Site icon newsroomkannada.com

ಚಂದ್ರನಲ್ಲಿ ಇಂದು ಸೂರ್ಯೋದಯ : ನಿದ್ರೆಯಿಂದ ಎದ್ದೇಳುವರೇ ಪ್ರಗ್ಯಾನ್-ವಿಕ್ರಮ್?

ಬೆಂಗಳೂರು: ಚಂದಿರನ ಬಾನಲ್ಲಿ ಇಂದು (ಸೆ.22) ಸೂರ್ಯೋದಯವಾಗಲಿದೆ. ಈ ಹಿನ್ನಲೆಯಲ್ಲಿ ಶಶಿಯ ದಕ್ಷಿಣ ಧ್ರುವದಲ್ಲಿ ಇಳಿದು ಈಗಾಗಲೇ ಒಂದು ಹಂತದ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ಮುಗಿಸಿ ನಿದ್ರೆಗೆ ಜಾರಿದ್ದ ವಿಕ್ರಮ್ ಲ್ಯಾಂಡರ್ (Vikram Lander) ಮತ್ತು ಪ್ರಗ್ಯಾನ್ ರೋವರನ್ನು (Pragyan Rover) ಮತ್ತೆ ಎಚ್ಚರಗೊಳಿಸುವ ಕಾರ್ಯಕ್ಕೆ ಇಸ್ರೋ (ISRO) ವಿಜ್ಞಾನಿಗಳು ಇದೀಗ ಕೈಹಾಕಿದ್ದಾರೆ.

ಸೌರ ಶಕ್ತಿ ಚಾಲಿತ ವ್ಯವಸ್ಥೆಯನ್ನು ಒಳಗೊಂಡಿರುವ ರೋವರ್ ಮತ್ತು ಲ್ಯಾಂಡರ್ ನೊಂದಿಗೆ ಸಂಪರ್ಕ ಸಾಧಿಸಲು ಇಸ್ರೋ ವಿಜ್ಞಾನಿಗಳು ಇದೀಗ ಪ್ರಯತ್ನವನ್ನು ಪ್ರಾರಂಭಿಸಿದ್ದು, ಒಂದು ವೇಳೆ ಈ ಪ್ರಯತ್ನ ಯಶಸ್ಸಿಗೊಂಡಲ್ಲಿ ಇಸ್ರೋ ಬಾಹ್ಯಾಕಾಶ ಕ್ಷೇತ್ರದಲ್ಲಿ ಇನ್ನೊಂದು ಸಾಧನೆಯನ್ನು ಮಾಡಿದಂತಾಗುತ್ತದೆ.

ಪ್ರಗ್ಯಾನ್ ಮತ್ತು ವಿಕ್ರಮ್ ಅನ್ನು ಪುನರ್ ಚಾಲನೆಗೊಳಿಸುವ ಮೊದಲು ಅದು ಒಂದು ನಿರ್ಧಿಷ್ಟ ಉಷ್ಣತೆಗೆ ಬಿಸಿಗೊಳ್ಳುವವರೆಗೆ ಇಸ್ರೋ ವಿಜ್ಞಾನಿಗಳು ಕಾದು ಆ ಬಳಿಕ ಇವೆರಡನ್ನು ಮರುಚಾಲನೆಗೊಳಿಸುವ ಕಾರ್ಯಕ್ಕೆ ಕೈಹಾಕಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

‘ವಿಕ್ರಮ್’ ಸಾಫ್ಟ್ ಲ್ಯಾಂಡ್ ಆಗಿರುವ ‘ಶಿವ ಶಕ್ತಿ ಪಾಯಿಂಟ್’ನಲ್ಲಿ ಇಂದು (ಸೆ.22) ಸೂರ್ಯೋದಯವಾಗುವ ನಿರೀಕ್ಷೆಯಿದ್ದು ಪ್ರಗ್ಯಾನ್ ಮತ್ತು ವಿಕ್ರಮ್ ಮೇಲೆ ಒಂದಷ್ಟು ಪ್ರಮಾಣದ ಬಿಸಿಲು ಬಿದ್ದ ಬಳಿಕ ಅವುಗಳನ್ನು ಮರುಚಾಲನೆಗೊಳಿಸುವ ಕಾರ್ಯ ನಡೆಯಲಿದೆ..’ ಎಂದು ಇಸ್ರೋ ಮಾಹಿತಿ ನೀಡಿದೆ.

ಚಂದ್ರಯಾನ-3ರ (Chandrayaan 3) ಭಾಗವಾಗಿ ವಿಕ್ರಂ ಲ್ಯಾಂಡರನ್ನು ಚಂದಿರನ ದಕ್ಷಿಣ ಧ್ರುವದಲ್ಲಿ ಸಾಫ್ಟ್ ಲ್ಯಾಂಡಿಂಗ್ (Soft Landing) ಮಾಡುವ ಮೂಲಕ ಚಂದಿರನಂಗಳದಲ್ಲಿ ನೌಕೆ ಇಳಿಸಿದ ವಿಶ್ವದ ನಾಲ್ಕನೇ ದೇಶವಾಗಿ ಮತ್ತು ಅಲ್ಲಿನ ದಕ್ಷಿಣ ಧ್ರುವದಲ್ಲಿ ಸಾಫ್ಟ್ ಲ್ಯಾಂಡಿಂಗ್ ಮಾಡಿದ ವಿಶ್ವದ ಮೊದಲನೇ ರಾಷ್ಟ್ರವಾಗಿ ಭಾರತ ಮೂಡಿಬಂದಿತ್ತು.

ಈ ಸಂದರ್ಭದಲ್ಲಿ ಚಂದಿರನ ಒಂದು ದಿನ (ಭೂಮಿಯ ಮೇಲಿನ 14 ದಿನ) ಕಾರ್ಯನಿರ್ವಹಣೆ ಮಾಡುವ ರೀತಿಯಲ್ಲಿ ಈ ವಿಕ್ರಮ್ ಲ್ಯಾಂಡರ್ ಹಾಗೂ ಪ್ರಗ್ಯಾನ್ ರೋವರ್ ಗಳನ್ನು ವಿನ್ಯಾಸಗೊಳಿಸಲಾಗಿತ್ತು.

ಆದರೆ, ಈ 14 ದಿನ ಪ್ರಗ್ಯಾನ್ ಚಂದಿರನ ಅಂಗಳದಲ್ಲಿ ಸುಮಾರು 50 ಮೀಟರ್ ನಷ್ಟು ಓಡಾಟ ನಡೆಸಿ ಅತ್ಯಮೂಲ್ಯ ಮಾಹಿತಿಗಳನ್ನು ಇಸ್ರೋ ನಿಯಂತ್ರಣ ಕೇಂದ್ರಕ್ಕೆ ಕಳುಹಿಸಿಕೊಟ್ಟಿತ್ತು ಮಾತ್ರವಲ್ಲದೇ ಚಂದ್ರನ ನೆಲದಲ್ಲಿ ಸ್ಥಿರವಾಗಿ ನಿಂತಿರುವ ವಿಕ್ರಮ್ ಲ್ಯಾಂಡರ್ ಸಹ ತನಗೆ ವಹಿಸಿದ್ದ ಕೆಲಸಗಳನ್ನು ಸಮರ್ಥವಾಗಿ ನಿಭಾಯಿಸಿತ್ತು.

ಬಳಿಕ ಅಲ್ಲಿ ಸೂರ್ಯಾಸ್ತವಾಗುತ್ತಿದ್ದಂತೆ ಪ್ರಗ್ಯಾನ್ ರೋವರ್ ಮತ್ತು ವಿಕ್ರಮ್ ಲ್ಯಾಂಡರನ್ನು ಇಸ್ರೋ ಸುಷುಪ್ತಿ ಅವಸ್ಥೆಗೆ (ಸ್ಲೀಪಿಂಗ್ ಮೋಡ್) ಕಳುಹಿಸಿದ್ದರು.

ಇದೀಗ 14 ದಿನಗಳ ಬಳಿಕ ಮತ್ತೆ ಶಶಿಯಂಗಳದಲ್ಲಿ ರವಿಕಿರಣ ಬೀಳಲಿದ್ದು ಅಲ್ಲಿನ -200 ಡಿಗ್ರಿಗಿಂತಲೂ ಕಡಿಮೆ ಉಷ್ಣತೆಯನ್ನು ಎದುರಿಸಿಯೂ ಇದೀಗ ರೋವರ್ ಮತ್ತು ಲ್ಯಾಂಡರ್ ನಲ್ಲಿರುವ ಸೋಲಾರ್ ಪ್ಯಾನಲ್ ಗಳು ಮತ್ತು ಇದಕ್ಕೆ ಕನೆಕ್ಟ್ ಆಗಿರುವ ಬ್ಯಾಟರಿ ವ್ಯವಸ್ಥೆ ಸುಸ್ಥಿಯಲ್ಲಿದೆಯೇ ಎಂಬುದನ್ನು ಇಸ್ರೋ ವಿಜ್ಞಾನಿಗಳು ಪರಿಶೀಲಿಸುತ್ತಿದ್ದಾರೆ.

ಒಂದು ವೇಳೆ ಇವೆಲ್ಲವೂ ಸುಸ್ಥಿತಿಯಲ್ಲಿದ್ದು ಮತ್ತೆ ಪ್ರಗ್ಯಾನ್ ಹಾಗೂ ವಿಕ್ರಮ್ ತನ್ನ ಕೆಲಸವನ್ನು ಪ್ರಾರಂಭಿಸಿದರೆ ಅದು ಇಸ್ರೋ ಪಾಲಿಗೆ ಬೋನಸ್ ಆಗಲಿದೆ. ಯಾಕೆಂದರೆ ಚಂದ್ರಯಾನ -3 ರಲ್ಲಿ ಇವುಗಳನ್ನು ಚಂದ್ರನಲ್ಲಿ ಕಳುಹಿಸಿಕೊಟ್ಟ ಸಂದರ್ಭದಲ್ಲಿ ಇವೆರಡನ್ನು ಅಲ್ಲಿನ ಒಂದು ದಿನಕ್ಕೆ ಕಾರ್ಯನಿರ್ವಹಿಸುವ ಮಾದರಿಯಲ್ಲಿ ವಿನ್ಯಾಸಗೊಳಿಸಲಾಗಿತ್ತು.

ಚಂದ್ರಯಾನ-3: ಸಾಫ್ಟ್ ಲ್ಯಾಂಡಿಂಗ್ ಬಳಿಕ ಶಶಿಯಂಗಳದಲ್ಲಿ ಏನೇನಾಯ್ತು?

– ಆ.23ರಂದು ವಿಕ್ರಮ್ ಲ್ಯಾಂಡರ್ ಚಂದಿರನ ದಕ್ಷಿಣ ಧ್ರುವದಲ್ಲಿ ಐತಿಹಾಸಿಕ ಸಾಫ್ಟ್ ಲ್ಯಾಂಡಿಂಗ್ ಮಾಡಿತ್ತು.

– ಆ.24ರಂದು ವಿಕ್ರಮ್ ಲ್ಯಾಂಡರ್ ಗರ್ಭದಲ್ಲಿ ಕುಳಿತಿದ್ದ ಪ್ರಗ್ಯಾನ್ ರೋವರ್ ಯಶಸ್ವಿಯಾಗಿ ಚಂದಿರನ ಅಂಗಳದಲ್ಲಿ ಇಳಿಯುವ ಮೂಲಕ ಭಾರತ ಐತಿಹಾಸಿಕ ‘ಮೂನ್ ವಾಕ್’ ನಡೆಸಿತ್ತು.

– ಆ.27ರಂದು ವಿಕ್ರಮ್ ಲ್ಯಾಂಡರ್ ನಲ್ಲಿರುವ ಚಾಸ್ಟೆ ತನ್ನ ಮೊದಲ ಮಾಹಿತಿಯನ್ನು ನಿಯಂತ್ರಣ ಕೇಂದ್ರಕ್ಕೆ ಕಳುಹಿಸಿಕೊಟ್ಟಿತ್ತು.

– ಆ.28ರಂದು ಎಲ್.ಐ.ಬಿ.ಎಸ್. ತನ್ನಲ್ಲಿದ್ದ ಉಪಕರಣಗಳ ಸಹಾಯದಿಂದ ಚಂದಿರನ ನೆಲದಲ್ಲಿ ಸಲ್ಫರ್ ಇರುವ ಮಾಹಿತಿಯನ್ನು ಕಳುಹಿಸಿಕೊಟ್ಟಿತ್ತು.

– ಆ.30ರಂದು ಪ್ರಗ್ಯಾನ್ ರೋವರ್ ನೊಳಗಿದ್ದ ಎ.ಪಿ.ಎಕ್ಸ್.ಎಸ್. ಖನಿಜಾಂಶಗಳ ಇರುವಿಕೆಯನ್ನು ಪತ್ತೆ ಮಾಡಿತ್ತು.

– ಆ.31ರಂದು ಐ.ಎಲ್.ಎಸ್.ಎಯು ಲ್ಯಾಂಡರ್ ಇಳಿದಿರುವ ಚಂದಿರನ ನೆಲದ ಸುತ್ತ ನಡೆಯುವ ಕಂಪನಗಳನ್ನು ದಾಖಲಿಸಿಕೊಂಡಿತ್ತು. ರಂಭಾ-ಎಲ್.ಪಿ. ಪ್ಲಾಸ್ಮಾ ಅಂಶಗಳ ಇರುವಿಕೆಯನ್ನು ಪತ್ತೆಹಚ್ಚಿತ್ತು.

– ಸೆ.2 ಮತ್ತು 4: ಭೂಮಿಯ ಏಕೈಕ ನೈಸರ್ಗಿಕ ಉಪಗ್ರಹದಲ್ಲಿ ಸೂರ್ಯಾಸ್ತವಾಗಲಿರುವ ಹಿನ್ನಲೆಯಲ್ಲಿ ಪ್ರಗ್ಯಾನ್ ರೋವರನ್ನು ಸೆ.2ರಂದು ಸ್ಲೀಪಿಂಗ್ ಮೋಡ್ ಗೆ ಕಳುಹಿಸಲಾಗಿತ್ತು ಹಾಗೂ ವಿಕ್ರಮ್ ಲ್ಯಾಂಡರನ್ನು ಸೆ.4ರಂದು ಸ್ಲೀಪಿಂಗ್ ಮೋಡ್ ಗೆ ಕಳುಹಿಸಲಾಗಿತ್ತು.

Exit mobile version