ಪುಣೆ: ಪುಣೆಯ ವನವಡಿ ಬಡಾವಣೆಯಲ್ಲಿ ಆಘಾತಕಾರಿ ಘಟನೆಯೊಂದು ಸಂಭವಿಸಿದೆ. ಕ್ಷುಲ್ಲಕ ಕಾರಣಕ್ಕಾಗಿ ಪತ್ನಿ ತನ್ನ ಪತಿಯನ್ನೇ ಕೊಂದಿದ್ದಾಳೆ.
ಏನಿದು ಘಟನೆ : ತನ್ನ ಹುಟ್ಟುಹಬ್ಬಕ್ಕೆ ಗಂಡ ದುಬಾರಿ ಉಡುಗೊರೆ ನೀಡಲಿಲ್ಲವೆಂದು, ಅವಳು ಬಯಸಿದಂತೆ ದುಬೈಗೆ ಪ್ರವಾಸ ಕರೆದುಕೊಂಡು ಹೋಗಲಿಲ್ಲ ಎಂಬ ಕಾರಣಕ್ಕಾಗಿ ದಂಪತಿ ಮಧ್ಯೆ ಜಗಳವಾಗಿದೆ. ತನ್ನ ಸಂಬಂಧಿಕರ ಹುಟ್ಟುಹಬ್ಬ ಆಚರಣೆಗಾಗಿಯೂ ಈ ಹಿಂದೆ ದೆಹಲಿಗೆ ಕರೆದುಕೊಂಡು ಹೋಗಲು ನಿಖಿಲ್ ಒಪ್ಪಲಿಲ್ಲ ಎಂದೂ ಪತ್ನಿ ರೇಣುಕಾ ಅಸಮಾಧಾನಗೊಂಡಿದ್ದರು.
ಈ ಹಿನ್ನೆಲೆಯಲ್ಲಿ ತೀವ್ರ ವಾಗ್ವಾದದ ವೇಳೆ ರೇಣುಕಾ ತನ್ನ ಪತಿ ನಿಖಿಲ್ ಮುಖಕ್ಕೆ ಹೊಡೆದಿದ್ದಾಳೆ. ಗುದ್ದಿದ ರಭಸಕ್ಕೆ ನಿಖಿಲ್ ಅವರ ಮೂಗು ಮತ್ತು ಕೆಲವು ಹಲ್ಲುಗಳು ಮುರಿದಿವೆ. ಭಾರೀ ರಕ್ತಸ್ರಾವದಿಂದ ನಿಖಿಲ್ ಪ್ರಜ್ಞೆ ಕಳೆದುಕೊಂಡರು. ನಂತರ ಸಾವನಪ್ಪಿದ್ದಾರೆ. ಈ ಮಾರಣಾಂತಿಕ ವಾಗ್ವಾದ ಪ್ರಕರಣದಿಂದಾಗಿ ಪೊಲೀಸರು ರೇಣುಕಾ ವಿರುದ್ಧ ಭಾರತೀಯ ದಂಡ ಸಂಹಿತೆ ಸೆಕ್ಷನ್ 302 ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಹೆಚ್ಚಿನ ತನಿಖೆಗಾಗಿ ಅವರನ್ನು ಬಂಧಿಸಲಾಗಿದೆ.
ಆರು ವರ್ಷಗಳ ಹಿಂದೆ, ಸಾವಿಗೀಡಾದ ರಿಯಲ್ ಎಸ್ಟೇಟ್ ನಿರ್ಮಾಣ ಉದ್ಯಮದ ಉದ್ಯಮಿ ನಿಖಿಲ್ ಖನ್ನಾ ಅವರು 38 ವರ್ಷದ ರೇಣುಕಾ ಅವರನ್ನು ಪ್ರೀತಿಸಿ, ವಿವಾಹವಾಗಿದ್ದರು ಎಂದು Pune Times Mirror ವರದಿ ಮಾಡಿದೆ.