ರಾಮನಗರ: ಟ್ರೆಕ್ಕಿಂಗ್ ವೇಳೆ ಕಾಡುದಾರಿ ತಪ್ಪಿದ್ದ 6 ಯುವತಿಯರನ್ನು ಪ್ರಾಣದ ಹಂಗು ತೊರೆದು ಪೊಲೀಸರು ರಕ್ಷಣೆ ಮಾಡಿರುವಂತಹ ಘಟನೆ ನಡೆದಿದೆ. ರಾಮನಗರ ತಾಲೂಕಿನ ಹಂದಿಗುಂದಿ ಬೆಟ್ಟಕ್ಕೆ ಬೆಂಗಳೂರಿನಿಂದ 6 ಯುವತಿಯರ ತಂಡ ನಿನ್ನೆ ಚಾರಣಕ್ಕೆ ಬಂದಿದ್ದಾರೆ. ಈ ವೇಳೆ ದಾರಿ ತಪ್ಪಿ ಬೇರೊಂದು ಬೆಟ್ಟಕ್ಕೆ ತೆರಳಿದ್ದಾರೆ. ಬಂದ ದಾರಿಯಲ್ಲಿ ವಾಪಾಸ್ ಹೋಗಲು ಆಗದೇ ಹಲವು ಗಂಟೆ ಆತಂಕಗೊಂಡಿದ್ದಾರೆ. ದಿನವೆಲ್ಲ ಸುತ್ತಾಡಿ ಸಂಜೆಯಾಗುತ್ತಿದ್ದಂತೆ ಕೊನೆಗೆ ದಾರಿ ಕಾಣದೆ ಪರದಾಡಿದ್ದಾರೆ.
6 ಯುವತಿಯರು ಬನ್ನೇರುಘಟ್ಟ ರಸ್ತೆ ಹೊರಮಾವು ಬಳಿಯ ನಿವಾಸಿಗಳು ಎನ್ನಲಾಗುತ್ತಿದೆ. ರಾಮನಗರ ಬಸವನಪುರ ಬಳಿ ಕಾರು ನಿಲ್ಲಿಸಿ ನಿನ್ನೆ ಬೆಳಿಗ್ಗೆ 10 ಗಂಟೆಗೆ ಟ್ರಕ್ಕಿಂಗ್ ತೆರಳಿದ್ದರು. ಮಧ್ಯಾಹ್ನದ ವೇಳೆ ಬೆಟ್ಟ ಇಳಿದು ವಾಪಾಸ್ ಆಗುತ್ತಿದ್ದು, ಎಷ್ಟೇ ನಡೆದರೂ ಹೆದ್ದಾರಿ ಸಿಗದ ಕಾರಣ ಹೈರಾಣಗಿದ್ದಾರೆ. ರಾತ್ರಿ ಆದರೂ ಕಾಡಿನಲ್ಲೇ ಸುತ್ತಾಡಿದ್ದಾರೆ. ಮತ್ತೆ ವಾಪಾಸ್ ಬೆಟ್ಟ ಹತ್ತಿ 112ಗೆ ಕರೆ ಮಾಡಿದ್ದಾರೆ.
ಇತ್ತ ಕರ್ತವ್ಯ ನಿರ್ವಹಿಸುತ್ತಿದ್ದ ರಾಜೇಶ್ ಹಾಗೂ ರಮೇಶ್ ಎಂಬುವವರು ಯುವತಿಯರಿಗೆ ಧೈರ್ಯ ತುಂಬಿದ್ದಾರೆ. ಬಳಿಕ ವಾಹನ ತೆರಳಲು ಸಾಧ್ಯವಾಗದೆ ಸ್ಥಳಕ್ಕೆ ಸ್ಥಳಿಯರ ಸಹಾಯದಿಂದ ಕಾಲ್ನಡಿಗೆಯಲ್ಲೇ ಪೊಲೀಸರು ತೆರಳಿದ್ದಾರೆ. ಕಾಡಾನೆ ಪ್ರದೇಶ ಹಿನ್ನೆಲೆ ಯುವತಿಯರು ಬಹಳಷ್ಟು ಭಯ ಪಟ್ಟಿದ್ದರು. ರಾತ್ರಿ 8:3೦ರ ವೇಳೆಗೆ ಬೆಟ್ಟದ ತುದಿಯಲ್ಲಿ ಯುವತಿಯರ ರಕ್ಷಣೆ ಮಾಡಲಾಗಿದೆ. ಪೊಲೀಸರು ಆಗಮನದ ನಂತರ ಯುವತಿಯರು ನಿಟ್ಟುಸಿರು ಬಿಟ್ಟಿದ್ದಾರೆ.