ಮೊನ್ನೆ ಗೆಳತಿಯ ಮನೆಗೆ ಹೋಗಿದ್ದೆ. ಅವಳಮ್ಮ ತನ್ನ ಐದಾರು ವರ್ಷದ ಮೊಮ್ಮಗಳಲ್ಲಿ “ಕತೆ ಹೇಳುತ್ತೇನೆ ಬಾ” ಎಂದಾಗಲೆಲ್ಲ ಹುಡುಗಿ “ಬೇಡ ಅಜ್ಜಿ, ನಂಗೆ ಫ್ಯಾಂಟಸಿ ಮೂವಿ ನೋಡೋದಿದೆ” ಎಂದು ಓಡಿ ಹೋಗಿ ತನ್ನಮ್ಮನ ಮೊಬೈಲ್ ತೆಗೆದುಕೊಂಡು ಅದರಲ್ಲೇ ಮಗ್ನಳಾದುದನ್ನು ಗಮನಿಸಿ “ಏನೇ ಪುಟ್ಟಿ ಅಜ್ಜಿಯಲ್ಲಿ ಒಳ್ಳೊಳ್ಳೆ ಕತೆಗಳಿವೆ ಬೇಡ್ವಾ?” ಕೇಳಿದಾಗ “ಕತೇನಾ ! ಅಜ್ಜಿ ಹೇಳೋದಾ?” ಮೂತಿ ಸೊಟ್ಟಗಾಗಿಸಿದಾಗ “ಹ್ಞೂಂ ಕಣೇ, ಅಜ್ಜಿಯಲ್ಲಿ ತುಂಬಾ ಕತೆಗಳಿವೆ. ಕೇಳಿಸ್ಕೋ” ಹೇಳಿದ್ದೇ ಮೊಬೈಲನ್ನು ಅಲ್ಲೇ ಬಿಟ್ಟು ನನ್ನ ಮುಖ ನೋಡಿ “ಆಂಟೀ ಅಜ್ಜಿ ಹೇಳೋದನ್ನು ನೀವೂ ನಂಬ್ತೀರಾ?” ನಕ್ಕಾಗ ಅರ್ಥವಾಗದೆ “ಯಾಕೇ ಏನಾಯ್ತು?” ಕೇಳಿದೆ. “ನೋಡಾಂಟಿ ಈ ಅಜ್ಜಿ ಹೇಳೋದೆಲ್ಲ ಬರೀ ಸುಳ್ಳು, ಮೊನ್ನೆಯೊಂದು ಕತೆ ಹೇಳಿದ್ಲು ಎಂತಾ ಕಾಮಿಡಿ ಇತ್ತು ಗೊತ್ತಾ?” ಹೇಳಿದವಳಲ್ಲಿ “ಏನದು ಅಂಥ ಕತೆ?” ಕುತೂಹಲ ಮೂಡಿತು. “ಅದೊಂದು ದೊಡ್ಡ ಕಾಡಂತೆ………” ಕತೆ ಆರಂಭಿಸಿದವಳು “ಹುಲಿ ಮೈಯಿಂದ ಬಲೆ ತೆಗೆದಿದ್ದಕ್ಕೆ ಇಲಿಗೆ ಥ್ಯಾಂಕ್ಸ್ ಹೇಳಿತಂತೆ” ಎನ್ನುವಲ್ಲಿಗೆ ಕತೆ ಮುಗಿಸಿದಾಗ “ತಪ್ಪೇನಿದೆ ತುಂಟಿ ಈ ಕತೆಯಲ್ಲಿ?” ಮೆಲ್ಲನೆ ಕೆನ್ನೆ ಚಿವುಟಿದಾಗ “ನೀನುನೂ ಪೆದ್ದಿಯಾಂಟಿ, ಇಲಿ – ಹುಲೀ ಎಲ್ಲಾದ್ರೂ ಮಾತನಾಡುತ್ತಾ?ಆ ಕಾಡಿನಲ್ಲಿ ಬಲೆ ಹಾಕಿದ್ಯಾರು? ಬರೀ ಸುಳ್ಳು ಕಟ್ಟುಕತೆಗಳೇ ಹೇಳೋದು ಈ ಅಜ್ಜಿ” ಎಂದಾಗ “ನೋಡೇ ಕತೇಲಿದ್ದ ನೀತಿ ಅರ್ಥ ಮಾಡ್ಕೊಳ್ಲಿಲ್ಲ ಇದು, ಅವು ಹೇಗೆ ಮಾತನಾಡುತ್ತೆ ಅಂಥ ಮಾತ್ರ ಪ್ರಶ್ನೆ ಕೇಳ್ತಾಳೆ. ನಾವು ಸಣ್ಣವರಿದ್ದಾಗ ಹೀಗಿದ್ವಾ?” ಗೆಳತಿ ಮಗಳ ಮೂತಿ ತಿವಿದಾಗ “ತಪ್ಪು ಆಕೆಯದ್ದು ಮಾತ್ರ ಅಲ್ಲ ಕಣೇ, ನಮ್ದೂ ಇದೆ. ನಮಗೆ ಓದಿನ ಹಸಿವಿತ್ತು, ಕಲ್ಪಿಸಿಕೊಳ್ಳುವ ತಾಳ್ಮೆಯಿತ್ತು” ಹೇಳಿದವಳು “ಯೇ ಮುದ್ದು ಅಜ್ಜಿ ಹೇಳೋ ಕತೆಗಳನ್ನು ಮೊಬೈಲ್, ಟ್ಯಾಬ್ ನೋಡೋದು ಬಿಟ್ಟು ನಂತ್ರ ಕೇಳು ಸಕತ್ತಾಗಿರುತ್ತೆ” ಎಂದು ಹೇಳಿದಾಗ “ಓದೋಕೆ ಕತೆ ಪುಸ್ತಕ ಎಲ್ಲಿದೆ ಆಂಟಿ?” ಎನ್ನುವಲ್ಲಿಗೆ ಆ ಪ್ರಸಂಗ ಮುಗಿಯಿತೋ ! ಪ್ರಾರಂಭವಾಯಿತೋ ! ತಿಳಿಯಲಿಲ್ಲ.ಈ ಘಟನೆ ಮಾತ್ರ ನನ್ನ ಮನಸ್ಸಿನಲ್ಲಿ ಇಂದಿನವರೆಗೆ ಸುಳಿಯುತ್ತಲೇ ಇದೆ. ಹೌದು ಹಾಗಿದ್ದರೆ ಆ ಜಗತ್ತು ಈಗೆಲ್ಲಿ ಹೋಯಿತು ?
ಮೊನ್ನೆ ಮೊನ್ನೆಯಷ್ಟೇ ನಾವು ಪತ್ರಿಕಾ ದಿನಾಚರಣೆಯನ್ನು ಆಚರಿಸಿದೆವು. ಒಂದು ಕಾಲದಲ್ಲಿ ದೈನಿಕ, ವಾರಪತ್ರಿಕೆ, ಪಾಕ್ಷಿಕ, ಮಾಸಿಕ, ದ್ವೈಮಾಸಿಕ, ತ್ರೈಮಾಸಿಕ, ವಾರ್ಷಿಕ ಹೀಗೆ ಅದೆಷ್ಟು ಬಗೆಯ ವಿವಿಧ ಹೆಸರುಗಳನ್ನು ಹೊತ್ತ ಪತ್ರಿಕೆಗಳಿದ್ದವು. ಕೆಲವು ಪತ್ರಿಕೆ ಮಾಹಿತಿಗಷ್ಟೇ ಸೀಮಿತವಾಗಿದ್ದರೆ ಇನ್ನು ಕೆಲವು ಮನೋರಂಜನೆಗಾಗಿಯೇ ಇತ್ತು. ಅಲ್ಲಿ ಪ್ರಕಟವಾಗುತ್ತಿದ್ದ ವಿಷಯಗಳನ್ನು ಓದುತ್ತಾ ಅದೇ ಲೋಕಕ್ಕೆ ತೆರಳುತ್ತಿದ್ದೆವು. ಮೇಲೆ ಬರೆದ ಕತೆಯನ್ನೇ ತೆಗೆದುಕೊಳ್ಳುವುದಾದರೆ ಹುಲಿಯೆಂದೊಡನೆ ಅದರ ಕ್ರೂರತೆ, ಇಲಿಯ ಅಸಹಾಯಕತೆ, ಹುಲಿ ಮತ್ತೆ ಇಲಿಯ ಗಾತ್ರ, ಅವುಗಳ ಸಂಭಾಷಣೆಯ ವೈಖರಿ ಇತ್ಯಾದಿಗಳನ್ನು ಕೇಳುತ್ತಾ ಆ ಕಾಡಿನೊಳಗೆ ಹೊಕ್ಕು ಬಂದಂತಹ ಅನುಭವವಾಗುತ್ತಿತ್ತು. ಇನ್ನು ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿದ್ದ ಆ ಧಾರಾವಾಹಿಗಳು ಈಗಿನ ದೃಶ್ಯಮಾಧ್ಯಮದ ಧಾರಾವಾಹಿಗಳೆಂಬ ಪ್ರಲಾಪಗಳಿಗಿಂತ ಸಂಪೂರ್ಣ ಭಿನ್ನ. ಅಲ್ಲಿ ಒಬ್ಬ ಪಾತ್ರಧಾರಿಯ ಬಗ್ಗೆ ಬರೆಯುತ್ತಿದ್ದ ಆ ವರ್ಣನೆಗಳಲ್ಲೇ ಆತ ಅಥವಾ ಆಕೆಯೆಂಬುವವಳು ನಮ್ಮ ನಡುವೆಯೇ ಇದ್ದಾಳೆಂಬಷ್ಟು ಆಪ್ತಭಾವ ಮೂಡುತ್ತಿತ್ತು. ಮುದ್ರಣಮಾಧ್ಯಮ ಕಟ್ಟಿಕೊಟ್ಟಷ್ಟು ಆ ಸುಂದರ ಜಗತ್ತು ಭಾಗಶ: ಈಗಿನ ಎಲ್ಲಾ ಮಾಧ್ಯಮಗಳು ಕಟ್ಟಿಕೊಡುವುದರಲ್ಲಿ ಬಹಳ ಹಿಂದಿದೆ.
ಇದು ಬ್ರೇಕಿಂಗ್ ನ್ಯೂಸ್ ಹಪಹಪಿಕೆಯ ಯುಗ. ಸುದ್ದಿ ಸದ್ದಾಗದಿದ್ದರೂ ಅವುಗಳ ಶೀರ್ಷಿಕೆ ಆ ಕ್ಷಣಕ್ಕೆ ಹುಚ್ಚೆಬ್ಬಿಸುವಂತಿರಬೇಕು ಎಂಬ ವಾದವೂ ಇದೆ. ಕಲ್ಪನೆಗಳಿಗಿಂತ ವಾಸ್ತವವೇ ಬೇಕು ಎಂಬುವ ವಿಚಾರಕ್ಕೆ ಸನಿಹವಾಗಿರುವ ನಾವು ಅದೆಲ್ಲೋ ಆ ಕಲ್ಪಿಸಿಕೊಳ್ಳುವ ಶಕ್ತಿಯನ್ನೇ ಕಳೆದುಕೊಳ್ಳುತ್ತಿದ್ದೇವೆ. ಓದುಗರ ಸಂಖ್ಯೆ ಕಡಿಮೆಯಾಗುತ್ತಿದೆಯೆಂಬ ನೋವಿಗೆ ಇದೊಂದು ಕಾರಣವಾದರೆ ಬರೆಹವನ್ನು ಆಸ್ವಾದಿಸುತ್ತಾ ಓದದಿರುವುದು ಇನ್ನೊಂದು ಕಾರಣವೂ ಹೌದು. ತಿನ್ನುವ ಆಹಾರವನ್ನು ಹೇಗೆ ಬಾಯಿಯಲ್ಲಿ ಹಾಕಿ ಜಗಿದು ನಾಲಿಗೆಗೆ ಕೆಲಸ ಕೊಟ್ಟು ಆಸ್ವಾದಿಸುತ್ತೇವೆಯೋ ಓದು ಕೂಡಾ ಹಾಗೆಯೇ. ಸುಮ್ಮನೇ ಓದುತ್ತಾ ಹೋದರೆ ಏನು ಸುಖ ಸಿಕ್ಕೀತು? ಓದನ್ನು ಏಕಾಂತದೊಳಗೆ ಕುಳಿತು ತನ್ಮಯ ಭಾವದಿಂದ ಅನುಭವಿಸಿದರಷ್ಟೇ ಬರೆಹದೊಡನೆ ಸುಖಿಸಲು ಸಾಧ್ಯ. ಅದಲ್ಲದಿದ್ದರೆ ಎಲ್ಲಾ ಬರೆಹಗಳು ಒಂದೇ ರೀತಿ ಕಂಡು ಕಲ್ಪನೆಯ ಆ ಪ್ರಪಂಚದೊಳಗೆ ಪ್ರವೇಶ ಪಡೆಯಲು ಅನರ್ಹರಾಗುತ್ತೇವೆ.
ಯಾಕೆ ನಾವು ಅಂದಿನ ಕಾಲ್ಪನಿಕ ಜಗತ್ತಿನಿಂದ ದೂರವಾಗಿದ್ದೇವೆಯೆಂದರೆ ಓದುವ ಆ ಆಸಕ್ತಿ ಇಂದು ನಮ್ಮೊಳಗೆ ಬಹುತೇಕರಲ್ಲಿ ಕಣ್ಮರೆಯಾಗುತ್ತಿದೆ. ಕೌತುಕ, ಪ್ರೀತಿ, ಸ್ನೇಹ, ಸೇಡು, ಮೋಹ, ದಾಹ ಹೀಗೆ ಮನುಷ್ಯಸಹಜ ಎಲ್ಲಾ ಗುಣಗಳನ್ನು ಒಂದು ಬರೆಹದಲ್ಲಿ ಓದುತ್ತಾ ಅನುಭವಿಸುತ್ತಿದ್ದೆವು ಆದರೆ ಈಗಿನ ಗಡಿಬಿಡಿಯ ಓದು ನಮ್ಮಲ್ಲಿ ಅಂತಹ ಒಂದು ಅನುಭೂತಿಯನ್ನು ಹುಟ್ಟುಹಾಕುವುದನ್ನೇ ಸೋಲಿಸುತ್ತಿದೆ. ಬರೆಹವನ್ನು ದಕ್ಕಿಸಿಕೊಳ್ಳಬೇಕಾದರೂ ಮೊದಲು ಓದೆಂಬ ಓದನ್ನು ಕಲಿಯುವುದು ಬಹುಮುಖ್ಯವಾಗುತ್ತದೆ. ಇತ್ತೀಚೆಗೆ ಸೃಜನಶೀಲ ಬರೆಹಗಾರರ ಸಂಖ್ಯೆ ಕಡಿಮೆಯಾಗುತ್ತಿದೆಯೆಂಬ ನೋವು ಅನುಭವಿ ಓದುಗರದ್ದು. ಯಾಕೆ ಹೀಗೆ! ಎಂದು ಕೇಳಿಕೊಂಡರೆ ಸಿಗುವ ಉತ್ತರ ಮತ್ತದೇ ಓದುವ ಕೊರತೆ. ಓದದವನು ಆ ಕಾಲ್ಪನಿಕ ಪ್ರಪಂಚವನ್ನು ಕಟ್ಟಲಾರ, ಕಟ್ಟದವನು ಅದರೊಳಗೆ ವಿಹರಿಸಲಾರ, ವಿಹರಿಸದವನು ಓದುಗನ ಮನಮುಟ್ಟುವಲ್ಲಿ ಬಹುದೂರ ಉಳಿಯುತ್ತಾನೆ. ಆದುದರಿಂದ ಬರೆಹಗಾರರಿಗೆ ಅನುಭವ ಎಷ್ಟು ಮುಖ್ಯವಾಗುತ್ತದೆಯೋ ಹಾಗೆಯೇ ಓದಿನ ಗುಣ ಕೂಡಾ ಮುಖ್ಯವಾಗುತ್ತ ಹೋಗುತ್ತದೆ.
ಬಹಳವಾಗಿ ತಂತ್ರಜ್ಞಾನದಲ್ಲಿ ಮುಂದುವರೆದಿದ್ದೇವೆ. ಎಲ್ಲವೂ ಕೈಯಲ್ಲಿರುವ ಮೊಬೈಲಿನಲ್ಲೇ ಸಿಗುತ್ತಿರುವಾಗ ಇನ್ನು ಪತ್ರಿಕೆ, ಪುಸ್ತಕಗಳು ಯಾಕೆ ಬೇಕು ಎಂದು ಪ್ರಶ್ನಿಸುವವರಿದ್ದಾರೆ. ಹೌದು ! ಎಲ್ಲವೂ ಮೊಬೈಲಿನಲ್ಲಿದೆ, ಆ ಇದೆಯೆಂಬ ತಾತ್ಸಾರವೇ ನಮ್ಮೊಳಗಿನ ಸಹಜ ಗುಣಗಳನ್ನು ಕೊಲ್ಲುತ್ತಿದೆ. ಮೊಬೈಲಿನಲ್ಲಿ ನೋಡುವ, ಓದುವ ಅದೆಷ್ಟೋ ವಿಷಯಗಳನ್ನೇ ನಿಜವೆಂದು ನಂಬಿ ಮಿಕ್ಕೆಲ್ಲವೂ ಸುಳ್ಳೆಂದು ವಾದಿಸುವವರೂ ಪುಸ್ತಕ ಕೊಳ್ಳುವುದೇ ಸುಮ್ಮನೆ ವ್ಯರ್ಥವೆಂದು ಹೇಳಿಕೊಳ್ಳುವವರೂ ಇರುವರು. ಆದರೆ ಓದಿನ ಸುಖ ಅನುಭವಿಸುವವರು, ಅನುಭವಿಸಿದವರು ಮಾತ್ರ ಈ ಮಾತನ್ನು ಒಪ್ಪಿಕೊಳ್ಳಲಾರರು ಯಾಕೆಂದರೆ ಕಾಗದದಲ್ಲಿ ಮುದ್ರಿತವಾದ ಬರೆಹಗಳ ಓದಿನ ಸುಖ ಈ ಆಧುನಿಕ ಮಾಧ್ಯಮಗಳು ಖಂಡಿತವಾಗಿಯೂ ಕೊಡಲಾರದು. ಆ ಕಲ್ಪನೆಯ ಪ್ರಪಂಚವನ್ನು ಕಟ್ಟಿಕೊಡುವ ಸಾಮರ್ಥ್ಯವಿದ್ದರೆ ಅದು ಮುದ್ರಣ ಜಗತ್ತಿನ ಭವಿಷ್ಯದಲ್ಲಿದೆ. ಆದರೆ ಇಂದು ಮುದ್ರಣ ಜಗತ್ತೂ ಬಹಳ ನಷ್ಟದಲ್ಲಿದೆ. ಓದುಗರು ದಿನೇ ದಿನೇ ಕಡಿಮೆಯಾಗುತ್ತಿದ್ದಾರೆಯೆಂಬ ದು:ಖದ ಮಾತು ಅಲ್ಲಿಯೂ ಕೇಳಿಬರುತ್ತಿದೆ.
ಈ ಕಾಲ್ಪನಿಕ ಜಗತ್ತು ಎಂದರೇನು? ಅದು ಹೇಗಿರುತ್ತದೆ! ಎಂಬ ಪ್ರಶ್ನೆ ಹಲವರಲ್ಲಿ ಮೂಡುವುದು ಸಹಜ. ಕಲ್ಪನೆಗೆ ಇತಿಮಿತಿಗಳಿಲ್ಲ ಎಂಬುವವರೂ ಇದ್ದಾರೆಯೆನ್ನುವುದೂ ನಿಜ. ಆದರೆ ಬಹುತೇಕರು ಕನಸನ್ನು ಕಲ್ಪನೆಯೆಂದು ಅಪಾರ್ಥ ಮಾಡಿಕೊಂಡಿದ್ದೂ ಇದೆ. ನಿದ್ರಿಸುವಾಗ ಬೀಳುವ ಕನಸಿಗೂ ಭವಿಷ್ಯದ ಗುರಿಯ ಬಗ್ಗೆ ಕಟ್ಟುವ ಕನಸಿಗೂ ಹೇಗೆ ವ್ಯತ್ಯಾಸವಿದೆಯೋ ಹಾಗೆಯೇ ಈ ಕಲ್ಪನೆ. ಕಲ್ಪನೆ ಎಷ್ಟು ಸ್ವತಂತ್ರವೆಂದರೆ ಯಾವುದೇ ಟೀಕೆ, ವಿಮರ್ಶೆಗೆ ಒಳಗಾಗದಷ್ಟು ಮತ್ತು ಬಂಧನಕ್ಕೆ ಸಿಲುಕದಷ್ಟು. ಆದರೆ ಕಲ್ಪನೆಯ ಒಳಹೊಕ್ಕುವುದಕ್ಕೆ ಮಾತ್ರ ಕೆಲವು ಕಟ್ಟುಪಾಡುಗಳಿವೆ. ಅದರಲ್ಲಿ ಬಹುಮುಖ್ಯವಾದದ್ದು ನಿರಾಳವಾದ, ಏಕಾಗ್ರತೆಯಿಂದ ಕೂಡಿದ ಮನಸ್ಥಿತಿ. ಇದನ್ನು ಧ್ಯಾನಸ್ಥ ಸ್ಥಿತಿಯೆನ್ನಲೂಬಹುದು. ಇಂತಹ ಸ್ಥಿತಿಗೆ ತಲುಪಿದ ವ್ಯಕ್ತಿ ಹೊರಗಿನೆಲ್ಲ ಗದ್ದಲಗಳಿಂದ ಬಹುದೂರ ನಡೆದು ತನ್ನದೇ ಪ್ರಪಂಚವನ್ನು ಕಟ್ಟಿಕೊಳ್ಳುತ್ತಾನೆ. ಆ ಜಗತ್ತಿನಲ್ಲಿ ಆತ ಸ್ವಚ್ಛಂದವಾಗಿ ವಿಹರಿಸುವ ಹಕ್ಕಿ. ಈ ಹಕ್ಕಿಯಾಗಲು ಒಮ್ಮೊಮ್ಮೆ ಏಕಾಂತ ಅಗತ್ಯವಾದರೆ ಕೆಲವೊಮ್ಮೆ ಓದಿನ ತುರ್ತು ಇದೆ. ಎಲ್ಲವನ್ನೂ ಸಂಭಾಳಿಸಿ, ಎಲ್ಲದರಿಂದಲೂ ವಿಮುಕ್ತನಾಗಿ ಕಟ್ಟಿಕೊಳ್ಳುವ ಕಲ್ಪನೆಯ ಬಯಲಿಗೆ ಹಾರಲು ಮನಸ್ಸನ್ನೊಮ್ಮೆ ತೆರವುಗೊಳಿಸುವ ಕೆಲಸ ನಮ್ಮ ನಿಮ್ಮದಷ್ಟೇ.
ಕತೆ, ಕಾದಂಬರಿ, ಕವಿತೆ ಅಥವಾ ಸಾಹಿತ್ಯದ ಇತರೆ ಯಾವುದೇ ಪ್ರಕಾರವಾಗಿರಲಿ ಅವುಗಳನ್ನು ಓದುವ ಹವ್ಯಾಸವನ್ನು ಬಿಡದಂತೆ ಉಳಿಸಿಕೊಳ್ಳುವುದು ನಮ್ಮ ಕೈಯಲ್ಲಿದೆ. ಅವುಗಳೊಳಗಿನ ಪಾತ್ರಗಳು ನಾವಾಗಿ ಕಲ್ಪಿಸಿಕೊಂಡು ಯೋಚಿಸುವ ಸಾಮರ್ಥ್ಯವನ್ನು ಕಟ್ಟಿಕೊಳ್ಳುವುದು ಹಾಗೂ ಕಟ್ಟಿಕೊಡುವುದು ನಮ್ಮ ಜವಾಬ್ದಾರಿ ಯಾಕೆಂದರೆ ಆ ಪುಟ್ಟಹುಡುಗಿ ಹೇಳಿದಂತೆ “ಎಲ್ಲವೂ ಸುಳ್ಳು” ಎಂಬ ಜಗತ್ತಿನೊಳಗೆ ಕಾಲಿಡುವುದನ್ನು ತಡೆಯಲು.
ಓದೋಣ, ಓದುತ್ತಾ ಆ ಕಲ್ಪನೆಯ ಜಗತ್ತಿನೊಳಗೆ ಇನ್ನೊಮ್ಮೆ ಹೊಕ್ಕುವ ಪ್ರಯತ್ನವನ್ನು ಮಾಡೋಣಲ್ವೇ! ಮತ್ತೆ ಮಾತನಾಡುವ ಮುಂದಿನ ಸಂಚಿಕೆಯಲ್ಲಿ
ಅಕ್ಷತಾರಾಜ್ ಪೆರ್ಲ
ಕಯ್ಯಂಕೂಡ್ಲು, ಕಾಟುಕುಕ್ಕೆ