ಪುಣೆ: ತರಕಾರಿ ಮಾರುಕಟ್ಟೆಯಲ್ಲಿ ಟೊಮೆಟೊ ದಾಖಲೆ ಬೆಲೆಗೆ ಮಾರಾಟವಾಗುತ್ತಿದ್ದು, ಗ್ರಾಹಕರ ಕೈ ಸುಡುತ್ತಿದೆ. ಅಗತ್ಯ ತರಕಾರಿಗಳಲ್ಲಿ ಒಂದಾದ ಟೊಮೆಟೊ ಖರೀದಿಸಲು ಗ್ರಾಹಕರು ಹಿಂದೇಟು ಹಾಕುತ್ತಿದ್ದಾರೆ. ಗ್ರಾಹಕರ ಜೇಬಿಗೆ ಕತ್ತರಿ ಬಿದ್ದಿದ್ದರೂ ಟೊಮ್ಯಾಟೋ ಬೆಳೆಗಾರರು ಕೊನೆಗೂ ಲಾಭದ ಮುಖ ನೋಡುತ್ತಿರುವ ಖುಷಿಯಲ್ಲಿದ್ದಾರೆ.
ಮಹಾರಾಷ್ಟ್ರದ ಪುಣೆ ಜಿಲ್ಲೆಯಲ್ಲಿ ರೈತರೊಬ್ಬರಿಗೆ ಟೊಮ್ಯಾಟೋ ಜಾಕ್‌ಪಾಟ್ ಹೊಡೆದಿದೆ. ತುಕಾರಾಂ ಭಾಗೋಜಿ ಗಾಯಕರ್ ಮತ್ತು ಅವರ ಕುಟುಂಬವು ಒಂದು ತಿಂಗಳಲ್ಲಿ 13 ಸಾವಿರ ಟೊಮ್ಯಾಟೋ ಕ್ರೇಟ್‌ಗಳನ್ನು ಮಾರಾಟ ಮಾಡಿ 1.5 ಕೋಟಿ ರೂಪಾಯಿಗೂ ಆದಾಯ ಗಳಿಸಿದೆ.
ತುಕಾರಾಂ ಅವರ ಬಳಿ 18 ಎಕರೆ ಕೃಷಿ ಜಮೀನಿದೆ. ಅದರಲ್ಲಿ ಅವರು 12 ಎಕರೆ ಜಾಗದಲ್ಲಿ ಟೊಮ್ಯಾಟೋ ಬೆಳೆಯುತ್ತಿದ್ದಾರೆ. ಅವರಿಗೆ ಅವರ ಮಗ ಈಶ್ವರ್ ಗಾಯಕರ್ ಮತ್ತು ಸೊಸೆ ಸೊನಾಲಿ ನೆರವಾಗುತ್ತಿದ್ದಾರೆ. ತಾವು ಉತ್ತಮ ಗುಣಮಟ್ಟದ ಟೊಮ್ಯಾಟೋ ಬೆಳೆಯುತ್ತಿರುವುದಾಗಿ ಹೇಳಿರುವ ಕುಟುಂಬ, ತಮ್ಮ ಬೆಳೆಗೆ ಕೀಟಗಳ ಹಾವಳಿ ಬಾರದಂತೆ ರಸಗೊಬ್ಬರ ಹಾಗೂ ಕೀಟನಾಶಗಳನ್ನು ಬಳಸುತ್ತಿರುವುದಾಗಿ ತಿಳಿಸಿದೆ.
ರೈತ ತುಕಾರಾಂ ಅವರು ಒಂದು ಟೊಮ್ಯಾಟೋ ಕ್ರೇಟ್ ಮಾರಾಟದಿಂದ ಪ್ರತಿದಿನ 2,100 ರೂ ಸಂಪಾದಿಸುತ್ತಿದ್ದಾರೆ. ಶುಕ್ರವಾರ ಒಂದೇ ದಿನ ಒಟ್ಟು 900 ಕ್ರೇಟ್‌ಗಳಷ್ಟು ಮಾರಾಟ ಮಾಡಿರುವ ಈ ಕುಟುಂಬ, ಒಂದೇ ದಿನದಲ್ಲಿ 18 ಲಕ್ಷ ರೂ ಜೇಬಿಗಿಳಿಸಿದೆ.