ಉಡುಪಿ: ಅಂಬಲಪಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಿದಿಯೂರು ಗ್ರಾಮದಲ್ಲಿ ಕಳೆದ ಎರಡು ತಿಂಗಳಿನಿಂದ ಸಮರ್ಪಕವಾಗಿ ನೀರು ಪೂರೈಕೆ ಆಗುತ್ತಿಲ್ಲ. ದಿನೇ ದಿನೇ ನೀರಿನ ಸಮಸ್ಯೆ ಉಲ್ಬಣಿಸುತ್ತಿದ್ದು, ಗ್ರಾಪಂ ಕೂಡ ನೀರು ಪೂರೈಸಲು ಆಗದೆ ಕೈಚೆಲ್ಲಿ ಕೂತಿದೆ. ಇದರಿಂದ ಬೇಸತ್ತ ಗ್ರಾಮಸ್ಥರು ಇಂದು ಖಾಲಿ ಕೊಡದೊಂದಿಗೆ ಅಂಬಲಪಾಡಿ ಗ್ರಾಮ ಪಂಚಾಯತ್ ಕಚೇರಿಗೆ ಮುತ್ತಿಗೆ ಹಾಕಿದರು.
ಗ್ರಾಪಂ ವಿರುದ್ಧ ತೀವ್ರ ಅಸಮಾಧಾನಗೊಂಡಿದ್ದ ಮಹಿಳೆಯರು ನೇರವಾಗಿ ಕೊಡಪಾನಗಳೊಂದಿಗೆ ನೇರ ಕಚೇರಿಯೊಳಗೆ ನುಗ್ಗಿದರು. ಕಚೇರಿಯಲ್ಲಿದ್ದ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡ ಗ್ರಾಮಸ್ಥರು, ನೀರು ಕೊಡಲು ಸಾಧ್ಯವಾಗದ ಪಂಚಾಯತ್‌ಗೆ ಬೀಗ ಹಾಕಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಳೆದ ಎರಡು ತಿಂಗಳಿನಲ್ಲಿ ಮೂರು ಬಾರಿ ಮಾತ್ರ ನೀರು ಕೊಟ್ಟಿದ್ದಾರೆ. ಅದರ ನಂತರ ನೀರು ಕೊಡಲಿಲ್ಲ. ಕೆಲವು ಪ್ರದೇಶಗಳಿಗೆ ಗ್ರಾಪಂನವರು ನೀರು ಕೊಡುತ್ತಾರೆ. ಆದರೆ ನಮ್ಮಲ್ಲಿಗೆ ಬರುವುದಿಲ್ಲ. ಸುಮಾರು 80 ಮನೆಯವರು ಇದರಿಂದ ತೊಂದರೆ ಅನುಭವಿಸುತ್ತಿದ್ದಾರೆ ಎಂದು ಸ್ಥಳೀಯರಾದ ಬೇಬಿ ಆರೋಪಿಸಿದರು.
ಈ ವೇಳೆ ಕಚೇರಿಗೆ ಆಗಮಿಸಿದ ಗ್ರಾಪಂ ಅಧ್ಯಕ್ಷೆ ರೋಹಿಣಿಯವರೊಂದಿಗೆ ಗ್ರಾಮಸ್ಥರು ವಾಗ್ವಾದ ನಡೆಸಿದರು. ಎರಡು ತಿಂಗಳುಗಳಿಂದ ನೀರಿಲ್ಲದೆ ಜನ ಪರದಾಡುತ್ತಿದ್ದರೂ ಅಧ್ಯಕ್ಷರು ಒಮ್ಮೆಯೂ ಭೇಟಿ ನೀಡಿಲ್ಲ ಎಂದು ತರಾಟೆಗೆ ತೆಗೆದುಕೊಂಡರು. ಈ ವೇಳೆ ಗ್ರಾಪಂ ಸದಸ್ಯರು ಹಾಗೂ ಗ್ರಾಮಸ್ಥರ ಮಧ್ಯೆ ತೀವ್ರ ಮಾತಿನ ಚಕಮಕಿ ನಡೆಯಿತು.
ಆ ಬಳಿಕ ಮೂರು ದಿನಗಳಿಗೊಮ್ಮೆ ನೀರು ಪೂರೈಕೆ ಮಾಡುವುದಾಗಿ ಅಧ್ಯಕ್ಷರು ಗ್ರಾಮಸ್ಥರಿಗೆ ಭರವಸೆ ನೀಡಿದರು. ಈ ಹಿನ್ನೆಲೆಯಲ್ಲಿ ಗ್ರಾಮಸ್ಥರು ಪ್ರತಿಭಟನೆಯನ್ನು ಅಂತ್ಯಗೊಳಿಸಿದರು. ಈ ಸಂದರ್ಭದಲ್ಲಿ ಗ್ರಾಮಸ್ಥರಾದ ರಂಜನ್ ಕಿದಿಯೂರು, ಜನಾರ್ದನ ಕಿದಿಯೂರು, ಯತಿರಾಜ್ ಕಿದಿಯೂರು, ದೇವರಾಜ್ ಕಿದಿಯೂರು, ಶಾರದಾ ಪೂಜಾರ್ತಿ, ಸುಮತಿ ಕಿದಿಯೂರು, ಅಂಬಾ, ಗೀತಾ, ವಿಜಯ, ಸತ್ಯವತಿ, ವಿಠಲ ಕರ್ಕೇರ ಮೊದಲಾದವರು ಉಪಸ್ಥಿತರಿದ್ದರು.