ಲಕ್ನೋ: ರೈಲು ಪ್ರಯಾಣಿಕರು ತಮ್ಮ ಹಾವುಗಳಿಗೆ ಡೊನೇಶನ್ ನೀಡಲಿಲ್ಲ ಎಂಬ ಸಿಟ್ಟಿನಲ್ಲಿ ಐದು ಜನ ಹಾವಡಿಗರ ತಂಡವೊಂದು ರೈಲು ಬೋಗಿಯೊಳಗೆ ಹಾವುಗಳನ್ನೇ ಬಿಟ್ಟು ಪ್ರಯಾಣಿಕರಲ್ಲಿ ಪ್ರಾಣಭೀತಿ ಮೂಡಿಸಿದ ವಿಚಿತ್ರ ಘಟನೆಯೊಂದು ಉತ್ತರಪ್ರದೇಶದ ಮಹೋಬಾ ರೈಲು ನಿಲ್ದಾಣದಲ್ಲಿ ನಡೆದಿದೆ.
ಈ ಘಟನೆಗೆ ಸಂಬಂಧಿಸಿದಂತೆ ರೈಲ್ವೇ ಪೊಲೀಸರು ಐವರು ಹಾವಾಡಿಗರ ಮೇಲೆ ರೈಲಿನಲ್ಲಿ ಭೀತಿಯ ವಾತಾವರಣ ಸೃಷ್ಟಿಸಿದ ಕಾರಣಕ್ಕಾಗಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ರೈಲು ಉತ್ತರಪ್ರದೇಶದ ಮಹೋಬಾ ನಿಲ್ದಾಣಕ್ಕೆ ಬರುತ್ತಿದ್ದಂತೆ ಬೋಗಿಯೊಂದಕ್ಕೆ ಪ್ರವೇಶಿದ ಹಾವಾಡಿಗರಿದ್ದ ತಂಡ ಅಲ್ಲಿದ್ದ ಪ್ರಯಾಣಿಕರಲ್ಲಿ ಹಾವುಗಳಿಗಾಗಿ ಚಂದಾ ಕೇಳಲು ಪ್ರಾರಂಭಿಸಿದರು. ಆದರೆ ಪ್ರಯಾಣಿಕರು ಚಂದಾ ನೀಡಲು ನಿರಾಕರಿಸಿದಾಗ, ಮುಂದೆ ನಾವೊಂದು ಬಹುದೊಡ್ಡ ಗಂಡಾಂತರದಲ್ಲಿ ಸಿಲುಕಿಕೊಳ್ಳಲಿದ್ದೇವೆಂಬ ಕಲ್ಪನೆಯೂ ಸಹ ಅವರಲ್ಲಿದ್ದಿರಲಿಕ್ಕಿಲ್ಲ.
ಬೋಗಿಯಲ್ಲಿದ್ದ ಪ್ರಯಾಣಿಕರು ದುಡ್ಡು ಬಿಚ್ಚುವುದಿಲ್ಲವೆಂಬುದು ಖಚಿತವಾಗುತ್ತಿದ್ದಂತೆ ಈ ಹಾವಾಡಿಗರು ತಮ್ಮ ಬುಟ್ಟಿಗಳಲ್ಲಿದ್ದ ಹಾವುಗಳನ್ನು ಒಂದೊಂದಾಗಿ ಬೋಗಿಯೊಳಗೆ ಬಿಡುತ್ತಾರೆ. ಹಾವುಗಳು ಬೋಗಿ ತುಂಬಾ ಹರಿದಾಡುತ್ತಿರುವುದನ್ನು ಕಂಡು ಗಾಬರಿಗೊಂಡ ಪ್ರಯಾಣಿಕರಲ್ಲಿ ಕೆಲವರು ತಕ್ಷಣವೇ ಕಂಟ್ರೋಲ್ ರೂಂಗೆ ಮಾಹಿತಿ ನೀಡುತ್ತಾರೆ.
ಈ ನಡುವೆ, ಹಾವುಗಳಿಂದ ತಮ್ಮನ್ನು ರಕ್ಷಿಸಿಕೊಳ್ಳಲು, ರೈಲು ಮುಂದಿನ ನಿಲ್ದಾಣವನ್ನು ತಲುಪುವಲ್ಲಿವರೆಗೆ ಈ ಬೋಗಿಯಲ್ಲಿದ್ದ ಪ್ರಯಾಣಿಕರು ಇನ್ನೊಂದು ಬೋಗಿಯಲ್ಲಿ ರಕ್ಷಣೆಯನ್ನು ಪಡೆದುಕೊಳ್ಳುತ್ತಾರೆ.
ಬಳಿಕ ಈ ರೈಲು ಝಾನ್ಸಿ ನಿಲ್ದಾಣಕ್ಕೆ ತಲುಪುತ್ತಿದ್ದಂತೆ ಬೇರೊಂದು ಬೋಗಿಯಲ್ಲಿ ಆಶ್ರಯ ಪಡೆದಿದ್ದ ಈ ಬೋಗಿಯ ಪ್ರಯಾಣಿಕರನ್ನು ಬೇರೊಂದು ಬೋಗಿಗೆ ಸುರಕ್ಷಿತವಾಗಿ ಸ್ಥಳಾಂತರಿಸಲಾಯಿತು.
ಬಳಿಕ ಹಾವಾಡಿಗರು ಹಾವುಗಳನ್ನು ಬಿಟ್ಟಿದ್ದ ಬೋಗಿಯಲ್ಲಿ ರೈಲ್ವೇ ಅಧಿಕಾರಿಗಳು ಹುಡುಕಾಡಿದರೂ ಅವರಿಗೆ ಯಾವುದೇ ಹಾವುಗಳು ಪತ್ತೆಯಾಗಿಲ್ಲ ಎಂದು ತಿಳಿದುಬಂದಿದೆ. ಈ ನಡುವೆ ಬೋಗಿಗಳ ಸಂಧಿಗಳಲ್ಲಿ ಅಡಗಿಕೊಂಡಿರಬಹುದಾಗಿರುವ ಹಾವುಗಳಿಗಾಗಿ ಅಧಿಕಾರಿಗಳು ಹುಡುಕಾಡುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.