Site icon newsroomkannada.com

ಪುತಿನ್ ವಿರುದ್ಧ ಬಂಡಾಯವೆದ್ದಿದ್ದ ಖಾಸಗಿ ಮಿಲಿಟರಿ ಪಡೆಯ ನಾಯಕ ಪ್ರಿಗೋಜಿನ್ ಫ್ಲೈಟ್ ಕ್ರ್ಯಾಶ್ ಗೆ ಬಲಿ

ಮಾಸ್ಕೋ: ಖಾಸಗಿ ಮಿಲಿಟರಿ ಸಂಸ್ಥೆ ವ್ಯಾಗ್ನವಾರ್ ಪಡೆಯ ಮುಖ್ಯಸ್ಥ ಮತ್ತು ಒಂದು ಕಾಲದ ಪುತಿನ್ ಆಪ್ತ ಎವ್ಗೆನಿ ಪ್ರಿಗೋಜಿನ್ (62) ವಿಮಾನ ದುರಂತದಲ್ಲಿ ಮೃತಪಟ್ಟಿದ್ದಾನೆಂದು ಶಂಕಿಸಲಾಗಿದೆ.

ಮಾಸ್ಕೋದಿಂದ ಸೈಂಟ್ ಪೀಟರ್ಸ್ ಬರ್ಗ್ ಗೆ ಬರುತ್ತಿದ್ದ ಬ್ಯುಸಿನೆಸ್ ಜೆಟ್ ಬುಧವಾರದಂದು ಅಪಘಾತಕ್ಕೀಡಾಗಿದ್ದು, ಈ ಜೆಟ್ ನ ಪ್ರಯಾಣಿಕರ ಲಿಸ್ಟ್ ನಲ್ಲಿ ಬಾಡಿಗೆ ಸೇನಾಪಡೆಯ ಮುಖ್ಯಸ್ಥ ಪ್ರಿಗೋಜಿನ್ ಹೆಸರಿತ್ತು ಎಂದು ರಷ್ಯಾದ ಎಮರ್ಜೆನ್ಸಿ ಅಧಿಕಾರಿಗಳು ತಿಳಿಸಿದ್ದಾರೆ.

ಅನಧಿಕೃತ ಮಾಧ್ಯಮ ವರದಿಗಳ ಪ್ರಕಾರ ಈ ವಿಮಾನ ಪ್ರಿಗೋಜಿನ್ ಗೆ ಸೇರಿದ್ದಾಗಿತ್ತು ಮತ್ತು ಈ ವಿಮಾನದಲ್ಲಿದ್ದ ಎಲ್ಲಾ 10 ಮಂದಿ ಅಪಘಾತಕ್ಕೆ ಬಲಿಯಾಗಿದ್ದಾರೆ. ಆದರೆ ಈ ವಿಮಾನದಲ್ಲಿ ಪ್ರಿಗೋಜಿನ್ ಪ್ರಯಾಣಿಸುತ್ತಿದ್ದರೇ ಎಂಬುದು ಇನ್ನೂ ಖಚಿತಗೊಂಡಿಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಆದರೆ, ರಷ್ಯಾದ ನಾಗರಿಕ ವಿಮಾನ ನಿಯಂತ್ರಕ ಸಂಸ್ಥೆ, ರೋಸಾವಿಯಾಟ್ಸಿಯಾ ನೀಡಿರುವ ಮಾಹಿತಿ ಪ್ರಕಾರ ಈ ವಿಮಾನದಲ್ಲಿ ಪ್ರಯಾಣಿಸಬೇಕಿದ್ದ ಹತ್ತು ಮಂದಿಯ ಪಟ್ಟಿಯಲ್ಲಿ ಪ್ರಿಗೋಜಿನ್ ಹೆಸರಿತ್ತು, ಆದರೆ ಆತ ವಿಮಾನವನ್ನೇರಿದ್ದನೇ ಎನ್ನುವ ಮಾಹಿತಿ ಸದ್ಯಕ್ಕೆ ಖಚಿತಪಟ್ಟಿಲ್ಲ.

ಈ ವಿಮಾನದಲ್ಲಿ ಮೂವರು ಪೈಲಟ್ ಗಳ ಮತ್ತು ಏಳು ಮಂದಿ ಪ್ರಯಾಣಿಕರ ಸಹಿತ ಒಟ್ಟು ಹತ್ತು ಮಂದಿ ಪ್ರಯಾಣಿಸುತ್ತಿದ್ದರು ಎಂದು ಎಮರ್ಜೆನ್ಸಿ ಅಧಿಕಾರಿಗಳ ಮಾಹಿತಿಯನ್ನುದ್ದರಿಸಿ ರಷ್ಯಾದ ಸ್ಟೇಟ್ ನ್ಯೂಸ್ ಏಜೆನ್ಸಿ ಟಾಸ್ಸ್ ವರದಿ ಮಾಡಿದೆ.

ಪ್ರಿಗೋಜಿನ್ ನ ಖಾಸಗಿ ಮಿಲಿಟರಿ ಪಡೆಯು ಉಕ್ರೇನ್ ನಲ್ಲಿ ರಷ್ಯಾ ಮಿಲಿಟರಿ ಪಡೆ ಜೊತೆ ಕೈಜೋಡಿಸಿ ಯುದ್ಧ ನಡೆಸಿತ್ತು. ಆ ಬಳಿಕ ಕಳೆದ ಜೂನ್ ತಿಂಗಳಿನಲ್ಲಿ ಈ ಖಾಸಗಿ ಪಡೆಯು ರಷ್ಯಾದ ಮಿಲಿಟರಿ ನಾಯಕತ್ವದ ವಿರುದ್ಧ ಅಲ್ಪಾವಧಿ ಸಶಸ್ತ್ರ ದಂಗೆಯನ್ನು ನಡೆಸಿ ಬಳಿಕ ತಣ್ಣಗಾಗಿತ್ತು.

ಬಳಿಕ ರಷ್ಯಾ ಸರಕಾರ ಪ್ರಿಗೋಜಿನ್ ನನ್ನು ಬೆಲಾರೂಸ್ ಗೆ ಗಡಿಪಾರು ಮಾಡುವ ಅತನ ಖಾಸಗಿ ಮಿಲಿಟರಿ ಪಡೆಯ ಯೋಧರನ್ನು ಒಂದೋ ನಿವೃತ್ತಿಯಾಗಬೇಕು ಅಥವಾ ರಷ್ಯಾ ಮಿಲಿಟರಿ ಪಡೆಯನ್ನು ಸೇರಬೇಕು ಎಂಬ ಸೂಚನೆಯನ್ನು ನೀಡಿತ್ತು.

Exit mobile version