ಉಡುಪಿ: ಉಡುಪಿ ಖಾಸಗಿ ಕಾಲೇಜಿನ ಶೌಚಾಲಯದಲ್ಲಿ ವಿದ್ಯಾರ್ಥಿನಿಯರ ವಿಡಿಯೋ ಮಾಡಿದ ಘಟನೆ ಪ್ರಸ್ತುತ ರಾಷ್ಟ್ರಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿದ್ದು, ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಈ ವಿಚಾರದಲ್ಲಿ ಆಕ್ಸ್‌ಫರ್ಡ್ ವಿವಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷೆಯಾಗಿ ಆಯ್ಕೆಯಾಗಿ ಬಳಿಕ ಮಾನಸಿಕ ಕಿರುಕುಳದಿಂದ ರಾಜೀನಾಮೆ ನೀಡಿ, ಇದೀಗ ಹಿಂದು ಮಾನವ ಹಕ್ಕುಗಳ ಹೋರಾಟಗಾರ್ತಿಯಾಗಿ ಗುರುತಿಸಿಕೊಂಡಿರುವ ಉಡುಪಿಯ ರಶ್ಮೀ ಸಾಮಂತ್ ಅವರು ವಿದ್ಯಾರ್ಥಿನಿಯರ ಶೌಚಾಲಯದಲ್ಲಿ ಕ್ಯಾಮರಾ ಇಟ್ಟಿರುವ ಪ್ರಕರಣ ಕುರಿತು ಮೊದಲು ಟ್ವೀಟ್ ಮಾಡಿ ರಾಷ್ಟ್ರ ಮಟ್ಟದ ಬಿಜೆಪಿ ನಾಯಕರ ಗಮನ ಸೆಳೆದಿದ್ದು ಸತ್ಯ. ಬಳಿಕ ಬಿಜೆಪಿ ನಾಯಕರು ಈ ನಿಟ್ಟಿನಲ್ಲಿ ಜೋರು ಧ್ವನಿಯೆತ್ತಿ ಹೋರಾಟಕ್ಕೆ ಮುಂದಾದರು. ಇದೇ ವೇಳೆ ಸಾಮಂತ್ ಅವರ ಮನೆಗೆ ತೆರೆಳಿದ ಪೊಲೀಸರು ಅವರ ತಂದೆ ತಾಯಿಗೆ ಕಿರುಕುಳ ನೀಡಿದ್ದಾರೆ ಎಂಬ ಆರೋಪವೂ ಎದುರಾಗಿತ್ತು. ಈ ನಿಟ್ಟಿನಲ್ಲಿ ಹಿಂದೂ ಹೋರಾಟಗಾರ್ತಿ ಸಾಮಂತ್ ಯಾರು ಎಂಬ ಬಗೆಗಿನ ಕಿರುವಿವರ ಇಲ್ಲಿದೆ.
ಸಾಮಂತ್ ಎಲ್ಲಿಯವರು: ರಶ್ಮಿ ಅವರು ಮಣಿಪಾಲದ ವತ್ಸಲಾ ಸಾಮಂತ್ ಹಾಗೂ ದಿನೇಶ್ ಸಾಮಂತ್ ಅವರ ಪುತ್ರಿಯಾಗಿದ್ದು, ಮಣಿಪಾಲ ಹಾಗೂ ಉಡುಪಿಯಲ್ಲಿ ಆರಂಭಿಕ ಶಿಕ್ಷಣ ಪಡೆದಿದ್ದರು. ಎಂಐಟಿನಲ್ಲಿ 2016ರಿಂದ 2020ರವರೆಗೆ ಮೆಕಾನಿಕಲ್ ಎಂಜಿನಿಯರಿಂಗ್ ವ್ಯಾಸಂಗ ಮಾಡಿದ್ದಾರೆ. ಬಳಿಕ ಲಂಡನ್ ನ ಆಕ್ಸ್‌ಫರ್ಡ್ ವಿವಿಯ ಲಿನಾಕ್ರೆ ಕಾಲೇಜಿನಲ್ಲಿ ಎನರ್ಜಿ ಸಿಸ್ಟಮ್ಸ್ ವಿಷಯದಲ್ಲಿ ಎಂಎಸ್ಸಿ ವ್ಯಾಸಂಗ ಮಾಡಿದ್ದು, ಲಂಡನ್ ನ ಪ್ರತಿಷ್ಠಿತ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘದ ಅಧ್ಯಕ್ಷೆಯಾಗಿ ಆಯ್ಕೆಯಾಗಿದ್ದರು. ಚುನಾವಣೆಯಲ್ಲಿ ಒಟ್ಟು ನಾಲ್ಕು ಮಂದಿ ಸ್ಪರ್ಧಿಸಿದ್ದು, ರಶ್ಮಿ ಅವರು ಒಟ್ಟು 3708 ಮತಗಳಲ್ಲಿ 1966 ಮತಗಳನ್ನು ಪಡೆದು ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗಿದ್ದರು.
ರಾಜೀನಾಮೆ ಪ್ರಕರಣ ಹಿನ್ನಲೆಯೇನು: ಲಂಡನ್ನಿನ ಪ್ರತಿಷ್ಠಿತ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದ ರಶ್ಮಿ ಸಾಮಂತ್ ತಮ್ಮ ಸ್ಥಾನಕ್ಕೆ ಜನಾಂಗೀಯ ನಿಂದನೆಯ ಕಾರಣಕ್ಕಾಗಿ ರಾಜೀನಾಮೆ ಸಲ್ಲಿಸಿದ್ದರು. ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗುವ ಮುನ್ನವೇ ಫೇಸ್ಬುಕ್ನಲ್ಲಿನ ಅವರ ಪೋಸ್ಟ್ಗಳು ಅಧ್ಯಕ್ಷ ಸ್ಥಾನಕ್ಕೆ ಕುತ್ತು ತಂದಿತ್ತು. ಏಷ್ಯಾ, ಜೂಯಿಷ್ ಮತ್ತು ಲೈಂಗಿಕ ಅಲ್ಪಸಂಖ್ಯಾತ ಸಮುದಾಯಕ್ಕೆ ರಶ್ಮಿ ಸಾಮಂತ್ ಅವಹೇಳನ ಮಾಡಿದ್ದಾರೆಂದು ಆರೋಪಲಾಗಿತ್ತು. ಇದೇ ಕಾರಣದಿಂದ ಮನನೊಂದು ರಶ್ಮಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಅಲ್ಲದೆ ಆಕ್ಸ್‌ಫರ್ಡ್ ನಿಂದ ಭಾರತಕ್ಕೆ ಮರಳಿ ಹಿಂದು ಹೋರಾಟಗಾರ್ತಿಯಾಗಿ ಗುರುತಿಸಿಕೊಂಡಿದ್ದು, ಬಿಜೆಪಿ ಮತ್ತು ಸಂಘ ಪರಿವಾರದ ಹಲವು ಹಿರಿಯ ನಾಯಕರೊಂದಿಗೆ ಒಡನಾಟ ಇರುವ ಚಿತ್ರಗಳನ್ನು ಅವರು ಟ್ವೀಟ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಾರೆ.