ತುಮಕೂರು: ಬೆಂಗಳೂರಿನಲ್ಲಿ ನಡೆಯುತ್ತಿರುವ ಕಂಬಳವನ್ನು ವೀಕ್ಷಿಸಿ ವಾಪಸ್ ಹೋಗುವಾಗ ಕಾರು-ಲಾರಿ ಡಿಕ್ಕಿಯಾಗಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು, ಮೂವರಿಗೆ ಗಂಭೀರ ಗಾಯಗಳಾದ ಘಟನೆ ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ಚಿಗಣಿಪಾಳ್ಯ ಬಳಿ ನಡೆದಿದೆ.
ನ.25ರಂದು ರಾತ್ರಿ ಕಂಬಳ ನೋಡಿದ ಐವರು ಕಾರಿನಲ್ಲಿ ಮಂಗಳೂರಿಗೆ ವಾಪಸಾಗುತ್ತಿದ್ದರು. ಇದೇ ವೇಳೆ ಕಾರು ಹಾಗೂ ಬೋರ್ವೆಲ್ ಕೊರೆಯುವ ಲಾರಿ ಡಿಕ್ಕಿಯಾಗಿವೆ. ಮಂಗಳೂರಿನ ಪರೆರಾರ ಬಜಪ್ಪೆ ಗ್ರಾಮದ ವಾಸಿ ಕಿಶಾನ್ ಶೆಟ್ಟಿ(20) ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಭಟ್ಟರ ತೋಟ ಗ್ರಾಮದ ವಾಸಿ ಫಿಲಿಪ್ ನೇರಿ (32) ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಗಂಭೀರವಾಗಿ ಗಾಯಗೊಂಡಿರುವ ಮೂವರನ್ನು ಆದಿಚುಂಚನಗಿರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಕುಣಿಗಲ್ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.