ಉಡುಪಿ: ದೀಪಾವಳಿ ಹಬ್ಬ ಸಂಭ್ರಮ ಮನೆ ಮಾಡಿದ್ದ (ನ.12ರಂದು) ದಿನದಂದೇ ಉಡುಪಿಯಲ್ಲಿ ನಡೆದ ಭೀಕರ ಘಟನೆಗೆ ಇಡೀ ಉಡುಪಿ ಜನತೆ ಮಾತ್ರವಲ್ಲ ರಾಜ್ಯದ ಜನತೆ ಬೆಚ್ಚಿ ಬಿದ್ದರು.ಪಾಪಿ ನರಹಂತಕನೋರ್ವ ಒಂದೇ ಕುಟುಂಬದ ನಾಲ್ವರನ್ನು ಹತ್ಯೆ ನಡೆಸಿ ಪರಾರಿಯಾಗಿದ್ದ.ಇದೀಗ ಏರ್ ಇಂಡಿಯಾ ಕ್ಯಾಬಿನ್ ಕ್ರೂ ಉದ್ಯೋಗಿ ಪ್ರವೀಣ್ ಅರುಣ್ ಚೌಗುಲೆ ಕುರಿತಂತೆ ಬಗೆದಷ್ಟು ಮತ್ತಷ್ಟು ವಿಚಾರ ಬಯಲಾಗುತ್ತಿದೆ.ಆತ ತನ್ನ ಪತ್ನಿಗೂ ಪ್ರತಿನಿತ್ಯ ಚಿತ್ರ ಹಿಂಸೆ ನೀಡುತ್ತಿದ್ದ ಎನ್ನುವ ಅಂಶ ಬೆಳಕಿಗೆ ಬಂದಿದೆ.
ಅರುಣ್ ಚೌಗುಲೆ ಕುಟುಂಬ ಮಹಾರಾಷ್ಟ್ರದಲ್ಲಿದ್ದು, ಈತ ಅಲ್ಲಿ ಪೊಲೀಸ್ ಇಲಾಖೆಯಲ್ಲೂ ಹಲವು ಸಮಯ ಕರ್ತವ್ಯ ನಿರ್ವಹಿಸಿದ್ದ.ಈತ ಮಾತ್ರ ವಿಚಿತ್ರ ಮನಸ್ಥಿತಿಯವನಾಗಿದ್ದು, ತನ್ನ ಪತ್ನಿಯನ್ನು ಅನುಮಾನ ದೃಷ್ಟಿಯಿಂದ ನೋಡುತ್ತಿದ್ದ ಎನ್ನಲಾಗಿದೆ. ಮನೆಯಲ್ಲಿ ಪತ್ನಿಗೆ ಯಾವುದೇ ರೀತಿಯಲ್ಲಿ ಸ್ವಾತಂತ್ರ್ಯವಿರಲಿಲ್ಲ ಎನ್ನಲಾಗಿದೆ. ಈತನ ಪತ್ನಿ ಮಹಾರಾಷ್ಟ್ರದ ಸಂಪ್ರದಾಯಸ್ಥ ಕುಟುಂಬಕ್ಕೆ ಸೇರಿದವರೆಂದು ತಿಳಿದು ಬಂದಿದ್ದು, ಪತಿಯೊಂದಿಗೆ ಹೊಂದಾಣಿಕೆಯಿಂದ ಹೋಗುತ್ತಿದ್ದರು ಎಂಬ ಮಾಹಿತಿಯಿದೆ.ಆದರೆ ಅನುಮಾನ ಪಿಶಾಚಿಯಾಗಿದ್ದ ಚೌಗುಲೆ ಪತ್ನಿಯ ಕೊಲೆಗೂ ಮುಂದಾಗಿದ್ದ ಎನ್ನುವ ಅಂಶ ಬೆಳಕಿಗೆ ಬಂದಿದೆ.ಇದರೊಂದಿಗೆ ಆತನಿಗೆ ಕೆಲವು ಒಳ್ಳೆಯ ಗುಣಗಳು ಇದ್ದವು ಎನ್ನುವ ಬಗ್ಗೆ ಅಭಿಪ್ರಾಯಗಳಿವೆ. ತುರ್ತು ಸಂದರ್ಭಗಳಲ್ಲಿ ಪರರಿಗೆ ಸಹಾಯ ಮಾಡುತ್ತಿದ್ದ ಎನ್ನಲಾಗಿದ್ದು,ಕೆಲವರಿಗೆ ಉದ್ಯೋಗ ತೆಗೆಸಿಕೊಡುತ್ತಿದ್ದ. ಈ ಹಿನ್ನಲೆಯಲ್ಲಿಯೇ ಆತನ ಬಗ್ಗೆ ಯಾರಿಗೂ ಒಂಚೂರು ಅನುಮಾನಗಳೇ ಬರದಾಯಿತು. ಮೃತ ಅಯ್ನಾಝ್ ವಿಚಾರದಲ್ಲಿ ಆರೋಪಿ ಪ್ರವೀಣ್ ಚೌಗುಲೆ ಬಹಳ ಪಾಸೆಸಿವ್ ಆಗಿದ್ದನು. ಅಯ್ನಾಝ್ಳನ್ನು ಅತಿಯಾಗಿ ಹಚ್ಚಿಕೊಂಡಿದ್ದನು. ಅಯ್ನಾಝ್ ತನ್ನ ನಿಯಂತ್ರಣದಲ್ಲೇ ಇರಬೇಕು ಎಂಬ ಮನಸ್ಥಿತಿ ಹೊಂದಿದ್ದನು. ಅಸೂಯೆ ಮತ್ತು ದ್ವೇಷದಿಂದ ಅಯ್ನಾಝ್ಳನ್ನು ಕೊಲೆ ಮಾಡಲು ನಿರ್ಧರಿಸಿದ್ದನು. ಅಯ್ನಾಝ್ ತನ್ನ ಜೊತೆ ಮಾತ್ರ ಮಾತನಾಡಬೇಕು ಎಂಬ ನಿಯಮ ಹಾಕುತ್ತಿದ್ದನು, ನನ್ನ ಜೊತೆ ಮಾತ್ರ ಬೆರೆಯಬೇಕು ಎಂಬ ಮನಸ್ಥಿತಿಯನ್ನು ಹೊಂದಿದ್ದನು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಡಾ.ಅರುಣ್ ತಿಳಿಸಿದ್ದಾರೆ.
ಪ್ರವೀಣ್ ಅರುಣ್ ಚೌಗುಲೆ ದಂಪತಿಗೆ ಇಬ್ಬರು ಮಕ್ಕಳು. ಹಿರಿಯ ಪುತ್ರ 10 ವರ್ಷದವನಾಗಿದ್ದರೆ, ಇನ್ನೊಂದು 2 ವರ್ಷದ ಪುಟ್ಟ ಮಗು. ಹಿರಿಯ ಮಗ 5ನೇ ತರಗತಿಯಲ್ಲಿ ಓದುತ್ತಿದ್ದಾನೆ.ಇನ್ನು ಚೌಗುಲೆ ಜೀವನದಲ್ಲಿ ಬಿಂದಾಸ್ ಆಗಿದ್ದ. ಮಂಗಳೂರಿನ ಕೆಪಿಟಿ ಬಳಿ ಫ್ಲ್ಯಾಟ್, ಮಂಗಳೂರಿನಲ್ಲಿಎರಡು ನಿವೇಶನ, ಸುರತ್ಕಲ್‌ನಲ್ಲಿ ಸ್ವಂತ ಮನೆ ಸೇರಿದಂತೆ ಅಪಾರ ಆಸ್ತಿಪಾಸ್ತಿಯನ್ನು ಚೌಗುಲೆ ಹೊಂದಿದ್ದಾನೆ ಎನ್ನಲಾಗಿದೆ.ಆದರೆ ಬರಿ ಉದ್ಯೋಗದಲ್ಲಿ ಇಷ್ಟೊಂದು ಹಣ ಗಳಿಸಲು ಸಾದ್ಯವೇ ಎನ್ನುವ ಅನುಮಾನ ಹಲವರು ವ್ಯಕ್ತ ಪಡಿಸಿದ್ದು, ವಿದೇಶದಿಂದ ಬರುವ ಮಾದಕ ವಸ್ತು, ಅಕ್ರಮ ಚಿನ್ನ ಸಾಗಾಟ ಜಾಲದ ನಂಟು ಈತ ಹೊಂದಿದ್ದಾನೆಯೇ ಎಂಬ ಬಗ್ಗೆ ಸಮಗ್ರ ತನಿಖೆಯಾಗಬೇಕಿದೆ.