Site icon newsroomkannada.com

ತನ್ನ ಪುತ್ರನನ್ನೇ ಕೊಂದ ಸ್ಟಾರ್ಟಪ್ ಕಂಪನಿ ಸಿಇಒ ಸುಚನಾ ಯಾರು ಗೊತ್ತಾ?

ಪಣಜಿ: ಗೋವಾದಲ್ಲಿ ದಾರುಣ ಘಟನೆಯೊಂದು ನಡೆದುಹೋಗಿದೆ. ಗೋವಾದಲ್ಲಿ ತನ್ನ ನಾಲ್ಕು ವರ್ಷದ ಮಗನನ್ನು ಕೊಂದ ಆರೋಪದ ಮೇಲೆ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಸ್ಟಾರ್ಟಪ್ ಕಂಪನಿಯ CEO 39 ವರ್ಷದ ಸುಚನಾ ಸೇಠ್ ಳನ್ನು ಬಂಧಿಸಲಾಗಿದೆ. ಪುತ್ರನ ಮೃತದೇಹವನ್ನು ಸೂಟ್‌ಕೇಸ್‌ನಲ್ಲಿ ತುಂಬಿಸಿ ಗೋವಾದಿಂದ ಕರ್ನಾಟಕದ ಕಡೆ ಪ್ರಯಾಣಿಸುವಾಗ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾಳೆ. ಈ ಕ್ರೂರ ವರ್ತನೆ ತೋರಿದ ಸುಚನಾ ಸೇಠ್‌ ಯಾರು ಎಂಬುದನ್ನು ನೋಡೋಣ.

The Mindful AI Labನ ಸಿಇಒ ಆಗಿರುವ ಸುಚನಾ ಸೇಠ್, ಕಳೆದ ನಾಲ್ಕು ವರ್ಷಗಳಿಂದ ಈ ಸಂಸ್ಥೆಯನ್ನು ಮುನ್ನಡೆಸುತ್ತಿದ್ದಳು. ಈ ಸಂಸ್ಥೆಯು ಕೃತಕ ಬುದ್ಧಿಮತ್ತೆಯ ಸುಧಾರಣೆಯತ್ತ ಗಮನ ಕೇಂದ್ರೀಕರಿಸಿತ್ತು. 2021 ರ ಎಐ ಎಥಿಕ್ಸ್‌ನಲ್ಲಿ ಟಾಪ್ 100 ಬ್ರಿಲಿಯಂಟ್ ಮಹಿಳೆಯರಲ್ಲಿ ಈಕೆಯೂ ಒಬ್ಬಳಾಗಿದ್ದಾಳೆ.

AI ನೀತಿಶಾಸ್ತ್ರ ತಜ್ಞ ಮತ್ತು ಡೇಟಾ ವಿಜ್ಞಾನಿಯಾಗಿದ್ದು, ಡೇಟಾ ಸೈನ್ಸ್ ತಂಡಗಳಿಗೆ ಮಾರ್ಗದರ್ಶನ ನೀಡುವಲ್ಲಿ 12 ವರ್ಷಗಳ ಅನುಭವವನ್ನು ಹೊಂದಿದ್ದಾಳೆ. ಸುಚನಾ ಸೇಟ್ ಬರ್ಕ್ ಮನ್ ಕ್ಲೈನ್ ಸೆಂಟರ್ ನ ಅಂಗಸಂಸ್ಥೆಯಾಗಿ ಎರಡು ವರ್ಷಗಳ ಕಾಲ ಕಾರ್ಯನಿರ್ವಹಿಸಿದ್ದಳು. ಅಲ್ಲಿ ಅವರು ಕೃತಕ ಬುದ್ಧಿಮತ್ತೆ ನಿರ್ವಹಣೆಯ ಮೌಲ್ಯಗಳಿಗೆ ಕೊಡುಗೆ ನೀಡಿದ್ದಳು. ಇದಲ್ಲದೆ ಮೆಸ್ಸಾಚುಸ್ಸೆಟ್ಸ್ ನ ಬೋಸ್ಟನ್ ನಲ್ಲಿ ಜವಾಬ್ದಾರಿಯುತ ಯಂತ್ರ ಕಲಿಕೆಯನ್ನೂ ನಡೆಸಿದ್ದಳು.

The Minduful AI Lab ಅನ್ನು ಸ್ಥಾಪಿಸುವುದಕ್ಕೂ ಮುನ್ನ ಬೆಂಗಳೂರಿನ ಬೂಮರಾಂಗ್ ಕಾಮರ್ಸ್ ಸಂಸ್ಥೆಯಲ್ಲಿ ಹಿರಿಯ ದತ್ತಾಂಶ ಎಂಜಿನಿಯರ್ ಆಗಿದ್ದಳು. ಕೋಲ್ಕತ್ತಾ ವಿಶ್ವವಿದ್ಯಾಲಯದಿಂದ ಖಗೋಳ ಭೌತವಿಜ್ಞಾನದೊಂದಿಗೆ ಪ್ಲಾಸ್ಮಾ ಭೌತಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಯನ್ನೂ ಸುಚನಾ ಸೇಠ್ ಪಡೆದಿದ್ದಾಳೆ.

2020ರಲ್ಲಿ ತನ್ನ ಪತಿಯಿಂದ ಸುಚನಾ ಸೇಠ್‌ ವಿಚ್ಛೇದನ ಪಡೆದಿದ್ದಳು. ಆ ಬಳಿಕ ಪ್ರತಿ ರವಿವಾರ ತಮ್ಮ ಪುತ್ರನನ್ನು ನೋಡಲು ಸುಚನಾ ಸೇಠ್ ಪತಿಗೆ ಕೋರ್ಟ್ ಅನುಮತಿ ನೀಡಿತ್ತು. ಈ ಹಿನ್ನೆಲೆಯಲ್ಲಿ ಒಂದು ವೇಳೆ ಪತಿಯು ತನ್ನ ಪುತ್ರನನ್ನು ಭೇಟಿಯಾಗಲು ಪ್ರಾರಂಭಿಸಿದರೆ, ಆತನ ಮೇಲೆ ಪತಿ ಹಿಡಿತ ಸಾಧಿಸಬಹುದು ಎಂದು ಸುಚನಾ ಭಯಭೀತಳಾಗಿದ್ದಳು. ಹೀಗಾಗಿ ತನ್ನ ಪುತ್ರನನ್ನು ಭೇಟಿಯಾಗಲು ಪತಿ ಬರುವುದಕ್ಕೂ ಮುಂಚಿತವಾಗಿಯೇ ಆತನನ್ನು ಕೊಲೆ ಮಾಡಿದ್ದಾಳೆ ಎಂದು ತಿಳಿದು ಬಂದಿದೆ.

ಸುಚನಾ ಪಶ್ಚಿಮ ಬಂಗಾಳ ಮೂಲದವಳಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದಾಳೆ. ಸುಚನಾ ಪತಿ ಕೇರಳದವರಾಗಿದ್ದು, ಪ್ರಸ್ತುತ ಇಂಡೋನೇಷ್ಯಾದಲ್ಲಿದ್ದಾರೆ. ಅವರಿಗೆ ಘಟನೆಯ ಬಗ್ಗೆ ಮಾಹಿತಿ ನೀಡಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ (ಉತ್ತರ) ನಿಧಿನ್ ವಲ್ಸನ್ ತಿಳಿಸಿದ್ದಾರೆ.

ಪ್ರಕರಣ ಸಂಬಂಧ ಸುಚನಾ ಸೇಠ್ ಳನ್ನು ಭಾನುವಾರ ರಾತ್ರಿ ಚಿತ್ರದುರ್ಗದಲ್ಲಿ ಗೋವಾ ಪೊಲೀಸರು ಬಂಧಿಸಿದ್ದಾರೆ. ಪುತ್ರನ ಹತ್ಯೆಯ ಹಿಂದಿನ ಉದ್ದೇಶ ತಿಳಿದುಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ

Exit mobile version