Site icon newsroomkannada.com

ಏಕರೂಪ ನಾಗರಿಕ ಸಂಹಿತೆ ಮೋದಿ ಗ್ಯಾರಂಟಿ: ಅಮಿತ್ ಶಾ

ಮಧ್ಯಪ್ರದೇಶ: ಕೇಂದ್ರದಲ್ಲಿ ಬಿಜೆಪಿ ಸರ್ಕಾರ ರಚನೆಯಾಗುತ್ತಲೇ ಏಕರೂಪ ನಾಗರಿಕ ಸಂಹಿತೆ ಕಾನೂನು ಜಾರಿ ಮಾಡಲಾಗುವುದು. ಇದು ಮೋದಿ ಗ್ಯಾರಂಟಿ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಘೋಷಿಸಿದ್ದಾರೆ.

 

ಈ ಮೂಲಕ ಹೊಸ ಸರ್ಕಾರದ ಇರಾದೆಯನ್ನು ಬಹಿರಂಗಪಡಿಸಿದ್ದಾರೆ. ಅಲ್ಲದೆ ವೈಯಕ್ತಿಕ ವೈವಾಹಿಕ ಕಾನೂನು ಜಾರಿ ಮಾಡಲು ಕಾಂಗ್ರೆಸ್‌ ನಾಯಕ ‘ರಾಹುಲ್‌ ಬಾಬಾ’ಗೆ (ರಾಹುಲ್‌ ಗಾಂಧಿ) ಆ ಅವಕಾಶ ನೀಡುವುದಿಲ್ಲ ಎಂದು ಹೇಳಿದ್ದಾರೆ.

 

ಶುಕ್ರವಾರ ಮಧ್ಯಪ್ರದೇಶದ ಅಶೋಕ್‌ ನಗರ ಜಿಲ್ಲೆಯ ಪಿಪ್ರಾಯ್‌ ಪ್ರದೇಶದಲ್ಲಿ ಚುನಾವಣಾ ಪ್ರಚಾರ ಭಾಷಣ ಮಾಡಿದ ಅಮಿತ್‌ ಶಾ, ‘ರಾಹುಲ್ ಬಾಬಾ, ನೀವು ಓಲೈಕೆಗಾಗಿ ಏನು ಬೇಕಾದರೂ ಮಾಡಿ. ಆದರೆ ಮಾಡಿ ಬಿಜೆಪಿ ಎಲ್ಲಿ ತನಕ ಇರುತ್ತದೆಯೋ ಅಲ್ಲಿಯವರೆಗೂ ನಿಮ್ಮ ವೈಯುಕ್ತಿಕ ಕಾನೂನುಗಳನ್ನು (ಮುಸ್ಲಿಂ ಪರ ಕಾನೂನು) ಜಾರಿಗೆ ತರುವುದಕ್ಕೆ ಆಗುವುದಿಲ್ಲ. ಇದು ನಮ್ಮ ಭರವಸೆ. ದೇಶದಲ್ಲಿ ಮೋದಿ ಅಧಿಕಾರಕ್ಕೆ ಬಂದರೆ ಉತ್ತರಾಖಂಡ್ ನಲ್ಲಿ ಜಾರಿಗೆ ತಂದಂತೆ ಏಕರೂಪ ನಾಗರಿಕ ರೂಪ ಸಂಹಿತೆಯನ್ನು ದೇಶದೆಲ್ಲಡೆ ಜಾರಿಗೆ ತರುತ್ತೇವೆ. ಇದು ಮೋದಿ ಗ್ಯಾರಂಟಿ’ ಎಂದು ಶಾ ಗುಡುಗಿದರು.

 

ಇದೇ ವೇಳೆ, ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ದೇಶದಲ್ಲಿ ನಕ್ಸಲೀಯ ಚಟುವಟಿಕೆ ಮತ್ತು ಉಗ್ರವಾದ ಕೊನೆಯಾಗಿದೆ ಎಂದ ಅಮಿತ್‌ ಶಾ, ‘2019ರಲ್ಲಿ ಮೋದಿ ಸರ್ಕಾರ ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುತ್ತಿದ್ದ ಸಂವಿಧಾನದ 370ನೇ ವಿಧಿ ರದ್ದು ಮಾಡಿತ್ತು. ಇದು ರಾಹುಲ್ ಗಾಂಧಿಯವರಲ್ಲಿ ಭಯ ಹುಟ್ಟಿಸಿತ್ತು. ಅಂದು ರಾಹುಲ್ ಗಾಂಧಿ, ಕಾಯ್ದೆ ರದ್ದು ಮಾಡಿದ ಪರಿಣಾಮ ರಕ್ತದ ನದಿ ಹರಿಯುತ್ತದೆ ಎಂದಿದ್ದರು. ಆದರೆ ಇದು ಕಾಂಗ್ರೆಸ್ ಸರ್ಕಾರವಲ್ಲ, ಬಿಜೆಪಿ ಸರ್ಕಾರ. ರಕ್ತದ ನದಿಗಳ ಬಗ್ಗೆ ಮಾತನಾಡುವುದು ಇರಲಿ ಅವರಿಗೆ ಒಂದು ಕಲ್ಲು ಎಸೆಯುವ ಧೈರ್ಯವೂ ಇಲ್ಲ.’ ಎಂದು ಹರಿಹಾಯ್ದಿದ್ದಾರೆ.

Exit mobile version