ಬೆಂಗಳೂರು: ವಿಚಾರವಾದಿ ಭಗವಾನ್ ರಾಜ್ಯದ ಎಲ್ಲ ಕಡೆ ಅಭಿಯಾನವೊಂದನ್ನು ಹಮ್ಮಿಕೊಳ್ಳುವುದಾಗಿ ಹೇಳಿದ್ದಾರೆ. ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಭಾರತದ ಸಂವಿಧಾನ ಯಾವುದೇ ಬೇಧ ಭಾವ ಮಾಡದೇ ಸಮಾನತೆಯನ್ನು ಪ್ರತಿಪಾದಿಸುತ್ತದೆ. ಆದರೆ, ಸನಾತನ ಧರ್ಮದಲ್ಲಿ ಬ್ರಾಹ್ಮಣರನ್ನು ಹೊರತುಪಡಿಸಿ ಬೇರೆಲ್ಲರೂ ಕೀಳು ಎಂಬ ಮನೋಭಾವ ಇದೆ. ಎಲ್ಲ ಶೂದ್ರರು ಬ್ರಾಹ್ಮಣರ ಗುಲಾಮರು ಎಂದು ಪ್ರತಿಪಾದಿಸಲಾಗುತ್ತದೆ. ಈ ಧೋರಣೆಯನ್ನು ಒಪ್ಪಿಕೊಳ್ಳುವುದಕ್ಕೆ ಸಾಧ್ಯವೇ’ ಎಂದರು.
‘ಸನಾತನ ಧರ್ಮ, ಸ್ವಾತಂತ್ರ್ಯವನ್ನು ಮೊಟಕುಗೊಳಿಸುವುದರ ಜೊತೆಗೆ ಅಸಮಾನತೆಯನ್ನು ಪೋಷಿಸುತ್ತದೆ. ಈ ಧರ್ಮದಲ್ಲಿನ ಆನಿಷ್ಟಗಳನ್ನು ತೊಲಗಿಸಲು ಬುದ್ಧ, ಬಸವ, ಗಾಂಧಿ ಮತ್ತು ಅಂಬೇಡ್ಕರ್ ಅವರು ಪ್ರಯತ್ನ ಮಾಡಿದ್ದರು. ಆದರೆ, ಇತ್ತೀಚಿನ ದಿನಗಳಲ್ಲಿ ಈ ಅನಿಷ್ಟಗಳು ಬಲವಾಗುತ್ತಿವೆ. ಡಾ.ಬಿ.ಆರ್. ಅಂಬೇಡ್ಕರ್ ಅವರ ಆಶಯದಂತೆ ಸನಾತನ ಧರ್ಮವನ್ನು ಬುಡಸಮೇತ ಕಿತ್ತು ಹಾಕಬೇಕು’ ಎಂದು ಹೇಳಿದರು.
‘ಹಿಂದೂ ಧರ್ಮದಲ್ಲಿ ಸಮಾನತೆ ಎಂಬುದಿಲ್ಲ, ದೇವಸ್ಥಾನಗಳಲ್ಲಿ ಬ್ರಾಹ್ಮಣರೇ ಅರ್ಚಕರಾಗಿದ್ದಾರೆ. ಆದರೆ ಬೇರೆ ಧರ್ಮಗಳಲ್ಲಿ ಈ ಅಸಮಾನತೆ ಇಲ್ಲ. ಸರ್ಕಾರದ ಆಧೀನದಲ್ಲಿರುವ ಎಲ್ಲ ದೇವಸ್ಥಾನಗಳ ಅರ್ಚಕರ ಹುದ್ದೆಗಳನ್ನು ಪರೀಕ್ಷೆ ಮೂಲಕ ಆಯ್ಕೆ ಮಾಡುವ ಪ್ರಕ್ರಿಯೆಯನ್ನು ಪ್ರಾರಂಭಿಸಬೇಕು’ ಎಂದು ಸಲಹೆ ನೀಡಿದರು.
‘