ಚಿಕ್ಕಮಗಳೂರು: ಲೋಕಸಭೆ ಚುನಾವಣೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಪಕ್ಷದಲ್ಲಿ ಚಟುವಟಿಕೆಗಳು ಗರಿಗೆದರಿವೆ. ಈ ನಡುವೆ ಕ್ಷೇತ್ರದಲ್ಲಿ ಉಡುಪಿ ಚಿಕ್ಕಮಗಳೂರು ಕಾಂಗ್ರೆಸ್ ಅಭ್ಯರ್ಥಿ ಯಾರು ಎಂಬ ಕುರಿತು ಹಲವು ಹೆಸರುಗಳು ತೇಲಿ ಬರುತ್ತಿವೆ. ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ ಬಿಲ್ಲವ, ಬಂಟ, ಮೊಗವೀರ ಸಮುದಾಯದ ಮತಗಳೇ ಅಧಿಕ. ಇದೇ ಲೆಕ್ಕಾಚಾರವನ್ನಿಟ್ಟುಕೊಂಡು ಕ್ಷೇತ್ರದಲ್ಲಿ ಸಮರ್ಥ ಅಭ್ಯರ್ಥಿಯ ತಲಾಶ್‌ನಲ್ಲಿ ಕಾಂಗ್ರೆಸ್ ತೊಡಗಿದೆ. ಈ ನಡುವೆ ಕೊಪ್ಪ ಮೂಲದ ವಕೀಲ, ಪ್ರಖರ ವಾಗ್ಮಿ, ಸುಧೀರ್ ಕುಮಾರ್ ಮುರೊಳ್ಳಿ ಅವರ ಹೆಸರು ಪ್ರಮುಖವಾಗಿ ಕೇಳಿಬರುತ್ತಿದೆ. ಸುಧೀರ್ ಅವರಿಗೆ ಟಿಕೆಟ್ ನೀಡಿದಲ್ಲಿ ಬಿಜೆಪಿ, ಆರ್‌ಎಸ್ ಎಸ್ ನಲ್ಲಿಯೂ ಕೂಡ ವಿರೋಧಿಸುವವರು ಕಡಿಮೆ ಎಂಬ ಲೆಕ್ಕಾಚಾರ ಕೈ ಮುಖಂಡರದ್ದು, ಮುರೊಳ್ಳಿ ಅವರು ಕಳೆದ ವಿಧಾನಸಭೆ ಸಭೆ ಚುನಾವಣೆಯಲ್ಲಿ ಮಲೆನಾಡು ಸೇರಿದಂತೆ ರಾಜ್ಯದೆಲ್ಲೆಡೆ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಲು ಶ್ರಮಿಸಿದ್ದನ್ನು ಕೂಡ ಕೈ ಮುಖಂಡರು ಪರಿಗಣಿಸಿದ್ದು, ಈ ನೆಲೆಯಲ್ಲಿ ಅವರಿಗೆ ಟಿಕೆಟ್ ದೊರೆಯುವ ಸಾಧ್ಯತೆ ಹೆಚ್ಚಿದೆ. ಅಲ್ಲದೆ ರಾಜ್ಯದ ಎಲ್ಲ ಕಡೆ ಬಿಜೆಪಿ ನ್ಯೂನ್ಯತೆ, ನಾಯಕರ ಒಳ ಹುಳುಕನ್ನು ಸಮರ್ಥವಾಗಿ ವೇದಿಕೆಗಳಲ್ಲಿ ಮಂಡಿಸಿ ಕೇಸರಿ ಪಕ್ಷವನ್ನು ಕಟ್ಟಿ ಹಾಕಬಲ್ಲರು ಎಂಬುದು ಅವರ ಪ್ಲಸ್ ಪಾಯಿಂಟ್.
ಕರಾವಳಿ, ಮಲೆನಾಡಿನ ಸಮಸ್ಯೆಗಳ ಅರಿವಿರುವ ನಾಯಕ: ಸ್ವತಃ ವಕೀಲರಾಗಿರುವ ಮುರೊಳ್ಳಿ ಅವರಿಗೆ ಮಲೆನಾಡು ಭಾಗದಲ್ಲಿ ತೀವ್ರವಾಗಿರುವ ಅಡಕೆ ಹಳದಿರೋಗ, ಅರಣ್ಯ ಕಾಯ್ದೆ ಸಮಸ್ಯೆ, ಕಾಫಿ ಬೆಳೆಗಾರರ ವಿವಿಧ ತೊಂದರೆಗಳ ಬಗ್ಗೆ ಆಳವಾದ ಅರಿವಿದೆ. ಅದೇ ಕರಾವಳಿ ಭಾಗದಲ್ಲಿ ಮೀನುಗಾರರು ಸೇರಿದಂತೆ ವಿವಿಧ ಸಮುದಾಯಗಳ ಕುಂದು ಕೊರತೆ ಗೊತ್ತಿದೆ ಎಂಬುದು ಅವರ ಶಕ್ತಿ.
ಅಂಶುಮತ್ ಗೌಡ: ಕೈ ಅಭ್ಯರ್ಥಿಯಾಗಿ ಗೌಡ ಸಮುದಾಯದ ಡಾ. ಅಂಶುಮತ್ ಗೌಡ ಅವರ ಹೆಸರು ಕೇಳಿಬರುತ್ತಿದೆ. ವಿಜಯಕುಮಾರ್ ಅವರಿಂದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷಗಿರಿ ಸ್ವೀಕರಿಸಿದ ಬಳಿಕ ಅಂಶುಮತ್ ಗೌಡ ಅವರು ಚಿಕ್ಕಮಗಳೂರಿನ ಐದೂ ಕ್ಷೇತ್ರಗಳಲ್ಲಿ ಪಕ್ಷ ಗೆಲುವು ಸಾಧಿಸಿದೆ. ಅವರನ್ನು ಉಡುಪಿ ಚಿಕ್ಕಮಗಳೂರು ಕ್ಷೇತ್ರದಿಂದ ಕಣಕ್ಕಿಳಿಸುವ ಮಾತುಗಳು ಕೇಳಿ ಬರುತ್ತಿವೆ.
ಜಯಪ್ರಕಾಶ್ ಹೆಗ್ಡೆ ಕೈ ಪಕ್ಷಕ್ಕೆ ಬರುತ್ತಾರೆಯೇ: ಮಾಜಿ ಸಚಿವ, ಪ್ರಸ್ತುತ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿರುವ ಜಯಪ್ರಕಾಶ್ ಹೆಗ್ಡೆ ಅವರ ಅಧಿಕಾರ ಅವಧಿ 2024ರ ಜ.31ರ ವರೆಗೆ ಇದೆ. ಹೆಗ್ಡೆ ಅವರು ಪ್ರಸ್ತುತ ಬಿಜೆಪಿ ಪಕ್ಷದಲ್ಲಿದ್ದಾರೆ. ಹೆಗ್ಡೆ ಅವರನ್ನು ಕೈ ಪಕ್ಷಕ್ಕೆ ಸೇರ್ಪಡೆ ಮಾಡಿ ಚಿಕ್ಕಮಗಳೂರು -ಉಡುಪಿ ಲೋಕಸಭೆ ಕ್ಷೇತ್ರದಿಂದ ಸ್ಪರ್ಧೆ ಮಾಡಬೇಕು ಎಂದು ಹಲವು ಕಾಂಗ್ರೆಸ್ ಕಾರ್ಯಕರ್ತರು ಒತ್ತಾಯ ಮಾಡುತ್ತಿರುವುದು ಸುಳ್ಳೇನಲ್ಲ.