ಉಡುಪಿ: ಗದ್ದೆ ಉಳುಮೆ ಮಾಡುವಾಗ ಕಳೆದು ಹೋಗಿದ್ದ 25 ಸಾವಿರ ರೂ. ಹಣದ ಕಂತೆ ಕೊರಗಜ್ಜನಿಗೆ ಹರಕೆ ಹೇಳಿಕೊಂಡ ಕೆಲವೇ ಕ್ಷಣದಲ್ಲಿ ಪತ್ತೆಯಾದ ಘಟನೆ ಬ್ರಹ್ಮಾವರ ಸಮೀಪ ಸೋಮವಾರ ಸಂಭವಿಸಿದೆ.
ಬ್ರಹ್ಮಾವರ ಸಮೀಪ ಕುಡುಂಜೆಗೆ ಉಳುಮೆ ಮಾಡಲು ಶಿವಮೊಗ್ಗದ ಟ್ರ್ಯಾಕ್ಟರ್ ತರಿಸಲಾಗಿತ್ತು. ಗಣೇಶ್ ಎಂಬವರು ಉಳುಮೆ ಮಾಡುತ್ತಿದ್ದರು. ಉಳುಮೆ ಮುಗಿಸಿದ ಬಳಿಕ ಟ್ರ್ಯಾಕ್ಟರ್‌ನಲ್ಲಿಟ್ಟಿದ್ದ ಹಣದ ಚೀಲ ನೋಡಿದಾಗ ಅದು ನಾಪತ್ತೆಯಾಗಿತ್ತು. ಚೀಲದಲ್ಲಿ ಬೇರೆ ಬೇರೆ ಕಡೆ ಉಳುಮೆ ಮಾಡಿದ ಸುಮಾರು 25 ಸಾವಿರ ರೂ. ಇತ್ತು. ಗಳಿಕೆಯನ್ನೆಲ್ಲ ಪ್ಲಾಸ್ಟಿಕ್ ಚೀಲದಲ್ಲಿಟ್ಟು ಗಣೇಶ್ ತನ್ನ ಟ್ರ್ಯಾಕ್ಟರ್‌ನಲ್ಲೇ ಇಟ್ಟುಕೊಳ್ಳುತ್ತಿದ್ದರು.
ಗಾಬರಿಯಾದ ಅವರು ಹತ್ತಾರು ಜನರೊಂದಿಗೆ ಸೆರಿ ಇಡೀ ಗದ್ದೆಯನ್ನು ಜಾಲಾಡಿದರೂ ಕಳೆದುಹೋದ ಹಣದ ಚೀಲ ಸಿಗಲಿಲ್ಲ. ಆಗ ಅಲ್ಲಿಗೆ ಬಂದ ಕೊರಗಜ್ಜನ ಭಕ್ತ ಮಹೇಶ್ ಶೆಟ್ಟಿ ಎಂಬವರು ಕೊರಗಜ್ಜನಿಗೆ ಹರಕೆ ಹೇಳಿಕೊಳ್ಳುವ, ಹಣ ಸಿಕ್ಕಿದರೆ ಶೇಂದಿ, ಬೀಡಾ, ಚಕ್ಕುಲಿ ಮತ್ತು 1 ಸಾವಿರ ರೂ. ಕೊಡುವ ಎಂದು ಹೇಳಿದರು. ಹರಕೆ ಹೇಳಿದ ಬಳಿಕ ಹುಡುಕಾಟ ಶುರುಮಾಡಿ ನಾಲ್ಕು ಹೆಜ್ಜೆ ಹಾಕುವಷ್ಟರಲ್ಲಿ ಹಣದ ಚೀಲ ಕಾಲಿಗೆ ತೊಡರಿತು. ಇದು ಕೊರಗಜ್ಜನ ಮಹಿಮೆ ಎಂದೇ ಜನ ಭಾವಿಸಿದ್ದಾರೆ.