ಮಂಗಳೂರು: ಶೈಕ್ಷಣಿಕ ಸಾಧನೆಯಲ್ಲಿ ಉಡುಪಿ ಜಿಲ್ಲೆ ಕುಸಿತ ಕಂಡಿದೆ ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆ ರಾಜ್ಯದಲ್ಲಿ ಪರ-ವಿರೋಧ ಚರ್ಚೆಗೆ ಕಾರಣವಾಗಿದೆ. ಸಿಎಂ ಹೇಳಿಕೆಗೆ ಕರಾವಳಿ ಶಾಸಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ಮಂಗಳೂರು ಉತ್ತರ ಶಾಸಕ ಭರತ್ ಶೆಟ್ಟಿ ಮತ್ತಿತರರು ಈ ಬಗ್ಗೆ ಅಂಕಿಅಂಶ ಸಹಿತ ಹೇಳಿಕೆಗಳನ್ನು ನೀಡಿದ್ದಾರೆ.
ನಿನ್ನೆ ಉಡುಪಿ ಮತ್ತು ಮಂಗಳೂರು ಪ್ರವಾಸ ಕೈಗೊಂಡಿದ್ದ ಸಿದ್ದರಾಮಯ್ಯ ನಾವು ಈ ಹಿಂದೆ ಅಧಿಕಾರದಲ್ಲಿದ್ದಾಗ ಉಡುಪಿ ಜಿಲ್ಲೆ ಶೈಕ್ಷಣಿಕ ಸೂಚ್ಯಂಕದಲ್ಲಿ ಮೊದಲ ಸ್ಥಾನದಲ್ಲಿತ್ತು. ಈಗ 13ನೇ ಸ್ಥಾನಕ್ಕೆ ಕುಸಿದಿದೆ ಎಂದು ಉಡುಪಿಯಲ್ಲಿ ಹೇಳಿಕೆ ನೀಡಿದ್ದರು.
ಈ ಬಗ್ಗೆ ಪ್ರತಿಕ್ರಿಯಿಸಿರುವ ಮಂಗಳೂರು ಉತ್ತರ ಶಾಸಕ ಭರತ್ ಶೆಟ್ಟಿ, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆ ಶೈಕ್ಷಣಿಕ, ವೈದ್ಯಕೀಯ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವುದು ಎಲ್ಲರಿಗೂ ತಿಳಿದಿರುವ ಬಹಿರಂಗ ಸತ್ಯ. ಕರಾವಳಿ ಜಿಲ್ಲೆಗಳಲ್ಲಿ ಪರೀಕ್ಷಾ ಪದ್ಧತಿ ಕಠಿಣವಾಗಿದ್ದು, ಉಳಿದ ಜಿಲ್ಲೆಗಳಲ್ಲಿ ಹಾಗೇ ಇದೆ ಎಂದು ಹೇಳಲು ಬರುವುದಿಲ್ಲ ಎಂದಿದ್ದಾರೆ.
ವಿಷಯದ ಬಗ್ಗೆ ಟಿವಿ ವಾಹಿನಿಯಲ್ಲಿ ನಡೆದ ಚರ್ಚೆಯಲ್ಲಿ ಭರತ್ ಶೆಟ್ಟಿ ಮತ್ತು ಕಾಂಗ್ರೆಸ್ ಮುಖಂಡ ನಟರಾಜ್ ಗೌಡ ನಡುವೆ ಈ ವಿಚಾರವಾಗಿ ಬಿರುಸಿನ ಮಾತುಕತೆ ನಡೆದಿದೆ. ಭರತ್ ಶೆಟ್ಟಿ ಹೇಳಿಕೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ನಟರಾಜ್ ಗೌಡ, ಹಾಗಿದ್ದರೆ ಬೇರೆ ಜಿಲ್ಲೆಗಳಲ್ಲಿ ಪರೀಕ್ಷೆಗಳಲ್ಲಿ ಅಕ್ರಮ ನಡೆಸುತ್ತಾರೆ ಎಂದು ನೀವು ಹೇಳುತ್ತೀರಾ. ನಾನು ಇಂತಹ ವಾದವನ್ನು ಒಪ್ಪುವುದಿಲ್ಲ. ನಾವು ನೋಡಿದಂತೆ 15-20 ವರ್ಷಗಳ ಹಿಂದಿನಿಂದಲೇ ಉಡುಪಿ-ದಕ್ಷಿಣ ಕನ್ನಡ ಜಿಲ್ಲೆ ಪರೀಕ್ಷೆ ಫಲಿತಾಂಶದಲ್ಲಿ ಟಾಪ್ ಸ್ಥಾನದಲ್ಲಿತ್ತು. ಈಗ ಕುಸಿತ ಕಂಡಿರುವುದಕ್ಕೆ ನಿಮ್ಮ ಆಡಳಿತ ವೈಫಲ್ಯವೇ ಸಾಕ್ಷಿ ಎಂದು ಕುಟುಕಿದರು.
ಮಧ್ಯ ಪ್ರವೇಶಿಸಿದ ಶಾಸಕ ಭರತ್ ಶೆಟ್ಟಿ ಸಿಎಂ ಉದ್ದೇಶಪೂರ್ವಕವಾಗಿ, ಪೂರ್ವಾಗ್ರಹ ಪೀಡಿತರಾಗಿ ಮಾತನಾಡಿದ್ದಾರೆ. ಉಡುಪಿ-ದಕ್ಷಿಣ ಕನ್ನಡಕ್ಕೆ ಈಗಲೂ ಶಿಕ್ಷಣ ಪಡೆಯಲು ಹೊರಜಿಲ್ಲೆ ದೇಶ, ವಿದೇಶಗಳಿಂದಲೂ ವಿದ್ಯಾರ್ಥಿಗಳು ಬರುತ್ತಿದ್ದಾರೆ. ಆದರೆ ಸಿಎಂಗೆ ಕರಾವಳಿ ಸೇರಿದಂತೆ ಎಲ್ಲ ಪ್ರದೇಶಗಳ ಅಭಿವೃದ್ಧಿಗೆ ನೀಡಲು ಹಣವಿಲ್ಲ. ಇದೇ ಕಾರಣದಿಂದ ವಿಷಯಾಂತರ ಮಾಡಿ, ಶೈಕ್ಷಣಿಕ ಸೂಚ್ಯಂಕದ ಮಾತನಾಡುತ್ತಿದ್ದಾರೆ ಎಂದಿದ್ದಾರೆ.
ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಕೂಡ ಸಿಎಂ ಹೇಳಿಕೆ ಕುರಿತು ಆಕ್ರೋಶ ವ್ಯಕ್ತಪಡಿಸಿದ್ದು, 2019ನೇ ಇಸವಿಯ ಹಳೆ ಸರ್ವೆ ನೋಡಿ ಸಿಎಂ ಹೇಳಿಕೆ ನೀಡುವುದೇಕೆ ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ ಆರೋಗ್ಯ, ಶಿಕ್ಷಣ ಕ್ಷೇತ್ರದ ಕುಸಿತಕ್ಕೆ ಸಿಎಂ ನೇರ ಕಾರಣ ಎಂದಿದ್ದಾರೆ. 2013ರಿಂದ-18ರವರೆಗೆ ಸಿಎಂ ಸಿದ್ದರಾಮಯ್ಯ ಅಧಿಕಾರದಲ್ಲಿದ್ದರು. 19-20 ರಲ್ಲಿ ಸಮ್ಮಿಶ್ರ ಸರ್ಕಾರ ಇತ್ತು. ಹಾಗಾಗಿ ಶೈಕ್ಷಣಿಕ ಕುಸಿತಕ್ಕೆ ಸಿದ್ದರಾಮಯ್ಯ ಅವರೇ ನೇರ ಹೊಣೆ ಎಂದು ಆರೋಪಿಸಿದ್ದಾರೆ.ಕೋಟ ನಿನ್ನೆಯೇ ಅಂಕಿಅಂಶಗಳನ್ನು ಬಿಡುಗಡೆಗೊಳಿಸಿದ ಶ್ರೀನಿವಾಸ ಪೂಜಾರಿ ಕರಾವಳಿಯ ಶೈಕ್ಷಣಿಕ ಪ್ರತಿಷ್ಠೆಗೆ ಕುಂದುಂಟು ಮಾಡಲು ಸಿದ್ದರಾಮಯ್ಯನವರು ಉದ್ದೇಶಪೂರ್ವಕವಾಗಿ ಈ ಹೇಳಿಕೆ ನೀಡಿದ್ದಾರೆ ಎಂದಿದ್ದಾರೆ.
ಶಾಸಕ ಯಶ್ಪಾಲ್ ಸುವರ್ಣ ಕೂಡ ಈ ಚರ್ಚೆಯಲ್ಲಿ ಪಾಲ್ಗೊಂಡಿದ್ದು, ಉಡುಪಿ ಜಿಲ್ಲೆಯಲ್ಲಿ ಸಿಗುವ ಗುಣಮಟ್ಟದ ಶಿಕ್ಷಣ ವಿಶ್ವಕ್ಕೆ ಮಾದರಿಯಾಗಿದೆ. ಆರೋಗ್ಯ ಕ್ಷೇತ್ರದಲ್ಲಿಯೂ ಉಡುಪಿ ಮುಂಚೂಣಿಯಲ್ಲಿದೆ. ನೆರೆಯ ಐದು ಜಿಲ್ಲೆಯ ಜನರು ಆರೋಗ್ಯ ಸೇವೆಗೆ ಉಡುಪಿಯನ್ನೇ ಅವಲಂಬಿಸಿದ್ದಾರೆ. ಸಿಎಂ ಪ್ರಗತಿಪರಿಶೀಲನಾ ಸಭೆಯಲ್ಲಿ ಹಾನಿ ಕುರಿತು ಮಾತನಾಡುವ ಬದಲು ಈ ರೀತಿ ಆರೋಪ ಮಾಡಿ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಭಾರಿ ಮಳೆ ಸಂದರ್ಭ ಉಡುಪಿ ಜಿಲ್ಲೆಯನ್ನು ಸರ್ಕಾರ ನಿರ್ಲಕ್ಷ್ಯ ಮಾಡಿದೆ. ಒಂದೇ ಒಂದು ರೂಪಾಯಿ ಅನುದಾನ ನೀಡಿಲ್ಲ ಎಂದು ಆರೋಪಿಸಿದ್ದಾರೆ.