ಮಂಗಳೂರು: ವೇಣೂರಿನ ಗರ್ಭಿಣಿಯೊಬ್ಬರು ವೈದ್ಯರ ನಿರ್ಲಕ್ಷ್ಯದಿಂದ ಮೃತಪಟ್ಟಿದ್ದಾರೆ ಎಂದು ಆರೋಪಿಸಿ ಆಕೆಯ ಮನೆಯವರು ಮಂಗಳೂರಿನ ಖಾಸಗಿ ಆಸ್ಪತ್ರೆ ಮುಂಭಾಗ ಶವವಿಟ್ಟು ಪ್ರತಿಭಟನೆ ನಡೆಸಿದ್ದಾರೆ.
ವೇಣೂರು ನಿವಾಸಿ ಪ್ರದೀಪ್ ಅವರ ಪತ್ನಿ ಶಿಲ್ಪಾ ಮೃತ ದುರ್ದೈವಿ. ಶಿಲ್ಪಾಗೆ ಇದು ಎರಡನೇ ಡೆಲಿವರಿಯಾಗಿದ್ದು, ಆಪರೇಷನ್ ಮೂಲಕ ಮಗುವನ್ನು ಹೊರ ತೆಗೆಯಲಾಗಿದೆ. ಮಗು ಸುರಕ್ಷಿತವಾಗಿದ್ದು, ತಾಯಿ ಒಂದು ತಿಂಗಳು ಕೋಮಾದಲ್ಲಿದ್ದು, ಸೋಮವಾರ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ವೈದ್ಯರ ನಿರ್ಲಕ್ಷ್ಯವನ್ನು ಖಂಡಿಸಿ ಮೃತರ ಮನೆಯವರು, ವಿಶ್ವಕರ್ಮ ಸಮಾಜದವರು ಹಾಗೂ ಸಂಘಟನೆ ಪ್ರಮುಖರು ಆಸ್ಪತ್ರೆ ಮುಂಭಾಗ ಪ್ರತಿಭಟನೆ ನಡೆಸಿದರು. ವೈದ್ಯರ ನಿರ್ಲಕ್ಷ್ಯಕ್ಕೆ ಅಮಾಯಕರು ಬಲಿಯಾಗುತ್ತಿದ್ದು, ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.
ಶಿಲ್ಪಾ ಅವರು ಮನೆಯವರ ಜೊತೆಗೆ ತಿಂಗಳ ಹಿಂದೆ ಟೆಸ್ಟಿಗೆಂದು ಆಸ್ಪತ್ರೆಗೆ ತೆರಳಿದ್ದರು. ಆಸ್ಪತ್ರೆಯಲ್ಲಿ ತಕ್ಷಣವೇ ಅಡ್ಮಿಟ್ ಆಗಲು ಸೂಚಿಸಿದರು. ಅದರಂತೆ ಅಡ್ಮಿಟ್ ಆಗಿದ್ದು, ಆಪರೇಷನ್ ನಡೆಸುವ ಅಗತ್ಯವಿದೆ ಇದೆ ತಿಳಿಸಿದ್ದರು. ಹಾಗೆಯೇ ಆಪರೇಷನ್ ಮಾಡಿ, ಮಗುವನ್ನು ಹೊರ ತೆಗೆಯಲಾಯಿತು. ಆದರೆ ಶಿಲ್ಪಾ ಅವರಿಗೆ ರಕ್ತಸ್ರಾವ ಹೆಚ್ಚಾಗತೊಡಗಿತು. ಗರ್ಭಕೋಶದಲ್ಲಿ ತೊಂದರೆ ಇದೆಯೆಂದ ವೈದ್ಯರು, ಗರ್ಭಕೋಶವನ್ನು ತೆಗೆದರು. ಅಷ್ಟರಲ್ಲಿ ಶಿಲ್ಪಾ ಅವರು ಕೋಮಾಕ್ಕೆ ತೆರಳಿದ್ದರು. ಸುಮಾರು 1 ತಿಂಗಳು ಕೋಮಾದಲ್ಲಿದ್ದ ಶಿಲ್ಪಾ ಅವರು ಸೋಮವಾರ ಮೃತಪಟ್ಟಿದ್ದಾರೆ.