newsroomkannada.com

ಉರ್ವಾ ಸ್ಟೋರ್‌ ಮಹಾಗಣಪತಿ ದೇವರಿಗೆ ಬ್ರಹ್ಮರಥ ಸಮರ್ಪಣೆ, ಬ್ರಹ್ಮಕಲಶೋತ್ಸವ

ಮಂಗಳೂರು: ಉರ್ವಾ ಸ್ಟೋರ್‌ ಮಹಾಗಣಪತಿ ದೇವರಿಗೆ ಬ್ರಹ್ಮರಥ ಸಮರ್ಪಣೆ ಹಾಗೂ ಬ್ರಹ್ಮರಥೋತ್ಸವದೊಂದಿಗೆ ವೈಭವೋಪೇತವಾದ ಬ್ರಹ್ಮಕಲಶೋತ್ಸವ ಫೆ.11ರಿಂದ 18ರವರೆಗೆ ನಡೆಯಲಿದೆ ಎಂದು ಮಹಾಗಣಪತಿ ಸೇವಾ ಸಮಿತಿ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಸುರೇಂದ್ರ ರಾವ್‌ ತಿಳಿಸಿದರು. ಬ್ರಹ್ಮಶ್ರೀ ದೇರೆಬೈಲ್‌ ಡಾ. ಶಿವಪ್ರಸಾದ್‌ ತಂತ್ರಿ ನೇತೃತ್ವದಲ್ಲಿ ದೇವಳದ ಪ್ರಧಾನ ಅರ್ಚಕ ವೇದಮೂರ್ತಿ ರತ್ನಾಕರ ಭಟ್‌ ಸಹಯೋಗದಲ್ಲಿ ಧಾರ್ಮಿಕ ವಿಧಿ ನಡೆಯಲಿದೆ ಎಂದು ಸುದ್ದಿಗೋಷ್ಠಿಯಲ್ಲಿ ವಿವರಿಸಿದರು. ಸಂಚಾಲಕ ಸತೀಶ್‌ ಆಳ್ವ ಮುಡಾರೆ, ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಶ್ರೀಕಾಂತ್‌ ರಾವ್‌ ಮೊದಲಾದವರು ಸುದ್ದಿ ಗೋಷ್ಠಿಯಲ್ಲಿದ್ದರು.

ಧಾರ್ಮಿಕ ಕಾರ್ಯಕ್ರಮಗಳ ವಿವರ ಹೀಗಿದೆ.

ಫೆ. 11ರಂದು ಉಗ್ರಾಣ ಮುಹೂರ್ಥ, ಪುಣ್ಯಾಹ, ಸಪ್ತಶುದ್ಧಿ ನಡೆಯಲಿದೆ. ಸಾಯಂಕಾಲ 5ರಿಂದ ವಾಸ್ತುಹೋಮ, ವಾಸ್ತು ಪೂಜೆ, ಮೃತ್ತಿಕಾಹರಣ, ಅಂಕುರಾರ್ಪಣೆ ನಡೆಯಲಿದೆ ಎಂದರು.
ಫೆ. 12ರಂದು ಸಂಜೀವಿನಿ ಮಹಾಮೃತ್ಯುಂಜಯ ಯಾಗ ಜರುಗಲಿದೆ. ಸಾಯಂಕಾಲ 5ರಿಂದ ಮಹಾಗಣಪತಿ, ದುರ್ಗಾನವಗ್ರಹ ಸನ್ನಿಧಿಯಲ್ಲಿ ಅಷ್ಟಬಂಧ ಪ್ರತಿಷ್ಠಾಪನೆ, ಬ್ರಹ್ಮರಥದಲ್ಲಿ ಶುದ್ದಿ ಪ್ರಕ್ರಿಯೆ, ಅಘೋರ ಹೋಮ, ವಾಸ್ತು ಬಲಿ ನಡೆಯಲಿದೆ.
ಫೆ. 13ರಂದು ಬೆಳಗ್ಗೆ ಪೂರ್ಣಮಾನ ನವಗ್ರಹ ಹೋಮ, ನವಗ್ರಹ ರಿಗೆ ಸಾನಿಧ್ಯ ಕಲಶಾಭಿಷೇಕ, ತತ್ವಹೋಮ, ಬ್ರಹ್ಮಕಲಶ ಮಂಡಲ ರಚನೆ, ನಡೆಯಲಿದೆ.
ಮಧ್ಯಾಹ್ನ 12 ಕ್ಕೆ ಜಾತ್ರೆಯ ಧ್ವಜಾರೋಹಣ ಜರುಗಲಿದೆ. ಸಾಯಂಕಾಲ 5ರಿಂದ ಶ್ರೀಚಕ್ರ ಪೂಜೆ ಭದ್ರಕಮಂಡಲ ಪೂಜೆ, ನಡೆಯಲಿದೆ.
ಫೆ.14ರಂದು ಬೆಳಗ್ಗೆ ದೀಪದ ದರ್ಶನ ಬಲಿ, ರಾಜಾಂಗಣ ಪ್ರಸಾದ ನಡೆಯಲಿದೆ. ಬೆಳಗ್ಗೆ 8ರಿಂದ ನಾಗ ಸನ್ನಿಧಿಯಲ್ಲಿ ಕೂಷ್ಮಾಂಡ ಪವಮಾನ ಹೋಮಗಳು, ಆಶ್ಲೇಷಾಬಲಿ, ಬ್ರಹ್ಮಚಾರಿ ಆರಾಧನೆ ಬ್ರಹ್ಮಕಲಶಮಂಡಲ ಪೂಜೆ ನಡೆಯಲಿದೆ ಎಂದರು.
ಸಾಯಂಕಾಲ 5ರಿಂದ ಪಂಚವಿಂಶತಿ ದ್ರವ್ಯಮೀಳಿತ 1001 ಕಲಶ ಪ್ರತಿಷ್ಠೆ, ನವಕುಂಡದಲ್ಲಿ ಅಧಿವಾಸ ಹೋಮ, ದುರ್ಗಾದೇವಿಗೆ 109 ಕಲಶಾಧಿವಾಸ, ಬಯನಬಲಿ ಹೊರಟು ಉತ್ಸವ, ವಸಂತಕಟ್ಟೆ ಪೂಜೆ ನಡೆಯಲಿದೆ. ಫೆ.15ರಂದು ಬೆಳಗ್ಗೆ 6ರಿಂದ ಬ್ರಹ್ಮಕಲಶಾಭಿಷೇಕ ಆರಂಭ, ಬೆಳಗ್ಗೆ 9.5ಕ್ಕೆ ಮಹಾಗಣಪತಿ ದೇವರಿಗೆ ಬ್ರಹ್ಮಕುಂಭಾಭಿಷೇಕ, ದುರ್ಗಾದೇವಿಗೆ ಬ್ರಹ್ಮಕಲಶಾಭಿಷೇಕ, ನ್ಯಾಸ ಪೂಜೆ , ಮಹಾಪೂಜೆ ನಡೆಯಲಿದೆ.
ಸಂಜೆ 4ರಿಂದ ನೂತನ ಬಲಿ ಪೀಠಗಳ ಪ್ರತಿಷ್ಠೆ, ಬ್ರಹ್ಮರಥಕ್ಕೆ ದಿಕ್ಪಾಲ ಹೋಮ, 101 ಕಲಶಾಭಿಷೇಕ, ಅಧಿವಾಸ ಹೋಮ, ಬ್ರಹ್ಮರಥಾಧಿವಾಸ, ಬಯನ ಬಲಿ ಹೊರಟು ಉತ್ಸವ, ಉರಗಬಂಧದ ಅಶ್ವತ್ವಥಕಟ್ಟೆಯಲ್ಲಿ ಕಟ್ಟೆಪೂಜೆ ನಡೆಯಲಿದೆ. ಫೆ. 16ರಂದು ಮಹಾಗಣಪತಿ ದೇವರಿಗೆ ಬ್ರಹ್ಮರಥ ಸಮರ್ಪಣೆ ನಡೆಯಲಿದೆ. ನಂತರ ರಥೋತ್ಸವ ನಡೆಯಲಿದೆ. ಫೆ.17ರಂದು ಕವಾಟೋದ್ಘಾಟನೆ, ವಿಶೇಷ ಅಭಿಷೇಕ ಸಹಿತ ಮಹಾಪೂಜೆ, ನಡೆಯಲಿದೆ. ನಂತರ ಮಹಾಅನ್ನಸಂತರ್ಪಣೆ ಕಾರ್ಯಕ್ರಮ ಜರುಗಲಿದೆ. ಫೆ.18ರಂದು ಸಂಪ್ರೋಕ್ಷಣಾ ಕಲಶ, ಅಧಿವಾಸ ಹೋಮ, ಮಹಾಗಣಪತಿ ಹೋಮ, ಸಾಯಂಕಾಲ ಕಟೀಲು ಮೇಳದಿಂದ ಯಕ್ಷಗಾನ ಪ್ರದರ್ಶನವಿದೆ.

ಫೆ.8ರಂದು ಹಸಿರು ವಾಣಿ ಹೊರೆಕಾಣಿಕೆ ಸಮರ್ಪಣೆ: ಕಾರ್ಯಕ್ರಮ ಪೂರ್ವಭಾವಿಯಾಗಿ ಫೆಬ್ರವರಿ 8ರಂದು ಊರ ಪರಊರ ಭಗವದ್ಭಕ್ತರಿಂದ ಶ್ರೀ ಕ್ಷೇತ್ರಕ್ಕೆ ಹಸಿರುವಾಣಿ ಹೊರೆಕಾಣಿಕೆ ಸಮರ್ಪಿಸಲಾಗುವುದು ಎಂದು ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಸುರೇಂದ್ರ ರಾವ್‌ ತಿಳಿಸಿದರು.

ಕ್ಷೇತ್ರದ ಭವ್ಯ ಇತಿಹಾಸ:
ಮಂಗಳೂರು ನಗರದ ದೇರೆಬೈಲು ಗ್ರಾಮದ ಉರ್ವಾಸ್ಟೋರ್ ಸರ್ಕಾರಿ ವಸತಿ ಗೃಹಗಳ ಸಮುಚ್ಚಯದಲ್ಲಿ ತಲೆಯೆತ್ತಿನಿಂತು ಭಕ್ತರನ್ನು ಸದಾ ಹರಸುತ್ತಿರುವ ಅತ್ಯಂತ ಕಾರಣಿಕ ಕ್ಷೇತ್ರವೆಂದೇ ಕರೆಯಲ್ಪಡುವ ಶ್ರೀ ಮಹಾಗಣಪತಿ ದೇವರ ಕ್ಷೇತ್ರ ಪರಿಚಯ ಹೀಗಿದೆ.

ಸುಮಾರು 75 ವರ್ಷಗಳ ಹಿಂದೆ ಈ ಪ್ರದೇಶ ತಗ್ಗುಪ್ರದೇಶವಾಗಿದ್ದು ಕೆಂಪ್ಪು ಕಲ್ಲಿನಿಂದ ಅವರಿಸಿಗೊಂಡಿದ್ದ ದೊಡ್ಡ ಗುಂಡ್ಮಿಯನ್ನು ಹೋಲುವ ಪ್ರದೇಶವಾಗಿ ಪರಿಸರದವರು ತ್ಯಾಜ್ಯವನ್ನು ತಂದು ಸುರಿಯುವ ಅತ್ಯಂತ ಮಲಿನ ಭೂಮಿಯಾಗಿತ್ತು ಎಂದು ಹಿರಿಯರಿಂದ ತಿಳಿದುಕೊಂಡ ವಿಚಾರವು ದೇವಪ್ರಶ್ನೆಯಲ್ಲಿ ಕಂಡುಕೊಂಡ ಸತ್ಯವಾಗಿದೆ.

1956ರಲ್ಲಿ ಸುಮಾರು 12ಜನ ನಾಥ ಪಂತದ ಯೋಗಿಮುನಿಗಳು ಮಹಾರಾಷ್ಟ್ರದ ರಾಜ್ಯದ ನಾಶಿಕ್ ನಿಂದ ಕದ್ರಿ ಶ್ರೀ ಮಂಜುನಾಥ ಕ್ಷೇತ್ರದ ಪಕ್ಕದಲ್ಲಿ ಇರುವ ಜೋಗಿ ಮಠಕ್ಕೆ ಜಂಡಿ (ಪಾದಯಾತ್ರೆ) ದಾರಿಯಾಗಿ ಸಾಗುವಂತ ಸಂದರ್ಭದಲ್ಲಿ ಒಬ್ಬಾತ ಯೋಗಿ ಮುನಿಯು ತನ್ನ ಕಮಂಡಲವನ್ನು ಊರಿ ಈ ಪ್ರದೇಶದಲ್ಲಿ ನಿಂತಾಗ ಮುಂದಕ್ಕೆ ಈ ಪ್ರದೇಶವು ದೊಡ್ಡ ಕ್ಷೇತ್ರವಾಗಿ ಪರಿವರ್ತನೆ ಆಗುವುದಾಗಿ ತಮ್ಮ ದಿವ್ಯ ದೃಷ್ಟಿಯಿಂದ ಬಾಸವಾಗಿರುತ್ತದೆ ಎಂದು ನುಡಿದಿರುವುದನ್ನು ಪ್ರಸ್ತುತ ಈ ದೇವಸ್ಥಾನವು ಅಸ್ತಿತ್ವಕ್ಕೆ ಬಂದ ಬಳಿಕ ನಮ್ಮ ಗೋಚರಕ್ಕೆ ಬಂದಿರುವುದು ನಿಜಕ್ಕೂ ಅಚ್ಚರಿಯನ್ನು ಉಂಟುಮಾಡುವುದಲ್ಲದೆ ಮುನಿಯು ವಚನವು ಸತ್ಯವಾಗಿರುತ್ತದೆ.

1964 ರಲ್ಲಿ ಲೋಕೋಪಯೋಗಿ ಇಲಾಖೆಯವರು ವಸತಿ ಗೃಹ ನಿರ್ಮಿಸುವಂತಹ ಸಂದರ್ಭದಲ್ಲಿ ಒಂದು ಗೋಲಾಕಾರವನ್ನು ಹೋಲುವ ಕಪ್ಪು ಕಲ್ಲು ದೊರೆತಿದ್ದು ಅದನ್ನು ಲೋಕೋಪಯೋಗಿ ಇಲಾಖೆಯ ಶಿವಯೋಗಿ ಎಂಬ ವೀರಶೈವ ಬ್ರಾಹ್ಮಣನೋರ್ವರು ವಾಹನದ ಮೂಲಕ ತಮ್ಮ ಊರು ಬೆಂಗಳೂರಿಗೆ ತೆಗೆದುಕೊಂಡು ಹೋಗಿ ಅದರಲ್ಲಿ ಸುಂದರವಾದ ಗಣಪತಿಯ ವಿಗ್ರಹವನ್ನು ಕೆತ್ತಿಸಿದರು. ಕಾಲಕ್ರಮೇಣ ಈ ಪ್ರದೇಶದಲ್ಲಿ ಲೋಕೋಪಯೋಗಿ ಇಲಾಖೆಯವರು ನಿರ್ಮಿಸಿದ ವಸತಿ ಗೃಹಗಳಲ್ಲಿ ವಾಸ್ತವವಿದೆ ಸರ್ಕಾರಿ ನೌಕರರು ಮತ್ತು ಊರವರ ಸಹಾಯದೊಂದಿಗೆ ಸಣ್ಣ ಗುಡಿಯನ್ನು ನಿರ್ಮಾಣ ಮಾಡುವ ಬಗ್ಗೆ ಸಮಾಲೋಚಿಸಿ ಒಮ್ಮತದ ತೀರ್ಮಾನಕ್ಕೆ ಬಂದರು ಈ ಮದ್ಯೆ ಶಿವಯೋಗಿ ಮೃತವಾಗಿದ್ದು ಸದ್ರಿ ಅವರ ಮನೆಯಲ್ಲಿ ಅವರು ಕೆತ್ತಿಸಿದ ವಿಗ್ರಹವು ಇದ್ದಿದ್ದರಿಂದ ಮನೆ ಹಾಗು ಕುಂಟುಂಬದವರಿಗೆ ದೋಷ ಕಂಡುಬಂದ ಹಿನ್ನಲೆಯಲ್ಲಿ ಈ ಪರಿಸರದಲ್ಲಿ ದೇವಸ್ಥಾನ ನಿರ್ಮಿಸುವ ಬಗ್ಗೆ ಇತ್ತಂಡಗಳು ನಿರ್ಧಾರಕ್ಕೆ ಬಂದ ಕಾರಣ 1981ರ ಫೆಬ್ರವರಿ ತಿಂಗಳಲ್ಲಿ ಪೇಜಾವರ ಮಠಾಧೀಶರಾದ ಶ್ರೀ ಶ್ರೀ ವಿಶ್ವೇಶ್ವರತೀರ್ಥ ಶ್ರೀಪಾದರ ಘನ ಉಪಸ್ಥಿತಿಯಲ್ಲಿ ಬ್ರಹ್ಮಶ್ರೀ ದೇರೆಬೈಲು ವೇದಮೂರ್ತಿ ಹರಿಕೃಷ್ಣ ತಂತ್ರಿಗಳ ಆಚಾರ್ಯತ್ವದಲ್ಲಿ ಪ್ರತಿಷ್ಠಾಪನೆ ಗೊಂಡಿದೆ.

ಕಾಲಕ್ರಮೇಣ ದೇವಸ್ಥಾನದ ಪರಿಸರದ ಭಕ್ತರು ಹಾಗು ಸರಕಾರಿ ವಸತಿಗೃಹದ ನಿವಾಸಿಗಳು ಸೇರಿಕೊಂಡು ಶ್ರೀ ದೇವರಿಗೆ ಸೇವಾರೂಪವಾಗಿ ತ್ರಿಕಾಲ ಪೂಜೆ ಪ್ರತಿ ತಿಂಗಳ ಸಂಕಷ್ಟಿ ಚೌಥಿ ಸಮಯದಲ್ಲಿ ಚೌದಿ ಮಹೋತ್ಸವ ಹಾಗು 3 ದಿನಗಳ ವಾರ್ಷಿಕ ಮಹೋತ್ಸವವನ್ನು ಆಚರಿಸಿಕೊಂಡು ಬಂದಿರುತ್ತಾರೆ ಆದರೆ ದೇವಳದಲ್ಲಿ ನಡೆಯುವ ಉತ್ಸವಾದಿ ಸಮಯದಲ್ಲಿ ಕೆಲವೊಂದು ನಿಮಿತ್ತಗಳು ಕಂಡುಬರುತ್ತಿದ್ದು ಈ ಬಗ್ಗೆ ದೇವಪ್ರಶ್ನೆ ಚಿಂತನೆ ನಡೆಸಿದಾಗ ಗರ್ಭಗುಡಿಯ ಅಡಿಯಲ್ಲಿ ಕಲ್ಮನೆಗಳು ಇದ್ದು ಅಶುದ್ಧವಾಗಿದ್ದು ದೇವರು ಎಲುಬುಗಳ ಮೇಲೆ ಕುಳಿತಿರುವುದು ತಿಳಿದು ಬಂದಿರುತ್ತದೆ. ಅದರಂತೆ ಪ್ರಶ್ನಾಚಿಂತನೆ ನಡೆಸಿ ದೇವರ ಆಜ್ಞೆಯಂತೆ ನೂತನ ಗಜಪೃಷ್ಠಾಕಾರದ ಗರ್ಭಗುಡಿಯನ್ನು ಪ್ರತಿಷ್ಠಾಪಿಸಲು ಸಂಕಲ್ಪಿಸಲಾಯಿತು.

2006ರ ಏಪ್ರಿಲ್ 30ರ ಅಕ್ಷಯ ತದಿಗೆಯ ಶುಭಮುಹೂರ್ತದಲ್ಲಿ ನೂತನ ದೇವಾಲಯ ಲೋಕಾರ್ವಣೆಯ ಕಾರ್ಯಕ್ಕೆ ನಾಂದಿಹಾಡಲಾಯಿತು ಈ ಕಾರ್ಯಕ್ಕೆ ದೇವರನ್ನು ಬಾಲಾಲಯದಲ್ಲಿ 2008ರ ಏಪ್ರಿಲ್‌ 19ರಂದು ನಿರ್ಮಾಣ ಕಾರ್ಯವನ್ನು ಆರಂಭಿಸಿ 2010 ಮಾರ್ಚ್‌ 16ರಿಂದ ಮೊದಲಗ್ಗೊಂಡು 25ರ ವರೆಗೆ ವಿಜೃಂಭಣೆಯ ಪುನರ್ ಪ್ರತಿಷ್ಠೆ ಹಾಗು ಬ್ರಹ್ಮಕಲಶೋತ್ಸವ ಮೂಡಪ್ಪ ಸೇವೆ ಸಹಸ್ರ ನಾರೀಕೇಳ ಗಣ ಯಾಗ ಅಥರ್ವಶೀರ್ಷ ಗಣ ಯಾಗ ಚಂಡಿಕಾಯಾಗ ನವಗ್ರಹ ಶಾಂತಿ ಶ್ರೀಚಕ್ರ ಪೂಜೆಯೊಂದಿಗೆ ಶ್ರೀ ದುರ್ಗಾಪರಮೇಶ್ವರಿ ದೇವರು ನಾಗನವಗ್ರಹರನ್ನು ಪ್ರತಿಷ್ಠಾಪಿಸಿ ನೂತನ ವಸಂತಮಂಟಪವನ್ನು ದೇವರಿಗೆ ಸಮರ್ಪಿಸಲಾಯಿತು. 2017 ರ ಡಿಸೆಂಬರ್‌ 7ರಂದು ನೂತನ ಉರಗಬಂಧ ನಾಗಪ್ರತಿಷ್ಠೆ ಮಾಡಲಾಯಿತು.

Exit mobile version