ಪಣಜಿ: ಗೋವಾದಲ್ಲಿ ಭಾರಿ ಮಳೆಯಾಗುತ್ತಿದ್ದು, ಜಲಪಾತಗಳು ಜೀವಕಳೆ ಪಡೆದುಕೊಂಡಿವೆ. ಆದರೆ ಇತ್ತೀಚೆಗೆ ಗೋವಾದ ಜಲಪಾತದಲ್ಲಿ ಇಬ್ಬರು ವ್ಯಕ್ತಿಗಳು ಜೀವಕಳೆದುಕೊಂಡಿದ್ದಾರೆ. ಈ ನಿಟ್ಟಿನಲ್ಲಿ ಸರ್ಕಾರ ಮಳೆ ಕಡಿಮೆಯಾಗುವವರೆಗೆ ಜಲಪಾತಗಳ ವೀಕ್ಷಣೆಗೆ ನಿಷೇಧ ಹೇರಿದೆ. ನಿಷೇಧದ ನಡುವೆಯೂ ದೂಧ್ ಸಾಗರ ವೀಕ್ಷಣೆಗೆ ಆಗಮಿಸಿದ ಪ್ರವಾಸಿಗರು ಮತ್ತು ಚಾರಣಿಗರಿಗೆ ಗೋವಾ ಪೊಲೀಸ್ ಮತ್ತು ಅರಣ್ಯ ಅಧಿಕಾರಿಗಳು ಬಸ್ಕಿ ಶಿಕ್ಷೆ ನೀಡಿದ್ದಾರೆ.
ಮಳೆಗಾಲ ವೇಳೆ ದೂಧ್ ಸಾಗರದ ವೈಭವವನ್ನು ಕಣ್ತುಂಬಿಕೊಳ್ಳುವ ಉದ್ದೇಶದಿಂದ ಪ್ರವಾಸಿಗರು ಜಲಪಾದ ಸಮೀಪದಲ್ಲಿ ನಿಲ್ದಾಣದಲ್ಲಿ ಇಳಿದು ರೈಲ್ವೆ ಹಳಿಗಳಲ್ಲಿಯೇ ನಡೆದು ದೂಧ್ ಸಾಗರ ತಲುಪುತ್ತಾರೆ. ಆದರೆ ರೈಲು ಹಳಿಗಳ ಮೇಲೆ ನಡೆಯುವುದನ್ನು ಇಲಾಖೆ ನಿಷೇಧಿಸಿದೆ. ಅಲ್ಲದೆ ಜಲಪಾತಕ್ಕೂ ಪ್ರವೇಶವಿಲ್ಲ. ಆದರೆ ಇದನ್ನು ಉಲ್ಲಂಘಿಸಿ ಜಲಪಾತ ತಲುಪಿ ಮೋಜು ಮಸ್ತಿಯಲ್ಲಿ ತೊಡಗಿದ್ದವರಿಗೆ ಪೊಲೀಸರು ಮತ್ತು ಅರಣ್ಯ ಇಲಾಖೆ ಸಿಬ್ಬಂದಿ ಬಸ್ಕಿ ಶಿಕ್ಷೆ ನೀಡಿದ್ದು, ಈ ವಿಡಿಯೋ ಜಾಲತಾಣಗಳಲ್ಲಿ ವೈರಲ್ ಆಗಿದೆ. ಭಾನುವಾರ ಘಟನೆ ಈ ಘಟನೆ ನಡೆದಿದ್ದು, ಎಲ್ಲಾ ಪ್ರವಾಸಿಗರಿಗೆ ಬಸ್ಕಿ ಶಿಕ್ಷೆ ನೀಡಿ ಸ್ಥಳದಿಂದ ವಾಪಸ್ ಹೋಗುವಂತೆ ಮಾಡಿದ್ದಾರೆ.