ಉಡುಪಿ: ದೋಣಿಯಲ್ಲಿ ಮೀನು ಹಿಡಿಯಲು ತೆರಳಿದ್ದ ಯುವಕರಿಬ್ಬರು ನದಿಯಲ್ಲಿ ಮುಳುಗಿ ಸಾವನ್ನಪ್ಪಿರುವ ದಾರುಣ ಘಟನೆ ಬಾರ್ಕೂರು ಹೊಸಾಳ ಸಮೀಪದ ಸೀತಾ ನದಿಯಲ್ಲಿ ಮಾ.26ರಂದು ನಡೆದಿದೆ.ಮೃತರನ್ನು ಹೊಸಾಳ ನಿವಾಸಿಗಳಾದ ಪ್ರಶಾಂತ (35) ಹಾಗೂ ಶ್ರೀಶಾ(21) ಎಂದು ತಿಳಿದು ಬಂದಿದೆ.
ಇಂದು ಬೆಳಿಗ್ಗೆ 9 ಗಂಟೆಯ ಸುಮಾರಿಗೆ ಪ್ರಶಾಂತ್ ಹಾಗೂ ಶ್ರೀಶಾ ಎಂಬವರು ಮನೆ ಸಮೀಪದ ಸೀತಾ ನದಿಗೆ ಮೀನು ಹಿಡಿಯಲು ತೆರಳಿದ್ದರು. ದೋಣಿಯಲ್ಲಿ ಮೀನಿಗಾಗಿ ಬಲೆ ಹಾಕುತ್ತಿರುವ ಸಂದರ್ಭದಲ್ಲಿ ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿದ್ದಾರೆ ಎನ್ನಲಾಗಿದೆ.
ಸಮೀಪದಲ್ಲೇ ಬಟ್ಟೆ ತೊಳೆಯುತ್ತಿದ್ದ ಮಹಿಳೆ ಗಮನಿಸಿ ಸ್ಥಳೀಯರಿಗೆ ಸುದ್ದಿ ಮುಟ್ಟಿಸಿದ್ದರು. ಆದರೆ, ಸ್ಥಳೀಯರು ಸ್ಥಳಕ್ಕೆ ಧಾವಿಸುವಷ್ಟರಲ್ಲೇ ಇಬ್ಬರ ಪ್ರಾಣಪಕ್ಷಿ ಹಾರಿಹೋಗಿತ್ತು. ಬ್ರಹ್ಮಾವರ ಠಾಣಾಧಿಕಾರಿ ಮಧು ಪಿ.ಎಸ್ ಹಾಗೂ ಸಿಬ್ಬಂದಿ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.