ಉಡುಪಿ: ಇಲ್ಲಿನ ಸಂತೆಕಟ್ಟೆ ಸಮೀಪ ನೇಜಾರಿ ತ್ರಪ್ತಿ ನಗರದಲ್ಲಿ ಒಂದೇ ಕುಟುಂಬದ ನಾಲ್ವರ ಬರ್ಬರ ಹತ್ಯೆ ಪ್ರಕರಣದ ಆರೋಪಿ ಕೊನೆಗೂ ಪೊಲೀಸರ ಬಲೆಗೆ ಬಿದ್ದಿದ್ದು, ಈ ಹತ್ಯೆಗೆ ಭಗ್ನಪೃಎಮ ಕಾರಣ ಎನ್ನಲಾಗುತ್ತಿದೆ.
ಆರೋಪಿ ಪ್ರವೀಣ್ ಅರುಣ್ ಚೌಗಲೆ ಮಹಾರಾಷ್ಟ್ರದ ಸಾಂಗ್ಲಿಯವನಾಗಿದ್ದು, ಉಡುಪಿಯಲ್ಲಿ ಕೊಲೆ ಮಾಡಿದ ಬಳಿಕ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಕುಡಚಿಯಲ್ಲಿ ಸಂಬಂಧಿಕರಪಬ್ಬರ ಮನೆಯಲ್ಲಿ ಅಡಗಿ ಕುಳಿತಿದ್ದ. ಆತನ ಮೊಬೈಲ್ ಟವರ್ ಲೊಕೇಶನ್ ಆಧರಿಸಿ ಉಡುಪಿ ಪೊಲೀಸರು ಇಂದು ಬಂಧಿಸಿದ್ದಾರೆ.
ಪ್ರವೀಣ್ ಅರುಣ್ ಸಿಐಎಸ್‌ಎಫ್ ಸಿಬ್ಬಂದಿಯಾಗಿದ್ದು ಮಂಗಳೂರು ವಿಮಾನ ನಿಲ್ದಾಣದಲ್ಲಿ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದ. ಈ ಸಂದರ್ಭದಲ್ಲಿ ಗಗನಸಖಿಯಾಗಿ ಕೆಲಸ ಮಾಡುತ್ತಿದ್ದ ಅಯ್ನಾಜ್ ಪರಿಚಯವಾಗಿದ್ದರು. ಆದರೆ ನಂತರ ಅಯ್ನಾಜ್ ಆತನಿಂದ ದೂರವಾಗಿದ್ದಳು. ಇದರಿಂದ ಕುಪಿತನಾಗಿ ಭಗ್ನಪ್ರೇಮಿಯಾಗಿದ್ದ ಪ್ರವೀಣ್ ಆಕೆಯನ್ನು ಕೊಲೆ ಮಾಡುವ ನಿರ್ಧಾರ ಮಾಡಿದ್ದಾನೆ ಎಂದು ಹೇಳಲಾಗುತ್ತಿದೆ.
ಭಾನುವಾರ ಅಯ್ನಾಜ್‌ಳನ್ನು ಹುಡುಕಿಕೊಂಡು ಉಡುಪಿಗೆ ಬಂದಿದ್ದ ಕೊಲೆಗೆ ಪೂರ್ವ ತಯಾರಿ ಮಾಡಿದ್ದ. ಅಯ್ನಾಜ್‌ಳಿಗೆ ಚೂರಿ ಇರಿಯುತ್ತಿದ್ದಾಗ ಆಕೆಯನ್ನು ರಕ್ಷಿಸಲು ಬಂದ ತಾಯಿ, ಸಹೋದರಿಗೂ ಪ್ರವೀಣ್ ಚೂರಿಯಿಂದ ಇರಿದಿದ್ದಾನೆ. ಮನೆಯಲ್ಲಿ ಗಲಾಟೆಯಾಗುತ್ತಿದ್ದುದ್ದನ್ನು ಗಮನಿಸಿದ ಹೊರಗೆ ಆಟವಾಡುತ್ತಿದ್ದ ಅಸೀಮ್ ಮನೆಗೆ ಓಡಿ ಬಂದಿದ್ದಾನೆ. ಈ ವೇಳೆ ಅಸೀಮ್‌ಗೂ ಚೂರಿಯಿಂದ ಇರಿದು ಪ್ರವೀಣ್ ಅಲ್ಲಿಂದ ಪರಾರಿಯಾಗಿದ್ದನು. ನಾಲ್ಕು ಮಂದಿ ಸ್ಥಳದಲ್ಲೇ ಸಾವಿಗೀಡಾಗಿದ್ದರು.
ಉಡುಪಿಯಲ್ಲಿ ಸಂಭವಿಸಿದ ಮುಸ್ಲಿಂ ಕುಟುಂಬದ ಈ ಬರ್ಬರ ಹತ್ಯಾಕಾಂಡ ರಾಜ್ಯಾದ್ಯಂತ ಸಂಚಲನ ಮೂಡಿಸಿತ್ತು. ಆರೋಪಿ ಉಡುಪಿಗೆ ಬಂದಿದ್ದು ಕೆಲ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಇದು ಮತ್ತು ಅಯ್ನಾಜ್‌ಳ ತಂದೆ ನೀಡಿದ ಸುಳಿವು ಪೊಲೀಸರಿಗೆ ಆರೋಪಿಯನ್ನು ಪತ್ತೆಹಚ್ಚಲು ನೆರವಾಗಿದೆ ಎನ್ನಲಾಗಿದೆ.