main logo

ಮಹಿಳೆಯ ಖಾಸಗಿ ಫೋಟೋ ಇಟ್ಟುಕೊಂಡು ಬ್ಲ್ಯಾಕ್‌ ಮೇಲ್

ಮಹಿಳೆಯ ಖಾಸಗಿ ಫೋಟೋ ಇಟ್ಟುಕೊಂಡು ಬ್ಲ್ಯಾಕ್‌ ಮೇಲ್

ಬೆಂಗಳೂರು: ವಂಚನೆ ಪ್ರಕರಣಗಳ ಸಂಖ್ಯೆ ದಿನೇ ದಿನೇ ಹೆಚ್ಚಳವಾಗುತ್ತಿದ್ದು, ಇದೀಗ ಅಂತಹದ್ದೇ ಪ್ರಕರಣ ಒಂದು ಬೆಳಕಿಗೆ ಬಂದಿದೆ. ನೊಂದ ಮಹಿಳೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಮ್ಯಾಟ್ರಿಮೊನಿ ವೆಬ್‌ಸೈಟ್‌ನಲ್ಲಿ ಪರಿಚಯವಾದ ವ್ಯಕ್ತಿಯೊಬ್ಬ ವಿವಾಹವಾಗುವುದಾಗಿ ನಂಬಿಸಿ ಮಹಿಳೆಯ ಖಾಸಗಿ ಫೋಟೋ ಪಡೆದು ಕೊಂಡು ಬೆತ್ತಲೆ ವಿಡಿಯೋ ಕರೆ ಮಾಡುವಂತೆ ಬ್ಲ್ಯಾಕ್‌ ಮೇಲ್ ಮಾಡಿ 1.50 ಲಕ್ಷ ರೂ. ಪಡೆದು ವಂಚಿಸಿದ್ದಾನೆ.

ನಾಗರಬಾವಿಯ ನಿವಾಸಿ 41 ವರ್ಷದ ಮಹಿಳೆ ಕೊಟ್ಟ ದೂರಿನ ಆಧಾರದ ಮೇಲೆ ಪಶ್ಚಿಮ ವಿಭಾಗದ ಸೈಬರ್‌ ಕ್ರೈಂ ಠಾಣೆ ಪೊಲೀಸರು ತಲ್ಲೂರಿ ಅರವಿಂದ್‌ ಚೌದರಿ (44) ವಿರುದ್ಧ ಎಫ್‌ಐಆರ್‌ ದಾಖಲಿಸಿಕೊಂಡಿದ್ದಾರೆ.

ಈ ಮಹಿಳೆ ವಿವಾಹವಾಗುವ ಉದ್ದೇಶದಿಂದ ಮ್ಯಾಟ್ರಿಮೊನಿ ವೆಬ್‌ ಸೈಟ್‌ವೊಂದರಲ್ಲಿ ತಮ್ಮ ಫೋಟೋ ಇನ್ನಿತರ ಮಾಹಿತಿ ಹಾಕಿದ್ದರು. 2023ರ ಏಪ್ರಿಲ್‌ನಲ್ಲಿ ಆರೋಪಿ ತಲ್ಲೂರಿ ಅರವಿಂದ್‌ ಚೌದರಿ ಈಕೆಯನ್ನು ಸಂಪರ್ಕಿಸಿ ವಿವಾಹವಾಗುವುದಾಗಿ ಭರವಸೆ ನೀಡಿದ್ದ. ಆತನ ಮಾತಿನ ಮೋಡಿಗೆ ಮರುಳಾದ ಮಹಿಳೆ ತನ್ನ ವೈಯಕ್ತಿಕ ಮಾಹಿತಿ ಹಂಚಿಕೊಂಡಿದ್ದರು. ಆರೋಪಿಯು ಸಲುಗೆ ಬೆಳೆಸಿ ಮಹಿಳೆಯಿಂದ ಖಾಸಗಿ ಫೋಟೋ ಪಡೆದುಕೊಂಡಿದ್ದ. ನಂತರ ಫೇಸ್‌ಬುಕ್‌, ಇನ್‌ಸ್ಟಾಗ್ರಾಂ, ಜಿ-ಮೇಲ್‌ಗ‌ಳನ್ನು ಹ್ಯಾಕ್‌ ಮಾಡಿದ್ದ. ನಂತರ ತನ್ನ ವರಸೆ ಬದಲಿಸಿದ ಆರೋಪಿಯು ಬೆತ್ತಲೆ ವಿಡಿಯೋ ಕರೆ ಮಾಡುವಂತೆ ಬೆದರಿಸಿದ್ದ. ಇಲ್ಲವಾದರೆ ದುಡ್ಡು ಕೊಡುವಂತೆ ಬೇಡಿಕೆಯಿಟ್ಟಿದ್ದ. ಇಲ್ಲದಿದ್ದರೆ ಖಾಸಗಿ ಫೋಟೋಗಳನ್ನು ಸ್ನೇಹಿತರು, ಸಂಬಂಧಿಕರಿಗೆ ಕಳುಹಿಸುವುದಾಗಿ ಬ್ಲ್ಯಾಕ್‌ಮೇಲ್‌ ಮಾಡಿದ್ದಾನೆ. ಇದರಿಂದ ಆತಂಕಗೊಂಡ ಮಹಿಳೆಯು ಹಂತ-ಹಂತವಾಗಿ ಆತನಿಗೆ 1.50 ಲಕ್ಷ ರೂ. ಅನ್ನು ಆನ್‌ಲೈನ್‌ ಮೂಲಕ ಕಳುಹಿಸಿದ್ದರು. ಇಷ್ಟಕ್ಕೆ ಸುಮ್ಮನಾಗದ ಆರೋಪಿಯು ಮಹಿಳೆಯ ವೈಯಕ್ತಿಕ ಫೋಟೊಗಳನ್ನು ಸಂಬಂಧಿಕರು ಹಾಗೂ ಸ್ನೇಹಿತರಿಗೆ ವಾಟ್ಸ್‌ಆಯಪ್‌ ಮೂಲಕ ಕಳುಹಿಸಿದ್ದಾನೆ. ಇದರಿಂದ ಕಂಗೆಟ್ಟ ಮಹಿಳೆಯು ಸೈಬರ್‌ ಕ್ರೈಂ ಪೊಲೀಸರಿಗೆ ಆರೋಪಿ ತಲ್ಲೂರಿ ಅರವಿಂದ ಚೌದರಿ ವಿರುದ್ಧ ದೂರು ನೀಡಿದ್ದಾರೆ. ಪೊಲೀಸರು ತನಿಖೆ ನಡೆಸಿ ಆರೋಪಿಗಾಗಿ ಬಲೆ ಬೀಸಿದ್ದಾರೆ.

Related Articles

Leave a Reply

Your email address will not be published. Required fields are marked *

error: Content is protected !!