ನವದೆಹಲಿ: ವಾಟ್ಸ್ಆ್ಯಪ್ ಹೊಸತನದ ಹರಿಕಾರನಂತಿದೆ. ಬಳಕೆದಾರರರಿಗೆ ಹೊಸ ಹೊಸ ಫೀಚರ್ ಗಳನ್ನು ನೀಡುತ್ತಲೇ ಇರುತ್ತದೆ. ಇದೀಗ ಹೊಸತೊಂದು ಫೀಚರ್ ಅನ್ನು ಪರಿಚಯಿಸಲು ಮುಂದಾಗಿದೆ. ಇದೀಗ ಒಂದೇ ವಾಟ್ಸ್ಆ್ಯಪ್ನಲ್ಲಿ ವಿಭಿನ್ನ ಖಾತೆಗಳನ್ನು ಬಳಸಬಹುದಾದ ಸೌಲಭ್ಯವನ್ನು ಒದಗಿಸಲು ಮುಂದಾಗಿದೆ. ಶೀಘ್ರದಲ್ಲೇ ವಾಟ್ಸ್ಆ್ಯಪ್ ತನ್ನ ಬಳಕೆದಾರರ ಈ ಆಯ್ಕೆಯನ್ನು ನೀಡಲಿದೆ. ಹೇಗೆಂದರೇ ಒಂದು ವಾಟ್ಸ್ಆ್ಯಪ್ ಅಪ್ಲಿಕೇಶನ್‌ನಲ್ಲಿ ಅನೇಕ ವಾಟ್ಸ್ಆ್ಯಪ್ ಖಾತೆಗಳನ್ನು ಸ್ವಿಚ್ ರೀತಿಯಲ್ಲಿ ತೆರೆಯಬಹುದು. ಈಗಾಗಲೇ ಈ ಸೌಲಭ್ಯ ಇನ್ಸ್ಟಾಗ್ರಾಮ್ ಮತ್ತು ಫೇಸ್ಬುಕ್ನಲ್ಲಿ ಇದೆ.
ಪ್ರಸ್ತುತ, ವಾಟ್ಸ್ಆ್ಯಪ್ ಬಳಕೆದಾರರಿಗೆ ಒಂದು ಮೊಬೈಲ್ನಲ್ಲಿ ಒಂದು ಖಾತೆಯೊಂದಿಗೆ ಲಾಗ್ ಇನ್ ಮಾಡಲು ಮಾತ್ರ ಅನುಮತಿಸುತ್ತದೆ. ಆದ್ದರಿಂದ, ವಿಭಿನ್ನ ಫೋನ್ ಸಂಖ್ಯೆಗಳೊಂದಿಗೆ ಎರಡು ವಾಟ್ಸ್ಆ್ಯಪ್ ಖಾತೆಗಳನ್ನು ಬಳಸುವ ಬಳಕೆದಾರರು ಎರಡು ಮೊಬೈಲ್ಗಳನ್ನು ಬಳಸಬೇಕಾಗುತ್ತದೆ.
ಈ ವೈಶಿಷ್ಟ್ಯವು ಪ್ರಸ್ತುತ ಕೆಲವು ಬೀಟಾ ಪರೀಕ್ಷಕರಿಗೆ ಲಭ್ಯವಿದೆ ಮತ್ತು ಮುಂಬರುವ ವಾರಗಳಲ್ಲಿ ಹೆಚ್ಚಿನ ಬಳಕೆದಾರರಿಗೆ ಹೊರತರಲಾಗುವುದು ಎಂದು ವರದಿಗಳು ಹೇಳಿದೆ. ಆಂಡ್ರಾಯ್ಡ್ ಆವೃತ್ತಿ 2.23.17.8 ಗಾಗಿ ವಾಟ್ಸ್ಆ್ಯಪ್ ಬೀಟಾವನ್ನು ಅಪ್‌ಡೇಟ್ ಮಾಡಿದರೆ ಈ ಆಯ್ಕೆ ಸಿಗಲಿದೆ. ಆದಾಗ್ಯೂ ಕೆಲವು ಬಳಕೆದಾರರಿಗೆ ಹಿಂದಿನ 2.23.17.7 ಆವೃತ್ತಿಯಲ್ಲಿ ಈ ವೈಶಿಷ್ಟ್ಯವನ್ನು ಉಪಯೋಗಿಸಲು ಸಾಧ್ಯವಾಗುತ್ತಿದೆ
ಈ ವೈಶಿಷ್ಟ್ಯ ಬಳಸಲು, ಬಳಕೆದಾರರು QR ಕೋಡ್ ಬಟನ್ ಬಳಿ ಇರುವ ಬಾಣದ ಐಕಾನ್ ಅನ್ನು ಟ್ಯಾಪ್ ಮಾಡುವ ಮೂಲಕ ಹೊಸ ವಾಟ್ಸ್ಆ್ಯಪ್ ಖಾತೆಯನ್ನು ಸೇರಿಸಲು ಸಾಧ್ಯವಾಗುತ್ತದೆ. ಅದೇ ಮೆನುವಿನಲ್ಲಿ ಬೇರೆ ಖಾತೆಗೆ ಬದಲಾಯಿಸುವ ಆಯ್ಕೆ ಇದೆ. ಹೊಸದಾಗಿ ಸೇರಿಸಲಾದ ಖಾತೆಯನ್ನು ಲಾಗ್ ಔಟ್ ಮಾಡಲು ಆಯ್ಕೆ ಕೂಡ ನೀಡಲಾಗಿದೆ.