ಚೆನ್ನೈ: ತಾನು ಸತ್ತರೆ ಮಗನ ಕಾಲೇಜು ಫೀಸನ್ನು ಸರಕಾರ ಭರಿಸುತ್ತದೆಂದು ನಂಬಿದ ಬಡ ತಾಯೊಯೊಬ್ಬಳು ಬಸ್ಸಿನಡಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುವ ಹೃದಯ ವಿದ್ರಾವಕ ಘಟನೆ ತಮಿಳುನಾಡಿನ ಸೇಲಂ ಜಿಲ್ಲೆಯಲ್ಲಿ ಸಂಭವಿಸಿರುವುದು ತಡವಾಗಿ ಬೆಳಕಿಗೆ ಬಂದಿದೆ.
ಸೇಲಂ ಜಿಲ್ಲಾಧಿಕಾರಿ ಕಚೇರಿಯಲ್ಲಿ ನೈರ್ಮಲ್ಯ ಕಾರ್ಮಿಕಳಾಗಿ ಕೆಲಸ ಮಾಡುತ್ತಿದ್ದ ಪಾಪಾತಿ (45) ಜೀವ ಕಳೆದುಕೊಂಡಿರುವ ಮಹಿಳೆ. ಜೂ. 28ರಂದು ಮಹಿಳೆ ಆತ್ಮಾಹುತಿ ಮಾಡಿಕೊಂಡಿದ್ದರೂ ಸಾವಿನ ಕಾರಣ ತಡವಾಗಿ ಬೆಳಕಿಗೆ ಬಂದಿದೆ.
15 ವರ್ಷಗಳಿಂದ ಗಂಡನಿಂದ ದೂರವಾಗಿ ಮಗನೊಂದಿಗೆ ವಾಸವಾಗಿರುವ ಮಹಿಳೆ ಬಡತನದಿಂದಾಗಿ ಬಹಳ ಕಷ್ಟ ಅನುಭವಿಸುತ್ತಿದ್ದರು. ಒಬ್ಬನೇ ಮಗನ ಭವಿಷ್ಯ ಉಜ್ವಲವಾಗಬೇಕೆಂದು ಬಯಸುತ್ತಿದ್ದ ಮಹಿಳೆಗೆ ಕಾಲೇಜು ಶುಲ್ಕ ಕಟ್ಟಲು ಹಣ ಹೊಂದಿಸಲು ಸಾಧ್ಯವಾಗಿರಲಿಲ್ಲ. ಆಗ ಯಾರೋ ಆಕೆಗೆ ನೀನು ಅಪಘಾತದಲ್ಲಿ ಸತ್ತರೆ ಸರಕಾರ ಕೊಡುವ ಪರಿಹಾರದ ಹಣದಲ್ಲಿ ಮಗನ ಕಾಲೇಜು ಫೀಸ್ ಕಟ್ಟಬಹುದು, ಅವನ ಕಷ್ಟಗಳು ದೂರವಾಗುತ್ತವೆ ಎಂದು ಹೇಳಿದ್ದಾರೆ.
ಇದನ್ನು ನಿಜವೆಂದು ನಂಬಿದ ಮಹಿಳೆ ವೇಗವಾಗಿ ಬರುತ್ತಿದ್ದ ಬಸ್ಸಿನ ಮುಂದೆ ಹೋಗಿ ನಿಂತಿದ್ದಾಳೆ. ಚಾಲಕನಿಗೆ ವೇಗ ನಿಯಂತ್ರಿಸಲು ಸಾಧ್ಯವಾಗದೆ ಬಸ್ ಆಕೆಯ ಮೇಲೆ ಹರಿದು ಹೋಗಿದೆ. ಬದುಕಿನ ಕಷ್ಟಗಳಿಂದ ಹತಾಶರಾಗಿದ್ದ ಈ ಮಹಿಳೆ ಬಸ್ಸಿನಡಿಗೆ ಬೀಳುವುದಕ್ಕೂ ಕೆಲವು ನಿಮಿಷ ಮೊದಲು ಮತ್ತೊಂದು ಬಸ್ಸನಡಿಗೆ ಬೀಳುವ ಪ್ರಯತ್ನ ಮಾಡಿದ್ದರು. ಆದರೆ ಆಗ ಸ್ಕೂಟರ್ ಡಿಕ್ಕಿ ಹೊಡೆದಿತ್ತು. ಅಲ್ಲಿಂದ ಎದ್ದು ಮತ್ತೊಂದು ಬಸ್ಸಿನಡಿಗೆ ಬಿದ್ದಿದ್ದಾರೆ.