ಮಂಗಳೂರು: ಎತ್ತಿನಹೊಳೆ ಯೋಜನೆ ಮುಗಿದ ಅಧ್ಯಾಯ, ಹಳೆ ವಿಚಾರವನ್ನು ಪ್ರಶ್ನೆ ಕೇಳಬೇಡಿ ಎಂದು ಮಾಜಿ ಸಚಿವ ವೀರಪ್ಪ ಮೊಯ್ಲಿ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ್ದಾರೆ.
ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿದ ಮೊಯ್ಲಿ ಅವರಲ್ಲಿ ಎತ್ತಿನಹೊಳೆ ಯೋಜನೆಯನ್ನು ನೀವು ತರಾತುರಿಯಲ್ಲಿ ಆರಂಭಿಸಿದ್ದಿರಿ, ಈಗ ಅದರಿಂದಾಗಿ ಕರಾವಳಿಗೇ ಬರ ಬಂದಿದೆ, ಈಗಲಾದರೂ ನೀವು ನಿಲ್ಲಿಸಲು ಹೇಳುತ್ತೀರಾ ಎಂಬ ಪ್ರಶ್ನೆಗೆ, ಅದೆಲ್ಲ ಹಳೆ ವಿಚಾರ, ಪ್ರತಿ ಬಾರಿ ಆ ಕುರಿತು ಪ್ರಶ್ನೆ ಮಾಡಬೇಡಿ ಎಂದು ಹೇಳಿದ್ದಾರೆ.
ಯೋಜನೆ ಜಾರಿಗೆ ನೀವು ಮತ್ತು ಸದಾನಂದ ಗೌಡ ಕಾರಣಕರ್ತರು, ಯಾಕೆ ಪ್ರಶ್ನೆ ಮಾಡಬಾರದು, ಅದಕ್ಕೆ 23 ಸಾವಿರ ಕೋಟಿ ದುಡ್ಡು ಖರ್ಚು ಮಾಡಿದ್ದೀರಲ್ಲಾ ಎಂದು ಕೇಳಿದ್ದಕ್ಕೆ ಬಿಜೆಪಿಯವರು ಯೋಜನೆ ನಿಲ್ಲಿಸಿದ್ದಾರೆಯೇ.. ನಾವು ಯಾಕೆ ನಿಲ್ಲಿಸಬೇಕು. ಇದಕ್ಕೆಲ್ಲ ಉತ್ತರ ನೀಡಲ್ಲ ಎಂದರು. ನೀವು ಕರಾವಳಿ ಜನರಿಗೆ ಉತ್ತರ ಕೊಡಲೇಬೇಕು ಎಂದಾಗ, ನಾನು ಎಲ್ಲಿ ಉತ್ತರ ಕೊಡಬೇಕೋ ಅಲ್ಲಿಯೇ ಕೊಡುತ್ತೇನೆ ಎಂದು ಮೌನಕ್ಕೆ ಜಾರಿದರು.
ಚಿಕ್ಕಬಳ್ಳಾಪುರದಲ್ಲಿ ನೀವು ಸ್ಪರ್ಧೆ ಮಾಡುತ್ತೀರಂತೆ, ಅಲ್ಲಿನ ಜನರಿಗೂ ಉತ್ತರ ಕೊಡಬೇಕಾಗುತ್ತದೆ ಎಂದಾಗ, ಅದು ಆ ಪ್ರಶ್ನೆ ಬಂದಾಗ ಉತ್ತರ ಕೊಡುತ್ತೇನೆ ಎಂದರು. ಎತ್ತಿನಹೊಳೆ ಯೋಜನೆಯಿಂದ ಒಂದು ಹನಿ ನೀರೂ ಕಳಿಸೋಕೆ ಆಗಿಲ್ಲ, 20 ಸಾವಿರ ಖರ್ಚು ಮಾಡಿದ್ದೀರಿ ಎಂದಾಗ, ನೀವೇ ಒಂದೆಡೆ ನೀರು ಹರಿಸಿಲ್ಲ ಅಂತೀರಿ. ಇಲ್ಲಿ ನೀರಿಲ್ಲ ಬರಡಾಗಿದೆ ಅಂತೀರಿ. ನೀರೇ ಹರಿಸಿಲ್ಲಾಂದ್ರೆ, ನೀರು ಖಾಲಿಯಾಗೋದು ಹೇಗಾಗುತ್ತೆ. ಈಗ ಯೋಜನೆ ಕಾಮಗಾರಿ ಆಗುತ್ತಾ ಇದೆ. ನಿಮ್ಮಲ್ಲೇ ಪ್ರಶ್ನೆ ಉತ್ತರ ಎರಡೂ ಇದೆ ಎಂದರು.
ಮೊಯ್ಲಿ ನೀವು ಯೋಜನೆ ವೈಫಲ್ಯದ ಬಗ್ಗೆ ಉತ್ತರ ಕೊಡಬೇಕು ಎಂದು ಮತ್ತೆ ಕೇಳಿದ್ದಕ್ಕೆ ನಾನು ಉತ್ತರ ಕೊಡುತ್ತೇನೆ, ನಿಮಗೆ ಕೊಡಬೇಕಿಲ್ಲ ಎಂದು ಸಿಡುಕು ತೋರಿದರು. ಪದೇ ಪದೇ ಈ ಕುರಿತು ಪ್ರಶ್ನೆ ಕೇಳಿದ್ದರಿಂದ ಸಿಡಿಮಿಡಿಗೊಂಡ ಮೊಯ್ಲಿ ನಾನು ಬೇಕಾದಲ್ಲಿ ಉತ್ತರ ಕೊಡುತ್ತೇನೆ ಎಂದು ಸುಮ್ಮನಾದರು.