Site icon newsroomkannada.com

ಲೇಡಿಹಿಲ್‌ನಲ್ಲಿ ಬಸ್‌ ತಂಗುದಾಣ ಸಮೀಪ ಧರೆಗುರುಳಿದ ಪುರಾತನ ಮರ

ಮಂಗಳೂರು: ಮಂಗಳೂರು ನಗರ ಸೇರಿ ಕರಾವಳಿಯಲ್ಲಿ ಭಾರಿ ಮಳೆಯಾಗುತ್ತಿದೆ.  ಹವಾಮಾನ ಇಲಾಖೆಯೂ ಈ ಬಗ್ಗೆ ಎಚ್ಚರಿಕೆ ನೀಡಿದೆ. ಭಾರಿ ಗಾಳಿ, ಮಳೆಯಿಂದ ನಗರದ ಹಲವು ಪ್ರದೇಶಗಳಲ್ಲಿ ವಿದ್ಯುತ್‌ ಸಮಸ್ಯೆ ಎದುರಾಗಿದೆ. ಗಾಳಿಯ ಅರ್ಭಟಕ್ಕೆ ಲೇಡಿಹಿಲ್‌ ಬಸ್‌ ಸ್ಟ್ಯಾಂಡ್‌ ಬಳಿಯಿದ್ದ ನೂರಾರು ವರ್ಷ ಹಳೆಯ ಮರವೊಂದು ಧರೆಗುರುಳಿದೆ. ಮರ ಉರುಳಿದ ಪರಿಣಾಮ ಕೆಲಹೊತ್ತು ಸಂಚಾರ ಅಸ್ತವ್ಯಸ್ತವಾಗಿತ್ತು.

ಅದೇ ರೀತಿ ಇಂದು ಮಧ್ಯಾಹ್ನ ಬೀಸಿದ ಭಾರೀ ಬಿರುಗಾಳಿಗೆ ತೊಕ್ಕೊಟ್ಟು ಟ್ರೈ ಓವರ್ ಬಳಿಯ ವಾಣಿಜ್ಯ ಕಟ್ಟಡವೊಂದರ ಮೂರನೇ ಮಹಡಿಯಲ್ಲಿ ಅಳವಡಿಸಿದ್ದ ಬೃಹತ್‌ ಹೋರ್ಡಿಂಗ್ ಮುರಿದು ಬಿದ್ದ ಪರಿಣಾಮ ಪಾದಚಾರಿ ವೃದ್ಧರೋರ್ವರು ಗಾಯಗೊಂಡಿದ್ದು, ತೊಕ್ಕೊಟ್ಟಿನಲ್ಲಿ ಕೆಲಹೊತ್ತು ರಾಷ್ಟ್ರೀಯ ಹೆದ್ದಾರಿ ಸಂಚಾರ ಅಸ್ತವ್ಯಸ್ತಗೊಂಡಿತ್ತು.

ಶನಿವಾರ ಮಧ್ಯಾಹ್ನ ಬೀಸಿದ ಬಿರುಗಾಳಿಗೆ ತೊಕ್ಕೊಟ್ಟಿನ ಗಂಗಾ ಕಾಂಪ್ಲೆಕ್ಸ್‌ ನ ಮೂರನೇ ಮಹಡಿಯಲ್ಲಿ ಅಳವಡಿಸಲಾಗಿದ್ದ ಬೃಹತ್ ಹೋರ್ಡಿಂಗ್ ಉರುಳಿ ಬಿದಿದೆ, ಅದೃಷ್ಟವಶಾತ್ ಹೋರ್ಡಿಂಗ್ ಕೆಳಗೆ ಬೀಳದೆ ಕಟ್ಟಡದಲ್ಲೇ ಜೋತು ಬಿದ್ದ ಪರಿಣಾಮ ಯಾವುದೇ ದೊಡ್ಡ ಹಾನಿ ಉಂಟಾಗಿಲ್ಲ, ತೊಕ್ಕೊಟ್ಟು ಒಳಪೇಟೆ ಸಂಪರ್ಕ ರಸ್ತೆಯ ಬದಿಯಲ್ಲಿ ಇರುವ ಕಾಂಪ್ಲೆಕ್ಸ್ ನಲ್ಲಿ ಘಟನೆ ಸಂಭವಿಸಿದೆ. ನಿತ್ಯವೂ ಈ ಭಾಗದಲ್ಲಿ ಜನ ಸಂಚರಿಸುತ್ತಿದ್ದು ಹೋರ್ಡಿಂಗ್ ನೆಲಕ್ಕೆ ಬೀಳದ ಕಾರಣ ಸಂಭಾವ್ಯ ಅನಾಹುತ ತಪ್ಪಿದೆ. ತೊಕ್ಕೊಟ್ಟು ಒಳಪೇಟೆಯಿಂದ ಹೆದ್ದಾರಿಗೆ ಬರುತ್ತಿದ್ದ ವೃದ್ಧರೋರ್ವರ ಮೈಗೆ ಹೋರ್ಡಿಂಗ್‌ನ ಕಬ್ಬಿಣದ ಸಲಾಕೆ ಬಿದ್ದು ಗಾಯವಾಗಿದ್ದು ಅವರನ್ನ ಆಸ್ಪತ್ರೆಗೆ ದಾಖಲಿಸಲಾಗಿದೆ. ಜಿಟಿ ಜಿಟಿ ಸುರಿಯುತ್ತಿರುವ ಮಳೆಯ ನಡುವೆ ಕ್ರೇನ್ ಮುಖಾಂತರ ಹೋರ್ಡಿಂಗನ್ನ ತೆರವುಗೊಳಿಸುವ ಕಾರ್ಯಾಚರಣೆ ನಡೆಯುತ್ತಿದ್ದು ವಾಹನ ಸಂಚಾರದಲ್ಲಿ ವ್ಯತ್ಯಯ ಆಗಿದೆ. ಉಳ್ಳಾಲ ಮತ್ತು ಟ್ರಾಫಿಕ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.

Exit mobile version