ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಟ್ರೆಕಿಂಗ್, ರಸ್ತೆ ಬದಿಯ ಅಪಾಯಕಾರಿ ಸ್ಥಳಗಳಲ್ಲಿ ಸೆಲ್ಫಿ, ಫೋಟೋ ತೆಗೆಯುವುದನ್ನು ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದು, ಈ ನಿಷೇಧವನ್ನು ಪಾಲನೆ ಮಾಡದೇ ಕುಕ್ಕೆ ಸುಬ್ರಹ್ಮಣ್ಯ, ಚಾರ್ಮಾಡಿ ಸೇರಿದಂತೆ ರಸ್ತೆ ಬದಿಗಳಲ್ಲಿ ಕಾರು ನಿಲ್ಲಿಸಿ ಅಕ್ರಮವಾಗಿ ಕಾಡು ಪ್ರವೇಶಿಸುವುದು, ಚಾರಣ ಹೋಗುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಮುಲ್ಲೈ ಮುಗಿಲನ್ ತಿಳಿಸಿದ್ದಾರೆ.
ಪ್ರಾಕೃತಿಕ ವಿಕೋಪ ವಿಚಾರ ಕುರಿತಂತೆ ಜಿಲ್ಲಾಡಳಿತ ಸುದ್ದಿಗೋಷ್ಠಿ ನಡೆಸಿದ್ದು, ದ.ಕ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಕಮಿಷನರ್ ಕುಲದೀಪ್ ಜೈನ್, ಎಸ್ಪಿ ರಿಷ್ಯಂತ್ ಜಂಟಿ ಸುದ್ದಿಗೋಷ್ಠಿ ನಡೆಸಿದರು. ಗ್ರಾ.ಪಂ, ನಗರಸಭೆ, ಪಾಲಿಕೆ ಸೇರಿ 296 ಕಡೆ ತಂಡ ರಚಿಸಲಾಗಿದೆ. ಈ ಕುರಿತು ಡಿಸಿ ಕಚೇರಿಯಲ್ಲಿ ಮೇಲ್ವಿಚಾರಣೆ ಮಾಡಲಾಗುತ್ತದೆ. ಸ್ಥಳೀಯ ಮಟ್ಟದಲ್ಲಿಯೂ ಇದಕ್ಕೆ ಅನುದಾನ ಒದಗಿಸಲಾಗುತ್ತದೆ ಎಂದು ತಿಳಿಸಿದರು. ಅಪಾಯಕಾರಿ ಜಾಗದಲ್ಲಿ ವಾಸವಿರುವವರು ಸ್ಥಳಾಂತರಕ್ಕೆ ಒಪ್ಪದಿದ್ದಲ್ಲಿ ಪೊಲೀಸ್ ಬಲ ಪ್ರಯೋಗಿಸಿ ಸ್ಥಳಾಂತರ ಮಾಡುತ್ತೇವೆ ಎಂದರು.
ಜಿಲ್ಲೆಯಲ್ಲಿ ಭೂ ಕುಸಿತ ಸಾಧ್ಯತೆಯ ರಸ್ತೆ ಸೇರಿ 87 ಜಾಗ ಗುರುತಿಸಲಾಗಿದೆ. ಚಾರ್ಮಾಡಿ ಘಾಟನಲ್ಲಿ ಇಂತಹ 34 ಜಾಗಗಳಿವೆ. ರೆಡ್ ಅಲರ್ಟ್ ಇರುವಾಗ ಈ ರಸ್ತೆಗಳಲ್ಲಿ ಪ್ರಯಾಣ ಆದಷ್ಟು ಮಾಡಬೇಡಿ ಎಂದು ಸೂಚಿಸಿದರು. ಅಲ್ಲದೆ ಯಾವುದೇ ರಸ್ತೆ ಬಿರುಕು ಬಿಟ್ಟಲ್ಲಿ 112 ನಂಬರ್ ಗೆ ಮಾಹಿತಿ ನೀಡಿ ಎಂದು ಮನವಿ ಮಾಡಿದರು.