ಬೆಂಗಳೂರು: ಪುತ್ತೂರಿನ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಮತ್ತು ಉದ್ಯೋಗಾಕಾಂಕ್ಷಿಗಳ ಪಾಲಿಗೆ ಭರವಸೆಯ ಆಶಾಕಿರಣವಾಗಿರುವ ‘ವಿದ್ಯಾಮಾತಾ ಅಕಾಡೆಮಿ’ಯ ಸ್ಥಾಪಕರಾಗಿರುವ ಭಾಗ್ಯೇಶ್ ರೈ ಅವರಿಗೆ ‘ಶಿಕ್ಷಣ ಸೇವಾ ರತ್ನ’ ಪ್ರಶಸ್ತಿ ಲಭಿಸಿದೆ.
‘ಜನಸಿರಿ ಫೌಂಡೇಶನ್’ ವತಿಯಿಂದ ಕೊಡಮಾಡುವ ರಾಜ್ಯಮಟ್ಟದ ‘ಶಿಕ್ಷಣ ಸೇವಾ ರತ್ನ’ ಪ್ರಶಸ್ತಿಯನ್ನು ನಗರದ ಟೌನ್ ಹಾಲ್ ನಲ್ಲಿ ನಡೆದ ಸಮಾರಂಭದಲ್ಲಿ ಭಾಗ್ಯೇಶ್ ರೈ ಅವರಿಗೆ ಪ್ರದಾನ ಮಾಡಲಾಯಿತು.
ಹಕ್ಕಿ-ಪಿಕ್ಕಿ ಸೇರಿದಂತೆ ನಾನಾ ಬುಡಕಟ್ಟು ಜನಾಂಗದ ವಿದ್ಯಾರ್ಥಿಗಳಿಗೆ ಸರಕಾರದ ಅನೇಕ ಸವಲತ್ತುಗಳನ್ನು ಒದಗಿಸುವಲ್ಲಿ ವಹಿಸಿದ್ದ ಶ್ರಮ, ಸಮಾನ ಶಿಕ್ಷಣ ನೀತಿ ಜಾರಿಗೆ ಬರಬೇಕೆಂಬ ಹೋರಾಟಗಳಲ್ಲಿ ಭಾಗವಹಿಸಿದ್ದಕ್ಕೆ, ವಿದ್ಯಾಮಾತ ಸಂಸ್ಥೆಯ ಮೂಲಕ ಸಾವಿರಾರು ವಿದ್ಯಾರ್ಥಿಗಳಿಗೆ ಉದ್ಯೋಗ ಮೇಳಗಳ ಮೂಲಕ ಉದ್ಯೋಗಾವಕಾಶಗಳನ್ನು ಕಲ್ಪಿಸಿಕೊಟ್ಟಿರುವುದು, ವಿದ್ಯಾಮಾತಾ ಅಕಾಡೆಮಿಯ ಮೂಲಕ ನೂರಾರು ವಿದ್ಯಾರ್ಥಿಗಳನ್ನು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತೀರ್ಣರಾಗುವಂತೆ ಮಾಡಿ ಸರಕಾರಿ ಉದ್ಯೋಗ ದೊರಕುವಂತೆ ಮಾಡಿದ್ದು, ‘ಅಗ್ನಿಪಥ್ ಯೋಜನೆ’ಯ ಮೂಲಕ 18 ಯುವಕರು ದೇಶ ಸೇವೆ ಮಾಡಲು, ಸೈನ್ಯಕ್ಕೆ ಸೇರಲು ಕಾರಣಕರ್ತರಾಗಿರುವುದು, ಹಲವಾರು ಸರಕಾರಿ ಶಾಲೆಗಳಿಗೆ ವಿದ್ಯಾಮಾತಾದ ಹಲವಾರು ಯೋಜನೆಗಳ ಮೂಲಕ ಸಹಾಯ ಮಾಡುತ್ತಿರುವುದು.. ಸೇರಿದಂತೆ ವಿದ್ಯಾಮಾತಾ ಅಕಾಡೆಮಿಯ ಬಹುಮುಖಿ ಶಿಕ್ಷಣ ಸೇವೆಗಳನ್ನು ಗುರುತಿಸಿ ಪ್ರಶಸ್ತಿಯ ಆಯ್ಕೆ ಸಮಿತಿಯು ಕೊಡಗು, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಿಂದ ಭಾಗ್ಯೇಶ್ ರೈ ಅವರನ್ನು ಆಯ್ಕೆ ಮಾಡಿದೆ.
ಕಾಲಜ್ಞಾನ ಮಠ ಗಜೇಂದ್ರಗಡದ ಕಾಲಜ್ಞಾನ ಬ್ರಹ್ಮ ಸದ್ಗುರು ವಿಜ್ಞಾನ ಕಾಲಜ್ಞಾನ ಶಿವಯೋಗಿ ಶರಣಬಸವ ಮಹಾಸ್ವಾಮಿಗಳು, ಶ್ರೀ ಬೇಲಿ ಮಠ ಮಹಾಸಂಸ್ಥಾನ ಕಾಟನ್ ಪೇಟೆ ಬೆಂಗಳೂರು ಇದರ ನಿ.ಪ್ರ. ಶಿವಾನುಭವ ಚರಮೂರ್ತಿ ಶಿವರುದ್ರ ಮಹಾಸ್ವಾಮಿಗಳು, ಶ್ರೀ ಸಿದ್ಧಾರೂಢ ಮಿಷನ್ ಆಶ್ರಮ ರಾಮೋಹಳ್ಳಿ ಬೆಂಗಳೂರಿನ ಡಾ. ಆರೂಢ ಭಾರತಿ ಸ್ವಾಮೀಜಿಯವರ ಸಾನಿಧ್ಯದಲ್ಲಿ, ನಿವೃತ್ತ ಐಎಎಸ್ ಅಧಿಕಾರಿಗಳಾದ ಕೆ ಶಿವರಾಮು, ಕರ್ನಾಟಕ ರಾಜ್ಯ ಪದವೀಧರ ವೇದಿಕೆಯ ರಾಮೋಜಿ ಗೌಡ, ನಾಡಿನ ಹಿರಿಯ ಖ್ಯಾತ ಕವಿಗಳಾದ ಬಿ ಆರ್ ಲಕ್ಷ್ಮಣ ರಾವ್, ಖ್ಯಾತ ಚಿತ್ರ ನಿರ್ದೇಶಕ ಸುನಿಲ್ ಕುಮಾರ್ ದೇಸಾಯಿ ಸೇರಿದಂತೆ ಹಲವಾರು ಗಣ್ಯರ ಉಪಸ್ಥಿತಿಯಲ್ಲಿ ಈ ಪ್ರಶಸ್ತಿಯನ್ನು ಭಾಗ್ಯೇಶ್ ರೈ ಅವರಿಗೆ ಪ್ರದಾನ ಮಾಡಲಾಯಿತು.