ಉಡುಪಿ: ಕೃಷ್ಣ ನಗರಿಯಲ್ಲಿಂದು ‘ಲೀಲೋತ್ಸವ’ ಸಂಭ್ರಮ ಇದು ‘ವಿಟ್ಲ ಪಿಂಡಿ’ ಎಂದೇ ಹೆಸರುವಾಸಿಯಾಗಿದೆ. ಇಂದು ಉಡುಪಿ ನಗರ ಮತ್ತು ಆಸುಪಾಸಿನ ತುಂಬೆಲ್ಲಾ ಬಣ್ಣದ ವೇಷಗಳದ್ದೇ ಓಡಾಟ, ಹುಲಿಗಳ ಅಬ್ಬರದ್ದೇ ಮೆರೆದಾಟ.
ಅಷ್ಟಮಿ ವೇಷಕ್ಕೊಂದು ಮಾನವೀಯ ಮುಖವನ್ನು ಒದಗಿಸಿಕೊಟ್ಟ ರವಿ ಕಟಪಾಡಿ (Ravi Katapadi) ಅವರು ಈ ಬಾರಿ ಯಾವ ವೇಷವನ್ನು ಧರಿಸಲಿದ್ದಾರೆಂಬ ಕುತೂಹಲ ಎಲ್ಲರಲ್ಲಿಯೂ ಇತ್ತು.
ಇದೀಗ ಈ ಕುತೂಹಲಕ್ಕೆ ಉತ್ತರ ಸಿಕ್ಕಿದ್ದು, ಕಟಪಾಡಿಯ ಈ ಸಮಾಜ ಸೇವಕ ಈ ಬಾರಿ ವಿಶಿಷ್ಟ ವೇಷದೊಂದಿಗೆ ಜನರ ಮುಂದೆ ಬರಲಿದ್ದು, ಇಲ್ಲಿ ಸಂಗ್ರಹವಾಗುವ ದುಡ್ಡನ್ನು 2 ವರ್ಷದ ಮಗುವಿನ ಚಿಕಿತ್ಸೆಗೆ ನೀಡಲು ನಿರ್ಧರಿಸಿದ್ದಾರೆ.
ಈ ಬಾರಿ ರವಿ ಕಟಪಾಡಿ ಅವರು ‘ಸೀ ಪೋಕ್’ ಎಂಬ ಹಾಲಿವುಡ್ ವೇಷದಲ್ಲಿ ಮಿಂಚಲಿದ್ದು, ಉದ್ಯಾವರ, ಉಡುಪಿ, ಮಲ್ಪೆ, ಪಡುಕೆರೆ ಮತ್ತು ಇತರ ಪ್ರದೇಶಗಳಲ್ಲಿ ರವಿ ಕಟಪಾಡಿ ಫ್ರೆಂಡ್ಸ್ ತಂಡ ತಿರುಗಾಟ ನಡೆಸಿ ಜನರನ್ನು ರಂಜಿಸಿ ನಿಧಿ ಸಂಗ್ರಹಿಸಲಿದ್ದಾರೆ.
ಈ ವೇಷದ ಸಿದ್ಧತೆಗಾಗಿ ಮಂಗಳವಾರ (ಸೆ.05) ರಾತ್ರಿ 09 ಗಂಟೆಗೆ ರವಿ ಕುಳಿತಿದ್ದು, ಬುಧವಾರ (ಸೆ.06) ಬೆಳಿಗ್ಗೆ 9.00 ಗಂಟೆಗೆ ವೇಷ ಪೂರ್ಣಗೊಂಡಿದೆ. ಈ ಮೂಲಕ ಪ್ರತೀ ಬಾರಿಯಂತೆ ಈ ಸಲವೂ ರವಿ ಅವರು ಸುಮಾರು 40 ಗಂಟೆಗಳ ಕಾಲ ಗಟ್ಟಿ ಆಹಾರ ಸೇವಿಸದೇ ಬರೀ ದ್ರವಾಹಾರ ಸೇವಿಸಿ ತನ್ನ ವಿಶಿಷ್ಟ ವೇಷದ ಮೂಲಕ ತಿರುಗಾಟ ನಡೆಸಲಿದ್ದಾರೆ.
ಈ ಬಾರಿ ಜ್ವರ ಕೆಮ್ಮು ಶೀತದಿಂದ ಬಳಲುತ್ತಿರುವ ರವಿ ಕಟಪಾಡಿ, ಕಳೆದ 8 ವರ್ಷಗಳಿಂದ ನಡೆಸಿಕೊಂಡು ಬರುತ್ತಿರುವ ಪರಿಪಾಠ ಬಿಡಬಾರದು ಎಂದು ವೇಷ ತೊಟ್ಟಿದ್ದಾರೆ. ಬೆಳಗ್ಗೆಯಿಂದ ಕೇವಲ ಬಿಸಿನೀರು ಮಾತ್ರ ಕುಡಿದಿದ್ದಾರೆ.
ಈ ಸಂದರ್ಭದಲ್ಲಿ ರವಿ ಕಟಪಾಡಿ ಮಾತನಾಡಿ, “ಕಳೆದ 8 ವರ್ಷಗಳಿಂದ ಸುಮಾರು 113 ಮಕ್ಕಳಿಗೆ ಸುಮಾರು ಒಂದು ಕೋಟಿ ರೂಪಾಯಿಗಳಿಗೂ ಮಿಕ್ಕಿ ಧನಸಹಾಯ ಮಾಡಿದ ಸಂತೃಪ್ತಿ ನಮಗಿದೆ. ಈ ಬಾರಿ ವೇಷ ಹಾಕಿದರೂ, ಜನರ ಬಳಿಗೆ ತೆರಳಿ ಬಾಕ್ಸ್ ನಲ್ಲಿ ಹಣ ಸಂಗ್ರಹ ಮಾಡುವುದಿಲ್ಲ. ಬದಲಾಗಿ ಜನರು ನಮ್ಮ ಉದ್ದೇಶಕ್ಕೆ ಸಹಕಾರ ನೀಡಲು ಇಚ್ಛಿಸಿದ್ದಲ್ಲಿ ನಮ್ಮ ವಾಹನದ ಬಳಿಗೆ ಬಂದು ತಮ್ಮ ಧನ ಸಹಾಯವನ್ನು ನೀಡಬಹುದು. ಇದು ನಮ್ಮ ‘ರವಿ ಫ್ರೆಂಡ್ಸ್ ಕಟಪಾಡಿ’ ತಂಡದ ನಿರ್ಧಾರ. ನನ್ನಂತೆಯೇ ಹಲವಾರು ತಂಡಗಳು ವೈವಿಧ್ಯಮಯ ವೇಷ ಧರಿಸಿ ರೋಗಿಗಳ ಚಿಕಿತ್ಸೆ ಸಹಾಯಕ್ಕಾಗಿ ಹಣ ಸಂಗ್ರಹಿಸುತ್ತಿದ್ದಾರೆ. ಇವರಿಗೆಲ್ಲಾ ನಾನು ಪ್ರೇರಣೆಯಾಗಿರುವುದು ಖುಷಿ ತಂದಿದೆ..’ ಎಂದರು.
ಈ ಸಂದರ್ಭ ‘ರವಿ ಫ್ರೆಂಡ್ಸ್ ಕಟಪಾಡಿ’ ತಂಡದ ಸದಸ್ಯರು ಉಪಸ್ಥಿತರಿದ್ದರು.