ಉಜಿರೆ: ಕರಾವಳಿ, ಮಲೆನಾಡು ಭಾಗದಲ್ಲಿದಲ್ಲಿ ಯಕ್ಷಗಾನಕ್ಕೆ ಮಹತ್ವದ ಸ್ಥಾನವಿದೆ. ಈ ಯಕ್ಷಕಲೆಗೆ ಪೂಜನೀಯ ಸ್ಥಾನ ನೀಡಿ ಆರಾಧಿಸಲಾಗುತ್ತದೆ. ವಿವಿಧ ಪೌರಾಣಿಕ ಪ್ರಸಂಗಗಳನ್ನು ಆಧರಿಸಿ ನಡೆಯುವ ಯಕ್ಷಗಾನ ಬಯಲಾಟವನ್ನು ನೋಡುವುದೇ ಒಂದು ಅಂದ. ಈ ಯಕ್ಷಗಾನಕ್ಕೆ ಸಂಬಂಧಿಸಿದ ಹಲವಾರು ವಿಡಿಯೋ ಕ್ಷಿಪ್ಸ್ ಗಳು ಸಾಮಾಜಿಕ ಜಾಲತಾಣದಲ್ಲಿ ಆಗಾಗ್ಗೆ ಕಾಣಸಿಗುತ್ತವೆ. ಅದೇ ರೀತಿ ಇಲ್ಲೊಂದು ಪುಟ್ಟ ಮಗುವಿನ ಚಂದವಾದ ಯಕ್ಷಗಾನ ಬಯಲಾಟದ ವಿಡಿಯೋ ವೈರಲ್ ಆಗಿದ್ದು, ನೆಟ್ಟಿಗರು ಈ ಪುಟ್ಟ ಮಗುವಿನ ಯಕ್ಷಗಾನದ ಮೇಲಿನ ಭಕ್ತಿ ಮತ್ತು ಉತ್ಸಾಹಕ್ಕೆ ತಲೆ ಬಾಗಲೇಬೇಕು ಎಂದಿದ್ದಾರೆ.
ಯಕ್ಷಧ್ರುವ ಪಟ್ಟ ಸತೀಶ್ ಶೆಟ್ಟಿಯವರ ಸಾರಥ್ಯದಲ್ಲಿ ಬೆಳ್ತಂಗಡಿಯ ಉಜಿರೆಯಲ್ಲಿ ನಡೆದ ಪಾವಂಜೆ ಮೇಳದ ಶ್ರೀ ದೇವಿ ಮಹಾತ್ಮೆ ಯಕ್ಷಗಾನದ ಬಯಲಾಟದಲ್ಲಿ ಪುಟ್ಟ ಮಗುವೊಂದು ದೇವತೆಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ವಿಡಿಯೋದಲ್ಲಿ ಈ ಮಗು ಪ್ರಬುದ್ಧ ಯಕ್ಷಗಾನ ಕಲಾವಿದರಿಗೆ ಸರಿಸಮವಾಗಿ ರಂಗಸ್ಥಳದಲ್ಲಿ ಭಾಗವತಿಕೆಗೆ ತಕ್ಕನಾಗಿ ನೃತ್ಯ ಮಾಡುತ್ತಿರುವ ಮನಮೋಹಕ ದೃಶ್ಯಾವಳಿಯನ್ನು ಕಾಣಬಹುದು.