ಬೆಂಗಳೂರು: ಬೆಂಗಳೂರು ನಗರದ ಅತ್ಯಂತ ಹೈ ಟೆಕ್ ದೋಸೆ ಎನ್ನುವ ಹೋಟೆಲ್‌ನಲ್ಲಿ ದೋಸೆ ಮಾಡುತ್ತಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಹಾಗಂತ ಇದು ಸರಿಯಾದ ಕಾರಣಕ್ಕೆ ವಿಡಿಯೋ ವೈರಲ್ ಆಗುತ್ತಿಲ್ಲ. ವೈರಲ್ ಫೂಟೇಜ್‌ನಲ್ಲಿ ಬೆಂಗಳೂರಿನ ಅತ್ಯಂತ ಪ್ರತಿಷ್ಠಿತ ರಾಮೇಶ್ವರಂ ಕಫೆ ದೋಸೆ ಮಾಡಲು ಹಾಗೂ ದೋಸೆ ಹಂಚನ್ನು ಕ್ಲೀನ್ ಮಾಡಲು ಬಳಸುವ ಮಾರ್ಗವನ್ನು ತೋರಿಸಲಾಗಿದೆ. ದೋಸೆ ಹಿಟ್ಟನ್ನು ಹಂಚಿನ ಮೇಲೆ ಹಾಕುವ ಮುನ್ನವೇ ಹಂಚನ್ನು ಕ್ಲೀನ್ ಮಾಡುವ ಸಲುವಾಗಿ ಪೊರಕೆಯನ್ನು ಬಳಸಲಾಗಿದೆ. ಅದರೊಂದಿಗೆ ದೋಸೆಯ ಮೇಲೆ ಹಾಕುವ ತುಪ್ಪದ ಪ್ರಮಾಣದ ಬಗ್ಗೆಯೂ ನೆಟ್ಟಿಗರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಅದರಲ್ಲೂ ದೋಸೆ ಮಾಡುತ್ತಿರುವ ರೀತಿಯನ್ನು ಕಂಡು ಜನರು ಟೀಕೆ ವ್ಯಕ್ತಪಡಿಸುತ್ತಿದ್ದಾರೆ.
‘Thefoodiebae’ ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿರುವ ವೀಡಿಯೊದಲ್ಲಿ ಬಾಣಸಿಗ, ದೋಸೆ ಮಾಡುವ ಹಂಚನ್ನು ದೋಸೆ ಹಿಟ್ಟು ಹೊಯ್ಯುವ ಮುನ್ನ ನೀರಿನಿಂದ ತೇವಗೊಳಿಸುತ್ತಿರುವುದು ಕಂದಿದೆ. ಆ ಬಳಿಕ ಇದನ್ನು ಸ್ವಚ್ಛ ಮಾಡಲು ಪೊರಕೆಯನ್ನು ಬಳಸಿದ್ದಾರೆ. ಆ ಬಳಿಕ ದೊಡ್ಡ ಹಂಚಿನ ಮೇಲೆ ದೋಸೆ ಹಿಟ್ಟು ಹಾಕಲು ಮುಂದಾಗಿದ್ದಾರೆ. ಒಂದೇ ಸಮಯಕ್ಕೆ ಹಲವಾರು ದೋಸೆಗಳನ್ನು ಇಲ್ಲಿ ಹೊಯ್ದಿದ್ದಾರೆ. ಇದೆಲ್ಲದರ ನಡುವೆ ಈ ದೋಸೆಗಳ ಮೇಲೆ ಬಾಣಸಿಗ ಹಾಕುವ ತುಪ್ಪದ ಪ್ರಮಾಣ ಕಂಡು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಅದರೊಂದಿಗೆ ಆಲೂ ಮಸಾಲಾ ಹಾಗೂ ಮಸಾಲೆಗಳನ್ನು ಕೂಡ ಹಾಕಿದ್ದಾನೆ. ದೋಸೆ ಹಂಚುಗಳನ್ನು ಕ್ಲೀನ್ ಮಾಡಲು ಪೊರಕೆಯನ್ನು ಬಳಸಿದ್ದು ಹಾಗೂ ಅತಿಯಾದ ಪ್ರಮಾಣದಲ್ಲಿ ತುಪ್ಪವನ್ನು ಹಾಕಿದ್ದನ್ನು ಕಂಡು ನೆಟ್ಟಿಗರು ಹೌಹಾರಿದ್ದು, ಇದನ್ನು ಮೋಸ್ಟ್ ಹೈ ಟೆಕ್ ದೋಸೆ ಎಂದು ಲೇಬಲ್ ಮಾಡಿರುವುದು ಯಾಕೆ ಎಂದು ಪ್ರಶ್ನೆ ಮಾಡಿದ್ದಾರೆ.