ಸೇವೆ ಮೂಲಕ ಬಂಧುತ್ವ ನೆಲೆಯಾಗಲಿ: ವಿದ್ಯಾಧರ್
ಉಳ್ಳಾಲ: ಹಿಂದಿನ ಕಾಲದಲ್ಲಿ ಕೂಡು ಕುಟುಂಬ ಪದ್ದತಿ ಇದ್ದರೆ ಇಂದಿನ ಆಧುನಿಕ ಕಾಲಘಟ್ಟದಲ್ಲಿ ಸ್ವಾರ್ಥ ಜೀವನಕ್ಕೆ ಮಾರುಹೋಗಿ ಮಕ್ಕಳಿಗೆ ಕುಟುಂಬದ ಪರಿಚಯವೇ ಇಲ್ಲದಂತಾಗಿದೆ ಬಂಧುತ್ವದ ಮೂಲಕ ಪರಸ್ಪರ ಪರಿಚಯ ಮಾಡುವ, ಸಮಾಜ ಕಟ್ಟುವ ಕೆಲಸ ನಡೆಯಲಿ ಎಂದು ಪೊಸಕುರಲ್ ನಿರ್ದೇಶಕ ವಿದ್ಯಾಧರ್ ಶೆಟ್ಟಿ ಅಭಿಪ್ರಾಯಪಟ್ಟರು.
ಬಂಧುತ್ವ ಚಾರಿಟೇಬಲ್ ಟ್ರಸ್ಟ್ ಉದ್ಘಾಟನೆ ಪ್ರಯುಕ್ತ ಬಬ್ಬುಕಟ್ಟೆ ಅಲ್ ಫುರ್ಕಾನ್ ಅರೆಬಿಕ್ ಇನ್ಸ್ ಟಿಟ್ಯೂಷನ್ ಸಭಾಂಗಣದಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಆರ್ಥಿಕವಾಗಿ ಹಿಂದುಳಿದ ಕುಟುಂಬದ ವಿದ್ಯಾರ್ಥಿಗಳಿಗೆ ಬ್ಯಾಗ್, ಕಲಿಕಾ ಸಾಮಗ್ರಿ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಜಮಾಅತೇ ಇಸ್ಲಾಮೀ ಹಿಂದ್ ಉಳ್ಳಾಲ ಘಟಕಾಧ್ಯಕ್ಷ ಅಬ್ದುಲ್ ಕರೀಂ ಮಾತನಾಡಿ, ಬಡವರು, ನಿರ್ಗತಿಕರತ್ತ ನಿರ್ಲಕ್ಷ್ಯ ತಾಳಿ ನಿರ್ವಹಿಸುವ ನಮಾಝ್ ಗೆ ಇಸ್ಲಾಮಿನಲ್ಲಿ ಯಾವುದೇ ಸ್ಥಾನ ಇಲ್ಲ. ಜನರ ನಡುವೆ ರಾಜಕೀಯ, ಜಾತಿ, ಧರ್ಮದ ಗೋಡೆ ಕಟ್ಟಿ ಬಂಧುತ್ವದಿಂದ ದೂರ ಮಾಡುವ ಮನಸ್ಸು ಸಮಾಜಕ್ಕೆ ಅಪಾಯಕಾರಿ ಎಂದರು.
ಬಂಧುತ್ವ ಚಾರಿಟೇಬಲ್ ಟ್ರಸ್ಟ್ ಇಸ್ಮಾಯಿಲ್ ಶಾಫಿ ಬಬ್ಬುಕಟ್ಟೆ ಅಧ್ಯಕ್ಷತೆ ವಹಿಸಿ, ಅಹಂಭಾವ ಎನ್ನುವುದು ಸಮಾಜ ಸೇವಕರ ಮನದಲ್ಲಿರಬಾರದು. ಸಮಾಜ ಸೇವಕರ ಸಂಖ್ಯೆ ಹೆಚ್ಚಾದಾಗ ಬಡವರು, ನಿರ್ಗತಿಕರು, ಅನರಕ್ಷರಸ್ಥರ ಸಂಖ್ಯೆ ಕಡಿಮೆಯಾಗುತ್ತದೆ. ನಮ್ಮಲ್ಲಿ ಹಣ, ಆಸ್ತಿ, ಸಂಪತ್ತು ಇಲ್ಲದಿದ್ದರೂ ಇನ್ನೊಬ್ಬರ ಕಣ್ಣೀರು ಒರೆಸುವುದು ದೇವರು ಕೊಡುವ ದೊಡ್ಡ ವರ. ಕಲಿಕಾ ಸಾಮಗ್ರಿ ನೀಡುವುದರ ಹಿಂದೆ ಯಾರದ್ದೋ ಬೆವರು ಇದೆ, ಇದನ್ನು ಮಕ್ಕಳು ಮತ್ತು ಪೋಷಕರು ತಿಳಿದಿರಬೇಕು ಎಂದು ತಿಳಿಸಿದರು.
ಈ ಸಂದರ್ಭ ಟ್ರಸ್ಟ್ ನ ಲಾಂಛನ ಅನಾವರಣಗೊಳಿಸಲಾಯಿತು.
ತೊಕ್ಕೊಟ್ಟು ಮಸ್ಜಿದುಲ್ ಹುದಾ ಅಧ್ಯಕ್ಷ ಯು.ಎನ್.ಹಸನಬ್ಬ, ಕಾಂಗ್ರೆಸ್ ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯ ಸಲೀಂ ಮೇಗಾ, ಅಬ್ದುಲ್ ಅಝೀಝ್ ಝುಹ್ರಿ ಪುಣಚ, ಉದ್ಯಮಿ ಬದ್ರುದ್ದೀನ್, ಸಾಮಾಜಿಕ ಕಾರ್ಯಕರ್ತೆ ಮ್ಯಾಕ್ಸಿಂ ಡಿಸೋಜ, ಮಂಚಿಲ ಅಂಗನವಾಡಿ ಕಾರ್ಯಕರ್ತೆ ಸ್ವರ್ಣಲತಾ, ದಲಿತ ಸಂಘರ್ಷ ಸಮಿತಿಯ ಯಶೋಧ, ಇಲ್ಯಾಸ್ ಮೊದಲಾದವರು ಉಪಸ್ಥಿತರಿದ್ದರು.
ಅಬ್ಬಾಸ್ ಪಡಿಕ್ಕಲ್ ದುವಾ ನೆರವೇರಿಸಿದರು. ಸಂಶೀರ್ ಬುಡೋಳಿ ಕಾರ್ಯಕ್ರಮ ನಿರೂಪಿಸಿದರು.
Ansar Ino