ಮೈಸೂರು: ಹಿಂದು ಧರ್ಮದ ಕುರಿತು ಹಲವು ಬಾರಿ ಆಕ್ಷೇಪಾರ್ಹವಾಗಿ ಮಾತನಾಡಿರುವ ವಿಚಾರವಾದ ಕೆ.ಎಸ್ ಭಗವಾನ್ ಮತ್ತೊಮ್ಮೆ ನಾಲಿಗೆ ಹರಿಯಬಿಟ್ಟಿದ್ದಾರೆ. ಒಕ್ಕಲಿಗರು ಸಂಸ್ಕೃತಿ ಹೀನ ಪಶುಗಳು, ಇದು ನನ್ನ ಮಾತಲ್ಲ ಹಾಗಂತ ರಾಷ್ಟ್ರಕವಿ ಕುವೆಂಪು ಹೇಳಿದ್ದರು ಎಂದು ವಿಚಾರವಾದಿ ಕೆ.ಎಸ್. ಭಗವಾನ್ ಹೇಳಿದ್ದಾರೆ.
ಮಹಿಷ ದಸರಾ ಆಚರಣೆ ಸಮಿತಿಯಿಂದ ಇಲ್ಲಿನ ಪುರಭವನದ ಆವರಣದಲ್ಲಿ ಶುಕ್ರವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾನು ಹಿಂದೂ ಧರ್ಮವನ್ನು ಯಾವಾಗಲೋ ಬಿಟ್ಟು ಬಿಟ್ಟೆ ಎಂದು ಕುವೆಂಪು ಯಾವಾಗಲೂ ಹೇಳುತ್ತಿದ್ದರು. ಆದರೆ, ಅವರ ಶಿಷ್ಯರಿಗೆ ಅದು ಅರ್ಥವಾಗಲಿಲ್ಲ. ಆದ್ದರಿಂದಲೇ ಕುವೆಂಪು, ಒಕ್ಕಲಿಗರು ಸಂಸ್ಕೃತಿ ಹೀನ ಪಶುಗಳು ಎಂದು ಹೇಳಿದ್ದರು. ಇದು ನನ್ನ ಮಾತಲ್ಲ ಕುವೆಂಪು ಅವರದ್ದು. ಇಲ್ಲದಿದ್ದರೆ ನನಗೆ ಹೊಡೆಯಲು ಬರುತ್ತಾರೆ. ನನ್ನನ್ನು ಕೊಂದು ಹಾಕಿ ಬಿಡುತ್ತಾರೆ. ಆದರೆ, ನಿಜ ಹೇಳಿಯೇ ಸಾಯಬೇಕು’ ಎಂದರು. ‘ಕುವೆಂಪು ಮಾತು ಅವರ ಶಿಷ್ಯರಿಗೆ ಈಗಲೂ ಅರ್ಥವಾಗಿಲ್ಲ’ ಎಂದು ಹೇಳಿದರು.
ಜನಿವಾರದಿಂದ ಜಾತಿ ಗುರುತಿಸುತ್ತಾರೆ. ಹಾಕದವನು ಒಂದು, ಹಾಕಿರೋನು ಒಂದು. ಕೈಗೆ ಕಾಲಿಗೆ ಜಾತಿ ಇಟ್ಟಿರೋದು ಹಿಂದೂ ಧರ್ಮ. ಹಿಂದೂ ಧರ್ಮ ನಮ್ಮ ಧರ್ಮ ಅಲ್ಲ. ನಮ್ಮ ಧರ್ಮ ಬೌದ್ಧ ಧರ್ಮ ಎಂದು ಹೇಳಿದರು.