ಚಿಕ್ಕಮಗಳೂರು: ಗೃಹಿಣಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದು, ಮೃತ ಗೃಹಿಣಿಯ ಪೋಷಕರು ಪತಿ ವಿರುದ್ಧ ಕೊಲೆ ಶಂಕೆ ವ್ಯಕ್ತಪಡಿಸಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ದೇವವೃಂದದಲ್ಲಿ ನಡೆದಿದೆ.
ಶ್ವೇತಾ (31) ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಗೃಹಿಣಿ. ಮೂರು ವರ್ಷದ ಹಿಂದೆ ಶ್ವೇತಾ ದರ್ಶನ್ ಎಂಬವರನ್ನು ವಿವಾಹವಾಗಿದ್ದರು. ದರ್ಶನ್ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಲ್ಯಾಬ್ ಟೆಕ್ನಿಷಿಯನ್ ಆಗಿ ಕೆಲಸ ಮಾಡುತ್ತಿದ್ದು, ಪಾಯಿಸನ್ ಇಂಜೆಕ್ಷನ್ ಚುಚ್ಚಿ ಕೊಲೆ ಮಾಡಿದ್ದಾನೆ ಎಂದು ಶ್ವೇತಾಳ ಪೋಷಕರು ಆರೋಪಿಸಿದ್ದಾರೆ.
4 ದಿನದ ಹಿಂದೆ ಬೆಂಗಳೂರಿನಿಂದ ದೇವವೃಂದಕ್ಕೆ ದರ್ಶನ್ ಮತ್ತು ಶ್ವೇತಾ ಆಗಮಿಸಿದ್ದು, ಹೃದಯಾಘಾತವಾಗಿ ಶ್ವೇತಾ ಸಾವನ್ನಪ್ಪಿದ್ದಾಳೆ ಎಂದು ದರ್ಶನ್ ಪತ್ನಿಯ ಪೋಷಕರಿಗೆ ಮಾಹಿತಿ ನೀಡಿದ್ದಾನೆ.
ದರ್ಶನ್ ಮನೆಯವರು ತರಾತುರಿಯಲ್ಲಿ ಅಂತ್ಯಕ್ರಿಯೆಗೆ ಸಿದ್ಧತೆ ನಡೆಸಿದ್ದು, ಮೃತಳ ಪೋಷಕರು ಅಂತ್ಯಕ್ರಿಯೆ ತಡೆದು ಮೃತದೇಹವನ್ನು ಮರಣೊತ್ತರ ಪರೀಕ್ಷೆಗೆ ಆಸ್ಪತ್ರೆಗೆ ಸಾಗಿಸಿದ್ದಾರೆ. ದರ್ಶನ್ ವಿರುದ್ಧ ಅನೈತಿಕ ಸಂಬಂಧದ ಆರೋಪವಿದ್ದು, ಅನೈತಿಕ ಸಂಬಂಧಕ್ಕೆ ಅಡ್ಡಿಯಾದ ಪತ್ನಿಗೆ ಇಂಜೆಕ್ಷನ್ ನೀಡಿ ಕೊಲೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ. ಈಗ ಶ್ವೇತಾ ಮೃತದೇಹವನ್ನು ಚಿಕ್ಕಮಗಳೂರು ಮಲ್ಲೇಗೌಡ ಜಿಲ್ಲಾಸ್ಪತ್ರೆಗೆ ರವಾನೆ ಮಾಡಲಾಗಿದೆ. ಈ ಕುರಿತು ಗೋಣಿಬೀಡು ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.