Site icon newsroomkannada.com

ದೈತ್ಯ ಅನಕೊಂಡ ಹಾವನ್ನು ಎತ್ತಿ ಹಿಡಿದು ತಲೆಗೆ ಮುತ್ತಿಟ್ಟ ಉರಗ ಪ್ರೇಮಿ: ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್

ಸಾಮಾನ್ಯವಾಗಿ ಹಾವುಗಳನ್ನು ಕಂಡರೆ ಒಂದು ಕ್ಷಣ ಜೀವ ಝಲ್ ಆಗೋದಂತು ಖಂಡಿತ. ಇನ್ನು ಒಂದಿಷ್ಟು ಜನ ಹಾವನ್ನ ಪ್ರೀತಿಸುವವರು ಇದ್ದಾರೆ. ಹೌದು ಕೆಲವೊಬ್ಬರು ವಿವಿಧ ಬಗೆಯ ಹಾವುಗಳನ್ನು ಸಾಕು ಪ್ರಾಣಿಗಳಂತೆ ಮನೆಯಲ್ಲಿ ಸಾಕುತ್ತಾರೆ. ಆದರೆ ಇಂಥಹ ಸಾಹಸ ಸಾಮಾನ್ಯವಾಗಿ ನಮ್ಮ ದೇಶದಲ್ಲಿ ಕಂಡುಬರುವುದಿಲ್ಲ. ಇನ್ನೂ ಕೆಲವರು ತಮ್ಮ ಪ್ರಾಣವನ್ನು ಪಣಕ್ಕಿಟ್ಟು ವಿಷಪೂರಿತ ಹಾವುಗಳನ್ನು ಕೈಯಲ್ಲಿ ಹಿಡಿದು ಸಾಹಸ ಮೆರೆಯುತ್ತಾರೆ. ಇಂತಹ ಹಲವಾರು ವೀಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಆಗಾಗ್ಗೆ ಹರಿದಾಡುತ್ತಿರುತ್ತವೆ.  ಈಗ ಅಂತಹದ್ದೇ ವಿಡಿಯೋ  ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಅಮೇರಿಕಾದ ವ್ಯಕ್ತಿಯೊಬ್ಬ ಆತನಿಗಿಂತ ಎರಡು ಪಟ್ಟು ದೊಡ್ಡದಾಗಿರುವ ದೈತ್ಯ ಅನಕೊಂಡ ಹಾವನ್ನು ಬರಿಗೈಯಲ್ಲಿ ಎತ್ತಿ ಹಿಡಿದಿದ್ದು ಮಾತ್ರವಲ್ಲದೆ, ಪ್ರೀತಿಯಿಂದ ಆ ಅನಕೊಂಡದ ತಲೆಗೆ ಮುತ್ತಿಟ್ಟಿದ್ದಾನೆ. ಈತನ ಈ ಭಂಡ ಧೈರ್ಯವನ್ನು ಕಂಡು ಹಲವರು ಶಾಕ್ ಆಗಿದ್ದಾರೆ.

ದಿ ರಿಯಲ್ ಟಾರ್ಜನ್ ಮತ್ತು ದಿ ಕಿಂಗ್ ಆಫ್ ದಿ ಜಂಗಲ್ ಎಂದು ಕರೆದುಕೊಳ್ಳುವ ಅಮೇರಿಕಾದ ಫ್ಲೋರಿಡಾದಲ್ಲಿನ  ಮೈಕ್ ಹೋಲ್ಸ್ಟಲ್ ಎಂಬವರು ಈ  ವೀಡಿಯೋವನ್ನು  ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದು,  ವೀಡಿಯೋದಲ್ಲಿ ಹೋಲ್ಸ್ಟಲ್ ಅವರು ದೈತ್ಯ ಅನಕೊಂಡವನ್ನು  ಯಾವುದೇ ಅಂಜಿಕೆ ಅಥವಾ ಭಯವಿಲ್ಲದೆ ಬರಿಗೈಯಲ್ಲಿ ಹಿಡಿದು, ಆ ವಿಷಪೂರಿತ ಹಾವಿನ ತಲೆಗೆ  ಮುತ್ತಿಡುವುದನ್ನು ನೋಡಬಹುದು.

ವೀಡಿಯೋದಲ್ಲಿ   ವಿಶಾಲವಾದ ಹುಲ್ಲುಗಾವಲಿನ ಪ್ರದೇಶವೊಂದರಲ್ಲಿ ದೈತ್ಯಾಕಾರದ ಅನಕೊಂಡವೊಂದು ಸರಸರನೆ ಹೋಗುತ್ತಿತ್ತು. ಇದನ್ನು ಕಂಡ ಮೈಕ್ ಆ ಹಾವಿನ ಬಳಿ ಹೋಗಿ,  ಅದರ ಬಾಲವನ್ನು ಮೆಲ್ಲಗೆ ಹಿಡಿದು, ಈ ಬದಿಗೆ ಎಳೆದು ತರುತ್ತಾರೆ. ನಂತರ ಹಾವಿನ ತಲೆಯನ್ನು ಹಿಡಿದುಕೊಳ್ಳಲು ಪ್ರಯತ್ನಿಸುತ್ತಾರೆ. ಅಷ್ಟರಲ್ಲಿ  ಆ ದೈತ್ಯ ಅನಕೊಂಡ, ತನ್ನ ಬಾಲದಿಂದ ಮೈಕ್ ಅವರ ಕೈಯನ್ನು ಸುತ್ತಿಕೊಳ್ಳುತ್ತದೆ. ಮೈಕ್  ಜಾಣ್ಮೆಯಿಂದ ಹಾವಿನ ಬಲೆಯಿಂದ ತನ್ನ ಕೈಯನ್ನು ಬಿಡಿಸಿಕೊಂಡು,  ತನ್ನ ಎರಡೂ ಕೈಗಳಿಂದ ನಿಧಾನಕ್ಕೆ ಹಾವಿನ ತಲೆಯನ್ನು ಹಿಡಿದು, ಹಾವಿಗೆ ಪ್ರೀತಿಯಿಂದ ಮುತ್ತಿಡುತ್ತಾರೆ. ಬಳಿಕ ಆ ದೈತ್ಯ ಸರೀಸೃಪವನ್ನು  ಬಾಹುಬಲಿಯಂತೆ ಎತ್ತಿಕೊಂಡು ಕ್ಯಾಮರಾಗೆ ಪೋಸ್ ನೀಡುತ್ತಾರೆ.   ಇವರ ಈ ಧೈರ್ಯ, ಸಾಹಸ ಅನೇಕರನ್ನು ಅಚ್ಚರಿಗೊಳಿಸಿದೆ.  ಇದೊಂದೇ ಮಾತ್ರವಲ್ಲದೆ, ಇಂತಹ ಅನೇಕ ಸಾಹಸಮಯ ವೀಡಿಯೋಗಳನ್ನು ಅವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯನ್ನು ಹಂಚಿಕೆಯಾಗುತ್ತಿರುತ್ತದೆ.

Exit mobile version