ಉಡುಪಿ: ಚಿಕಿತ್ಸೆಗೆಂದು ಆಸ್ಪತ್ರೆಗೆ ತೆರಳಿದ್ದ ಯುವತಿ ಸಾವನ್ನಪ್ಪಿದ್ದ ಹಿನ್ನಲೆಯಲ್ಲಿ ಉಡುಪಿ ಖಾಸಗಿ ಆಸ್ಪತ್ರೆ ನಿರ್ಲಕ್ಷ್ಯದ ವಿರುದ್ಧ ಯುವತಿ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದು, ಎಬಿವಿಪಿ ಸಂಘಟನೆ ಪ್ರತಿಭಟನೆ ನಡೆಸುತ್ತಿದೆ. ವೈದ್ಯರ ನಿರ್ಲ್ಯಕ್ಷದಿಂದಲೇ ಯುವತಿ ಮೃತಪಟ್ಟಿದ್ದಾಳೆಂದು ಉಡುಪಿಯ ಪ್ರತಿಷ್ಠಿತ ಖಾಸಗಿ ಆಸ್ಪತ್ರೆಯ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.
ಕಳೆದ ಬುಧವಾರ ವಾಂತಿ ಸಮಸ್ಯೆಗಾಗಿ ಖಾಸಗಿ ಆಸ್ಪತ್ರೆಗೆ ಯುವತಿ ನಿಖಿತಾ ದಾಖಲಾಗಿದ್ದು, ವಿವಿಧ ತಪಾಸಣೆಗಳನ್ನು ನಡೆಸಿದರೂ ಪೋಷಕರಿಗೆ ಮಾಹಿತಿ ನೀಡದೆ ಗೊಂದಲ ಮೂಡಿಸಿದ್ದಾರೆ ಎಂಬ ಅರೋಪ ಎದುರಾಗಿದೆ. ಅಲ್ಲದೆ ಸರಿಯಾದ ಮಾಹಿತಿ ನೀಡದೆ ಶಸ್ತ್ರ ಚಿಕಿತ್ಸೆ ನಡೆಸಿದ್ದಾರೆ ಎಂದು ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಒಮ್ಮೆ ಯುವತಿ ಗುಣಮುಖಳಾಗಿದ್ದಳೆಂದು ಘೋಷಿಸಿದ್ದು, ಬಳಿಕ ಮೃತ ಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ, ಈ ನಡೆ ಹಲವು ಅನುಮಾನಗಳಿಗೆ ಕಾರಣವಾಗಿದೆ. 20 ವರ್ಷ ಸಾಕಿ ಸಲುಹಿದ ಮಗಳನ್ನ ಕೊಂದು ತಿಂದಿದ್ದಾರೆಂದು ಮೃತ ಯುವತಿಯ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದು, ಇದೀಗ ಘಟನೆಯ ವಿರುದ್ಧ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಇಂದು ಆಸ್ಪತ್ರೆ ಮುಂಭಾಗ ಎಬಿವಿಪಿ ವಿದ್ಯಾರ್ಥಿ ಸಂಘಟನೆ
ಪ್ರತಿಭಟನೆ ಹಮ್ಮಿಕೊಂಡಿದೆ. ಅಲ್ಲದೆ ಸಾಮಾಜಿಕ ಜಾಲತಾಣಗಳಲ್ಲಿ ಕೂಡ ನಿಖಿತಾ ಸಾವಿನ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ.