ಮುಜಂಟಿ(ಮಿಸ್ರಿ) ಜೇನು ತುಪ್ಪ ಯಾಕೆ ಅಷ್ಟೊಂದು ಔಷಧಿಯುಕ್ತವಾಗಿದೆ ಎಂದರೇ.. ಸಾಮಾನ್ಯವಾಗಿ ಪ್ರಕೃತಿಯಲ್ಲಿ ಹೆಚ್ಚಿನ ಔಷಧೀಯ ಸಸ್ಯಗಳು ಸಣ್ಣ ಸಣ್ಣ ಹೂವುಗಳನ್ನು ಬಿಡುತ್ತದೆ. ಉದಾಹರಣೆಗೆ ತುಳಸಿ,ತುಂಬೆ,ಅಶ್ವಗಂಧ ಇಂತಹ ಸಸ್ಯಗಳ ಹೂವಿಗೆ ಹೆಚ್ಚಾಗಿ ಮುಜಂಟಿ ಮತ್ತು ಕೋಲು ಜೇನುನೊಣಗಳು ಭೇಟಿ ಕೊಡುತ್ತವೆ ಹಾಗೂ ಜೇನುತುಪ್ಪ ಸಂಗ್ರಹಿಸುತ್ತವೆ. ಈ ಮುಜಂಟಿ ಜೇನುನೊಣಗಳ ಗಾತ್ರ ಕೂಡಾ ಸಣ್ಣದಿದ್ದು, ಸಣ್ಣ ಸಣ್ಣ ಹೂವುಗಳಿಂದ ಪರಾಗ, ಮಧು ಸಂಗ್ರಹಿಸಲು ಯೋಗ್ಯವಾಗಿದೆ.
ಅದರಲ್ಲೂ ಮುಜಂಟಿ ಜೇನುನೊಣಗಳು ಸಂಗ್ರಹಿಸುವ ಜೇನುತುಪ್ಪವನ್ನೂ ಕೂಡ ಪ್ರಕೃತಿಯಲ್ಲಿ ಮರಗಿಡಗಳು ಚಿಗುರುವಾಗ ಒಸರುವ ಅಂಟು-ಗೋಂದುಗಳನ್ನು ಸಂಗ್ರಹಿಸಿ ತಂದು, ಅದರಿಂದ ಗೋಳಗಳನ್ನು ಮಾಡಿ,ಆ ಗೋಳಗಳಲ್ಲಿ ಜೇನುತುಪ್ಪವನ್ನು ತುಂಬಿಸಿ ಇಡುತ್ತವೆ!! ಇದೆಲ್ಲವೂ ಪ್ರಕೃತಿಯಿಂದ ದೊರೆಯುವ ಹಲವಾರು ವಿವಿಧ ಬಗೆಯ ಮರ,ಗಿಡ, ಬಳ್ಳಿ, ಮೂಲಿಕೆ ಸಸ್ಯಗಳಿಂದ! (ಉದಾ: ಹಲಸು , ಮಾವು, ಹುಣಸೆ….)ಆದುದರಿಂದಲೇ ಹಿಂದಿನ ಕಾಲದಲ್ಲಿ ಔಷಧೀಯ ಬಳಕೆಯಲ್ಲಿ ಹೆಚ್ಚಾಗಿ ಉಪಯೋಗಿಸುತ್ತಿದ್ದದ್ದು ಇದೇ ಮುಜಂಟಿ ಜೇನು ತುಪ್ಪವನ್ನೇ….!
ಈಗೀಗ ಹಲವಾರು ಸಂಶೋಧನೆಗಳಿಂದಲೂ ಮುಜಂಟಿ ಜೇನುತುಪ್ಪದಲ್ಲಿ ಅಧಿಕ ಪ್ರಮಾಣದ ಆಂಟಿಆಕ್ಸಿಡೆಂಟ್ ಇದೆಯೆಂದು ಸಾಬೀತಾಗಿದೆ. ಇದರ ಸೇವನೆಯಿಂದ ಶರೀರದಲ್ಲಿ ಪ್ರತಿರೋಧ ಶಕ್ತಿ ತುಂಬುತ್ತದೆ. ಮೊದಲಿಂದಲೂ ಚಿಕ್ಕ ಮಕ್ಕಳ ಔಷಧಿಯಲ್ಲಿ ಹೆಚ್ಚು ಬಳಕೆಯಲ್ಲಿದದ್ದು ಇದೇ ಮುಜಂಟಿ ಜೇನುತುಪ್ಪ.
– ಪುದ್ಯೋಡು ರಾಮಚಂದ್ರ