟೆಗಳನ್ನು ಧರಿಸಿಕೊಂಡು ತಿರುಗಾಡ್ತಿರ್ತಾರೆ.
ಇದೀಗ, ಕೊಲ್ಕತ್ತಾದ (Kolkata) ಕಾಲೇಜೊಂದು ತನ್ನಲ್ಲಿ ಅಡ್ಮಿಷನ್ ಬಯಸೋ ವಿದ್ಯಾರ್ಥಿಗಳಿಗೆ ‘ಹರಿದ ಜೀನ್ಸ್ ಸಹಿತ ‘ಇಂಡೀಸೆಂಟ್’ ಬಟ್ಟೆಗಳನ್ನು ಧರಿಸದಂತೆ ಕಂಡೀಷನ್ ಹಾಕಿದೆ.
ಇಲ್ಲಿನ ಆಚಾರ್ಯ ಜಗದೀಶ್ ಚಂದ್ರ ಬೋಸ್ ಕಾಲೇಜು (Acharya Jagadish Chandra Bose College) ತನ್ನಲ್ಲಿ ದಾಖಲಾತಿ ಹೊಂದಲು ಬಯಸುವ ಪದವಿ ಪೂರ್ವ ವಿದ್ಯಾರ್ಥಿಗಳಿಗೆ ಅಡ್ಮಿಷನ್ ಅರ್ಜಿಯ ಜೊತೆಗೆ ಈ ಬಗ್ಗೆ ಸೂಚನಾ ಪತ್ರವನ್ನು ನೀಡಿದೆ.
ಈ ಕುರಿತಾಗಿ ಕಾಲೇಜು ತನ್ನ ವೆಬ್ ಸೈಟಿನಲ್ಲಿ ನೊಟೀಸ್ ಪ್ರಕಟಿಸಿದ್ದು, ಅದರಲ್ಲಿರುವಂತೆ, ’ಮೊದಲನೇ ಸೆಮಿಸ್ಟರ್ ನ ಪ್ರಥಮ ತರಗತಿಗಳು 07.08.2023ರಿಂದ ಪ್ರಾರಂಭಗೊಳ್ಳುತ್ತಿದ್ದು ***ಹರಿದ ಜೀನ್ಸ್ ಗಳನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ*** ಕೇವಲ ಫಾರ್ಮಲ್ ಡ್ರೆಸ್ ಗಳನ್ನು ಮಾತ್ರವೇ ಧರಿಸಲು ಅವಕಾಶವಿದೆ’ – ಎಂದು ವಿದ್ಯಾರ್ಥಿಗಳಿಗೆ ಸೂಚನೆ ನೀಡಲಾಗಿದೆ.
ಮತ್ತು ಈ ವಿಚಾರದಲ್ಲಿ ಪೋಷಕರೂ ಸಹ ತಮ್ಮ ಮಕ್ಕಳಿಗೆ ಸೂಕ್ತ ನಿರ್ದೇಶನ ಮತ್ತು ಮನವರಿಕೆ ಮಾಡಿಕೊಡುವಂತೆಯೂ ಕಾಲೇಜು ಸೂಚನೆ ನೀಡಿದೆ.
ಇಷ್ಟು ಮಾತ್ರವಲ್ಲದೇ, ಕಾಲೇಜಿಗೆ ದಾಖಲಾತಿ ಮಾಡಿಕೊಳ್ಳುವ ಸಂದರ್ಭದಲ್ಲಿ ವಿದ್ಯಾರ್ಥಿಗಳು ಒಂದು ಒಪ್ಪಿಗೆ ಪತ್ರಕ್ಕೆ ಸಹಿ ಹಾಕಬೇಕಾಗಿದ್ದು ಅದರಲ್ಲಿ ಹೀಗೆ ಬರೆಯಲಾಗಿದೆ, ‘ಆಚಾರ್ಯ ಜಗದೀಶ್ ಚಂದ್ರ ಬೋಸ್ ಕಾಲೇಜಿಗೆ ದಾಖಲಾತಿ ಮಾಡಿಕೊಂಡಿರುವ ಹಿನ್ನಲೆಯಲ್ಲಿ, ನಾನು ಕಾಲೇಜಿನ ಆವರಣಕ್ಕೆ ಯಾವತ್ತೂ ಹರಿದ/ಕೃತಕವಾಗಿ ಹರಿಯಲಾದ ಜೀನ್ಸ್ ಅಥವಾ ಯಾವುದೇ ರೀತಿಯ ಅಶಿಸ್ತಿನ (ಇಂಡೀಸೆಂಟ್) ಬಟ್ಟೆಗಳನ್ನು ತೊಟ್ಟುಕೊಂಡು ಬರೋದಿಲ್ಲ ಮತ್ತು ನನ್ನ ಅಧ್ಯಯನ ಸಂದರ್ಭದಲ್ಲಿ ಕಾಲೇಜಿನ ಕ್ಯಾಂಪಸ್ ವಠಾರದಲ್ಲಿ ಸಾಮಾನ್ಯ ವಸ್ತ್ರಸಂಹಿತೆಯನ್ನು ಪಾಲಿಸುತ್ತೇನೆ ಎಂಬುದನ್ನುದೃಢೀಕರಿಸುತ್ತೇನೆ..” ಎಂದು ಬರೆದಿರುವ ಒಕ್ಕಣೆಗೆ ಸಹಿ ಮಾಡುವುದು ಕಡ್ಡಾಯವಾಗಿದೆ.
‘ಕಳೆದ ವರ್ಷವೂ ಈ ರೀತಿಯ ಸೂಚನೆಯನ್ನು ಕಾಲೇಜು ಆಡಳಿತ ಮಂಡಳಿ ನೀಡಿದ್ದ ಹೊರತಾಗಿಯೂ ಕೆಲ ವಿದ್ಯಾರ್ಥಿಗಳು ಇದನ್ನು ಅನುಸರಿಸುತ್ತಿರಲಿಲ್ಲ, ಹಾಗಾಗಿ ಈ ಬಾರಿ ದಾಖಲಾತಿ ಸಂದರ್ಭದಲ್ಲೇ ಈ ಸೂಚನೆಯನ್ನು ಹೊಸ ವಿದ್ಯಾರ್ಥಿಗಳಿಗೆ ಕಟ್ಟುನಿಟ್ಟಾಗಿ ನೀಡಲಾಗಿದೆ. ಆದರೆ, ಕಾಲೇಜು ಆವರಣದ ಹೊರಗಡೆ ವಿದ್ಯಾರ್ಥಿಗಳು ಅವರಿಷ್ಟದ ಬಟ್ಟೆಗಳನ್ನು ಧರಿಸಲು ಸ್ವತಂತ್ರರು’ ಎಂದು ಕಾಲೇಜಿನ ಪ್ರಾಂಶುಪಾಲರಾಗಿರುವ ಪೂರ್ಣಚಂದ್ರ ಮೈತಿ ತಿಳಿಸಿದ್ದಾರೆ.