ಲಿಂಗ ಸೂಕ್ಷ್ಮತೆ, ಲಿಂಗ ಸಮಾನತೆ ಇವೆಲ್ಲ ಪ್ರತಿನಿತ್ಯ ನಾವು ಕೇಳುವಂತಹ ವಿಚಾರಗಳು. ಬಹಳ ದೊಡ್ಡಮಟ್ಟದಲ್ಲಿ ಚರ್ಚೆಯಾಗುತ್ತಿರುವ ವಿಷಯವೂ ನಿಜ. ಆದರೆ ಇವೆಲ್ಲವೂ ತೋರಿಕೆಗೆ ಮಾತ್ರವೇ ಅಥವಾ ಕಾರ್ಯರೂಪದಲ್ಲಿದೆಯೇ ಎಂಬ ಪ್ರಶ್ನೆಗೆ ಬಹಳಷ್ಟು ಮಂದಿ ಕೊಡುವ ಉತ್ತರ ‘ಇಲ್ಲ ಎಂಬುದಾಗಿಯಲ್ಲದೆ ಹೌದು ಸಮಾನತೆ ಜಾರಿಯಲ್ಲಿದೆಯೆಂದು ಒಪ್ಪಿಕೊಳ್ಳುವವರ ಸಂಖ್ಯೆ ಕಡಿಮೆಯೇ. ಹಾಗಿದ್ದರೆ ಹೀಗೆ ಯಾಕಾಯಿತು! ಈ ಸಮಾನತೆಯೆಂಬುದನ್ನು ಒಪ್ಪಿಕೊಳ್ಳಲು ನಮಗಿರುವ ಅಡ್ಡಿಯಾವುದು ಎಂದು ಯಾವತ್ತಾದರೂ ಯೋಚಿಸಿದ್ದೇವೆಯೇ? ಇಲ್ಲಿಯೂ ಕೂಡಾ ಗೊಂದಲಗಳು ಹಲವಿದೆ. ಅದೇನೇ ಇರಲಿ ಸಮಾನತೆ ಎಲ್ಲಿಂದ ಆರಂಭವಾಗಬೇಕು ಎಂಬುದಷ್ಟೇ ನಾವು ಯೋಚಿಸಬೇಕಾಗಿರುವುದು ಸದ್ಯಕ್ಕೆ.
ಅದೊಂದು ಕಾಲವಿತ್ತು. ಒಂದೊಂದೇ ವರ್ಷದಂತರದ ಮಕ್ಕಳು ಮನೆಯೊಳಗೆ. ಈ ಕಾಲಘಟ್ಟದಲ್ಲಿ ಮನೆಯ ಹಿರಿಮಗಳಾಗಿದ್ದರೆ ಆಕೆಯ ಸ್ಥಾನ ಬಹಳ ಜವಾಬ್ದಾರಿಯದ್ದು. ಆಕೆಗೆ ಶಾಲೆ ಮೆಟ್ಟಿಲೇರುವ ಅದೆಷ್ಟೇತವಕವಿದ್ದರೂ ಅದುಮಿ ಸುಮ್ಮನಿರಬೇಕಿತ್ತು ಕಾರಣ ತನಗಿಂತ ಕಿರಿಯವರು ಇನ್ನೂ ಶಾಲೆಗೆ ಹೋಗುವ ವಯಸ್ಸಿನವರಲ್ಲ! ಮುಂದೊಂದು ದಿನ ತನಗಿಂತ ಕಿರಿಯವರು ಶಾಲೆಗೆ ಹೋಗುವ ಪ್ರಾಯಕ್ಕೆ ಬಂದು ನಿಂತಾಗ ಆಕೆಯನ್ನೂ ಶಾಲೆಗೆ ಸೇರಿಸುತ್ತಿದ್ದರು, ಇಲ್ಲಿ ಆಕೆ ಕಲಿಯಬೇಕೆಂಬುದಕ್ಕಿಂತಲೂ ಹೆಚ್ಚಾಗಿ ಸಣ್ಣವರಿಗೆ ಕಾವಲಾಗಿ ಆಕೆಯನ್ನು ಕಳುಹಿಸಲಾಗುತ್ತಿತ್ತು. ಇನ್ನು ಕಿರಿಮಗಳಿಗೆ ಶಾಲೆ, ಓದುಇವೆಲ್ಲ ಮರೀಚಿಕೆಯಾದ ಪ್ರಸಂಗವೇ ಹೆಚ್ಚು ಯಾಕೆಂದರೆ ಶಾಲೆಗೆ ಹೋಗುತ್ತಿದ್ದ ಅಣ್ಣಂದಿರ ಚಾಕರಿಯ ನೊಗ ಹೊತ್ತವಳು. ಶಾಲೆಗೆ ಹೋಗಿ ಬರುತ್ತಿದ್ದ ಅಣ್ಣಂದಿರ ಊಟ ತಿಂಡಿಯತ್ತ ಅವಳಿರುತ್ತಿದ್ದಳು. ಆದರೂ ಇವೆಲ್ಲವನ್ನೂ ಆಕೆ ಬಹಳ ಖುಷಿಯಿಂದ ಮಾಡುತ್ತಿದ್ದಳು, ಅವರ ನಗುವಿನಲ್ಲಿ ತನ್ನಿರವಿದೆಯೆಂಬ ಭಾವ ಅವಳನ್ನು ಆವರಿಸಿತ್ತು. ಇಲ್ಲಿ ಹತಾಶಭಾವ ವಿರಳ, ತನಗೆ ಮನೆಯ ಗಂಡುಮಕ್ಕಳಂತೆ ಬದುಕುವ ಹಕ್ಕಿಲ್ಲವೇ? ನಾನು ನನ್ನಷ್ಟಕ್ಕೇ ಸ್ವತಂತ್ರ ಬದುಕು ಬಾಳುವುದು ತಪ್ಪೇ? ಇಂತಹ ಪ್ರಶ್ನೆಗಳು ಆಕೆಯ ಮನದೊಳಗೆ ಇದ್ದಿರಲಿಲ್ಲವೆಂದಲ್ಲ ಆದರೆ ಈ ಪ್ರಶ್ನೆಗಳಿಗೆ ಆಕೆ ಹುಡುಕಿದ ಉತ್ತರ ‘ನಾನು ಹೆಂಗಸು ಹೀಗೆಯೇ ಬಾಳಬೇಕು, ಮನೆಯೊಳಗಿನ ಪ್ರಪಂಚ ನನ್ನದು ಹಾಗೂ ನಾನೇ ಒಡತಿ’. ಇದೇ ಕಾರಣಕ್ಕೆ ಗಂಡೆಂಬವನು ಹೊರಗಿನ ವ್ಯವಹಾರ ಲೋಕದೊಳಗೆ ಸುತ್ತಿ ಬಂದರೂ ಮನೆಯೊಳಗಿನ ವಿಷಯಗಳಿಗೆ ತಲೆ ಹಾಕುತ್ತಿದ್ದುದ್ದು ಬಹಳ ಅಪರೂಪ. ‘ಅಡುಗೆಮನೆ ಹೆಂಗಸರ ಸಾಮ್ರಾಜ್ಯ ಎಂಬ ಮಾತು ಹುಟ್ಟಿಕೊಂಡಿರುವುದಕ್ಕೂ ಇದೇ ಕಾರಣ. ಈ ಸಾಮ್ರಾಜ್ಯದಲ್ಲಿ ಆಳುವಾಕೆ ಅಳುವಾಕೆ ಆಕೆಯಷ್ಟೇ. ಮನೆಯಲ್ಲಿ ಹೆಣ್ಣು ಹುಟ್ಟಿತೆಂದರೆ ಎಷ್ಟು ಬುದ್ಧಿವಂತೆಯಾದರೇನು? ನಮಗೆ ಸಿಗದವಳು, ಹೆಣ್ಣು ಮಕ್ಕಳೇನಿದ್ದರೂ ಪರರ ಸೊತ್ತು’ ಇಂತಹ ಮಾತುಗಳಿಗಷ್ಟೇ ಅವಕಾಶವಿದ್ದ ಕಾಲವದು.
ಆದರೆ ಈ ಕಾಲದಲ್ಲೂ ಮಹಿಳೆ ಕುಗ್ಗಲಿಲ್ಲ ಅಥವಾ ಸೋತಿಲ್ಲ. ತನ್ನ ಮಿತಿಯೊಳಗೆ ತಾನು ಬಹಳಷ್ಟು ಸಾಧಿಸಿದವಳು. ಯಾರೇನೇ ಅಂದರೂ ಹುಟ್ಟಿದ ಮತ್ತು ಮೆಟ್ಟಿದ ಮನೆಯ ಸೇತುವಾಗಿ ಎರಡು ಕುಟುಂಬಗಳ ನಡುವಿನ ಸ್ನೇಹವಾಗಿ ತನ್ನ ಸ್ಥಾನವನ್ನು ಕಾಯ್ದುಕೊಳ್ಳುತ್ತಾ ಬಂದಗಟ್ಟಿಗಿತ್ತಿ. ಇಲ್ಲಿ ಸಮಾನತೆಯ ಬಗ್ಗೆಯಾಗಲಿ ಅಥವಾ ಸೂಕ್ಷ್ಮತೆಯ ಬಗ್ಗೆಯಾಗಲಿ ಆಕೆಗರಿವಿರಲಿಲ್ಲ. ತಾನು ತನ್ನ ಮನೆ-ಕುಟುಂಬ ಈ ಬಗ್ಗೆ ಯೋಚಿಸುತ್ತಾ ಒಂದಿಷ್ಟು ಶೋಷಣೆಗಳನ್ನು ಅವಮಾನಗಳನ್ನು ಸಹಿಸಿಕೊಳ್ಳುತ್ತಾ ಬಂದಳೆಂದರೆ ಅದು ಆಕೆಯ ದೌರ್ಬಲ್ಯವಂತೂ ಖಂಡಿತಾ ಅಲ್ಲ. ಲಿಂಗ ಸೂಕ್ಷ್ಮತೆಯ ಬಗ್ಗೆ ತಿಳಿದಿರದ ಆ ಕಾಲದಲ್ಲಿ ತನಗೆ ಅರಿವಿಲ್ಲದಂತೆಯೇ ಆ ವ್ಯವಸ್ಥೆಯಡಿಯಲ್ಲಿ ಸ್ತ್ರೀ ಬದುಕಿದ ಉದಾಹರಣೆಯೂ ಕೆಲವಿದೆ.
ಇಂದು ನಾವು ಮಾತನಾಡುವ ಸಮಾನತೆ, ಸೂಕ್ಷ್ಮತೆ ಎಂಬ ವಿಷಯಗಳು ಅಂದಿನಂತೆ ಮನೆಯೊಳಗೆ ಮಾತ್ರ ಸೀಮಿತವಲ್ಲ ಎಂಬುದು ಎಷ್ಟು ಸತ್ಯವೋ ಅಂತೆಯೇ ಇವುಗಳು ಮನೆಯೊಳಗಿನಿಂದಲೇ ಆರಂಭವಾಗಬೇಕೆನ್ನುವುದೂ ಅಷ್ಟೇ ಸತ್ಯ. ಅಂದಿನ ಆ ದಿನಗಳಲ್ಲಿ ಹುಡುಗಿ ಮನೆಯೊಳಗೆ ಹೇಗಿರಬೇಕೆಂಬ ಪಾಠದ್ದಷ್ಟೇ ಅಗತ್ಯವಿತ್ತು ಆದರೆ ಈಗ ಹಾಗಲ್ಲ, ಗಂಡಿಗೆ ಸರಿಸಮವಾಗಿ ನಿಂತ ಹೆಣ್ಣಿಗೆ ಹೊರಗೆ ಹೇಗಿರಬೇಕೆನ್ನುವ ಪಾಠವೂ ಅಗತ್ಯವಾಗುತ್ತದೆ. ಎಷ್ಟು ಹೆಣ್ಣುಗಂಡು ಸಮಾನವೆಂದು ಹೇಳಿದರೂ ‘ಇಲ್ಲ ನೀನು ಹುಡುಗಿ, ಗಂಡಾಗಲಾರೆ’ ಎನ್ನುವುದು ಗಂಡಸಲ್ಲ ಬದಲಾಗಿ ಹೆಣ್ಣೇ. ಹಾಗಿದ್ದರೆ ಮಹಿಳೆಗಿರುವ ಪ್ರಸ್ತುತದ ಸವಾಲೇನು ಎಂದು ಕೇಳಿದರೆ ಸ್ವಲ್ಪ ಮಟ್ಟಿಗೆ ಹೆಣ್ಣೆಂಬ ಮೀಸಲಾತಿಯೇ ಮುಳುವಾಗಿದ್ದೂ ಇದೆ.
ಔದ್ಯೋಗಿಕ ರಂಗದಲ್ಲಿ ಮುಂಚೂಣಿಯಲ್ಲಿರುವ ಇಂದು ಮಹಿಳೆಗಿರುವ ನಿಜ ಸವಾಲುಗಳೇನು? ‘ವ್ಯಾವಹಾರಿಕ ಜಗತ್ತಿನ ಆಗುಹೋಗುಗಳ ಬಗ್ಗೆ ವಿಮರ್ಶಿಸಬಲ್ಲ ಹೆಣ್ಣು ತನ್ನ ವೈಯಕ್ತಿಕ ಬದುಕಿನಲ್ಲಿ ಸೋಲುತ್ತಿದ್ದಾಳೆ’ ಈ ಮಾತು ನಿಜವೇ? ಹೆಣ್ಣು ಸೋತಿದ್ದೇ ಅಥವಾಗೆದ್ದಿದ್ದೇ? ಸೌಟು ಹಿಡಿಯುವ ಮಹಿಳೆ ನಾಡು ಆಳಿರುವುದು ಇತಿಹಾಸದಲ್ಲೇ ಇದೆಯೆಂದಾದ ಮೇಲೆ ಈಗಿನ ದಿನಗಳಲ್ಲಿ ಯಾಕೆ ಅವಳ ಬಗ್ಗೆ ಅಣಕುಗಳು ಹೆಚ್ಚಾಗುತ್ತಿದೆ? ಹೆಣ್ಣಾದರೇನು! ಗಂಡಾದರೇನು! ಮನೆಗೊಂದು ಮಗು ಎಂಬುದು ಈಗಿನ ನಿಲುವುಗಳಾದರೂ ಹೆಣ್ಣು ಹುಟ್ಟಿದೊಡನೆ ಸ್ವಲ್ಪ ಮಟ್ಟಿನ ಭಯ ಕೆಲವು ಹೆತ್ತವರಲ್ಲಿ ಕಾಣುವುದೂ ಇದೆ. ಇದು ಆಕೆ ಮುಂದೊಂದು ದಿನ ಮನೆ ಬಿಟ್ಟು ಹೋಗುವವಳು ಎಂದಲ್ಲ ಬದಲಾಗಿ ಇಂದಿನ ದಿನಗಳಲ್ಲಿ ಹೇಗೆ ಅವಳನ್ನು ಜೋಪಾನವಾಗಿ ಕಾಯುವುದೆಂದು. ಮಗಳು ಹುಟ್ಟಿದೊಡನೆ ಹುಟ್ಟಿಕೊಳ್ಳುವ ಈ ಭಯ ಮಗನಾದರೆ ಇಲ್ಲವೇ! ದಾರಿ ತಪ್ಪಲು ಕೂಡಾ ಲಿಂಗ ತಾರತಮ್ಯವಿದೆಯೇ! ಅಥವಾ ಒಂದು ಲಿಂಗದವರು ತಪ್ಪಿ ನಡೆಯುವುದಷ್ಟೇ ಅಪರಾಧವೇ! ತಪ್ಪು ಯಾರಿಂದಾದರೂ ಅದು ತಪ್ಪೇ ಅಲ್ಲಿ ನೀನು ಹೆಣ್ಣು ಅವನು ಗಂಡು ಎಂಬ ತಾರತಮ್ಯದ ಅಗತ್ಯವಿದೆಯೇ ಎಂಬುದಷ್ಟೇ ಅನುಗಾಲ ಕಾಡುವ ಒಗಟು.
ನೂಲು ನೇಯ್ದಂತೆ ಸೀರೆ
“ಎಷ್ಟು ಹೇಳಿದ್ರೂ ಕೇಳೋಲ್ಲ, ಒಬ್ಬೊಬ್ಳೇ ರೂಮ್ ಬಾಗಿಲು ಹಾಕಿ ಕೂತ್ಕೋತಾಳೆ, ಬಾ ಮಾತಾಡು ಅಂದ್ರೂ ಮಾತನಾಡೋಲ್ಲ ಹೀಗೆ ಮೊನ್ನೆ ಪರಿಚಯಸ್ಥರೊಬ್ಬರು ತಮ್ಮ ಮಗಳ ಬಗ್ಗೆ ಹೇಳಿಕೊಂಡರು. “ಯಾಕೆ ಬೇರೆಕೋಣೆಯಲ್ಲಿ ಬಿಡ್ತೀರಿ! ಎಲ್ಲರೂ ಇರೋಕಡೆ ದಿನಕ್ಕೊಮ್ಮೆಯಾದ್ರೂ ಸೇರೋಕೆ ಹೇಳಿ” ಎಂದಾಗ “ಪ್ರೈವೆಸಿ ಬೇಕೆಂದು ಬೇರೆ ರೂಮ್ ಮಾಡ್ಕೊಟ್ವಿ, ಈಗ ತಪ್ಪೆನಿಸ್ತಿದೆ. ನಾವು ಚಿಕ್ಕವರಿದ್ದಾಗ ಇದೆಲ್ಲ ಎಲ್ಲಿತ್ತು? ಓದೋಕೆ ಏಕಾಂತ ಬೇಕಿದ್ರೆ ಮರದ ಕೆಳಗೆ ಹೋಗಿ ಓದ್ತಿದ್ದೆವು” ಅವರು ಹೇಳಿದ್ದು ಹೌದಾದರೂ “ಈ ಪ್ರೈವೆಸಿ ಹುಚ್ಚು ಹಿಡಿಸಿದವ್ರು ನಾವೇ ಆಗಿರೋವಾಗ ಬಿಡಿಸೋದು ಕಷ್ಟ” ಎಂದಿದ್ದೇ “ಹೌದು, ಬಿತ್ತಿದ್ದೇ ಅಲ್ವಾ ಬೆಳೆಯೋದು” ಮಾತು ನಿರಾಸೆಯಲದ್ದಾದರೂ ವಿಷಯದಲ್ಲಿ ಹುರುಳಿದೆ ಎನ್ನಿಸಿತು. ಪ್ರೈವೆಸಿಯ ಕಾರಣಕ್ಕಾಗಿ ಮನಗಳನ್ನು ಮನೆಯ ಒಂದೊಂದು ಕೋಣೆಗಳಿಗೆ ಸೀಮಿತವಾಗಿರಿಸಿದರೆ ಮನ ತೆರೆದುಕೊಳ್ಳುವುದಾದರೂ ಹೇಗೆ? ಮನಸ್ಸು ಮುಕ್ತವಾಗಿ ವಿಹರಿಸದೆ ಲೋಕವನ್ನು ಅರಿಯುವ ಬಗೆಯಾದರೂ ಎಲ್ಲಿಹುದು? ಅಂಗೈಯಲ್ಲಿ ಜಗತ್ತನ್ನೇ ನೋಡಬಹುದಾದ ಕಾಲಘಟ್ಟದಲ್ಲಿ ನಾವಿದ್ದರೂ ಅಂಗೈ ಮನಸಿನ ಕನ್ನಡಿಯಲ್ಲ ಮತ್ತು ನೋಡುವುದಕ್ಕೂ ಸ್ವತ: ಅನುಭವಿಸುವುದಕ್ಕೂ ವ್ಯತ್ಯಾಸ ಬಹಳ.
ಚೆಂದ ವಿನ್ಯಾಸದ ಸೀರೆಯೊಂದನ್ನು ಗಮನಿಸಿ, ಒತ್ತೊತ್ತಾಗಿ ಈ ನೂಲು ಇಲ್ಲಿಯೇ ಹೀಗೆಯೇ ಇರಬೇಕೆಂಬ ಅಳತೆಯಲ್ಲಿ ನೇಯದೇ ಹೋಗಿದ್ದರೆ ಆ ಅಂದ ಸೀರೆಯಲ್ಲಿರುತ್ತಿತ್ತೇ! ಅಥವಾ ನೇಯುವ ವೇಳೆ ನೂಲು ತುಂಡಾಗಿರುತ್ತಿದ್ದರೆ ವಿನ್ಯಾಸ ಮೂಡುತ್ತಿತ್ತು ಆದರೆ ನಿರೀಕ್ಷಿಸಿದ ಅಂದ ಬರುತ್ತಿತ್ತೇ! ಹಾಗಿದ್ದರೆ ಸೀರೆಯ ಅಂದ ಅಡಗಿರುವುದು ವಿನ್ಯಾಸಗಾರನ ಕೌಶಲ್ಯದಲ್ಲಿ ಅಷ್ಟೇ ಅಲ್ಲ ನೇಯುವವನ ಚತುರತೆಯಲ್ಲೂ ಹೌದು. ಒಂದು ವೇಳೆ ನೇಯ್ಗೆಯವನ ಕೈ ಪಳಗದೆಯೇ ಹೋಗುತ್ತಿದ್ದರೆ ವಸ್ತ್ರದ ಚೆಂದಕ್ಕೆ ಎಲ್ಲೋ ಒಂದೆಡೆ ಕುಂದುಂಟಾಗುತ್ತಿತ್ತು ಎಂಬುದೂ ನಿಜ.
ನೇಯುವ, ತೊಡುವ ಬಟ್ಟೆಯಲ್ಲಿ ಅಷ್ಟು ವೈವಿಧ್ಯಗಳನ್ನೂ ಒಪ್ಪವಾದ ವಿನ್ಯಾಸವನ್ನೂ ಹುಡುಕುವ ನಾವು ನಮ್ಮನ್ನೊಮ್ಮೆ ಈ ವಸ್ತ್ರಕ್ಕೆ ಹೋಲಿಸಿಕೊಂಡು ನೋಡೋಣ. ನಮ್ಮನ್ನು ನಾವು ಬೆಳೆಸಿಕೊಳ್ಳುವ ರೀತಿ ನೇಯುವ ಪರಿಯಾದರೆ ಒಟ್ಟು ವ್ಯಕ್ತಿತ್ವ ನೇಯ್ದ ವಸ್ತ್ರದಂತೆ ಕಾಣುತ್ತದೆ. ಹಾಗಿದ್ದರೆ ಬದುಕಿನ ನೇಯ್ಗೆಗಾರ ಯಾರೆಂದು ಕೇಳಿದರೆ ಅದು ನಾವಷ್ಟೇ ಅಲ್ಲ, ನಾವು ಬೆಳೆಯುವ ವಾತಾವರಣ, ನಮ್ಮನ್ನು ಬೆಳೆಸುವವರೂ ಅಷ್ಟೇ ಮುಖ್ಯವಾಗುತ್ತಾರೆ. ಇಂತಹ ಒಂದು ಆರೋಗ್ಯಕರ ಪರಿಸರವನ್ನು ಕಟ್ಟಿಕೊಡುವವರು ಹೆತ್ತವರಾಗಿ ರುವುದರಿಂದ ಸದಾ ಕಾಲ ಮಕ್ಕಳನ್ನು ದೂಷಿಸುವುದೂ ಒಂದು ಅಪರಾಧ.
ಇಲ್ಲಿ ಸ್ವಾಮಿ ವಿವೇಕಾನಂದರ “ಸದೃಢ ಯುವಜನತೆಯನ್ನು ದೇಶಕ್ಕೆ ಕೊಡುವ ಬಗೆ ಹೇಗೆಂದರೆ ಬಿತ್ತಿದ ಬೆಳೆಗೆ ಕಾಲಕಾಲಕ್ಕೆ ಹೇಗೆ ಗೊಬ್ಬರ, ನೀರುಣಿಸಿ ಪೋಷಿಸುತ್ತೇವೆಯೋ ಅಂತೆಯೇ ಮಕ್ಕಳಿಗೂ ಸೂಕ್ತ ಆಚಾರ ವಿಚಾರ, ನಡೆಯಬೇಕಾದ ದಾರಿಯ ಬಗ್ಗೆ ಅರಿವು ಮೂಡಿಸಿದಾಗಲಷ್ಟೇ ದೇಶ ಬಲಿಷ್ಠ ಯುವಪೀಳಿಗೆಯನ್ನು ಹೊಂದಲು ಸಾಧ್ಯ ಮತ್ತು ಅಂತಹ ಸುಶಿಕ್ಷಿತ ಯುವ ಪೀಳಿಗೆ ಮಾಡುವ ತಪ್ಪುಗಳೂ ಮುಕ್ಕಾಲು ಪಾಲು ಕಡಿಮೆ” ಎಂಬ ಮಾತನ್ನು ನೆನಪಿಸಿಕೊಳ್ಳಬೇಕಾಗುತ್ತದೆ.
ಯುವಜನತೆ ಸರಿಯಿಲ್ಲ ಎಂದು ಆರೋಪಿಸುವ ಬದಲಾಗಿಯುವ ಜನತೆಗೆ ಮೌಲ್ಯಯುತ ಶಿಕ್ಷಣದ ಬಗ್ಗೆ ಅರಿವು ಮೂಡಿಸಬೇಕಾಗಿರುವುದು ಪ್ರತಿಯೊಬ್ಬರ ಕರ್ತವ್ಯ ಹಾಗೂ ಈ ಮೂಲಕ ದೇಶಕ್ಕೆ ಸುಶಿಕ್ಷಿತ ನಾಗರಿಕರನ್ನು ಕೊಡುವ ಮೂಲಕ ವಿವೇಕಾನಂದರ ಭವ್ಯ ಭಾರತದ ಕನಸನ್ನು ನನಸಾಗಿಸೋಣ. ನೂಲು ನೇಯ್ದಂತೆ ಸೀರೆಯಾಗಿರುವುದರಿಂದ ನೇಯುವ ನೂಲು ಗಟ್ಟಿಯಾಗಿರಲಿ ಅನುಗಾಲ ಸೀರೆ ಅಂದ ಕಳೆದುಕೊಳ್ಳದಂತೆ ಅಲ್ವೇ?
ಅಕ್ಷತಾರಾಜ್ ಪೆರ್ಲ